ಗುರುವಾರ , ಮಾರ್ಚ್ 30, 2023
24 °C

ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತಂಕ ಬೇಡ: ತಹಶೀಲ್ದಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ಜುಲೈ 19 ಮತ್ತು 22ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ಹಾಗೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಪಾಲಕರು ಹಾಗೂ ವಿದ್ಯಾರ್ಥಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ಹೇಳಿದರು.

ಪರೀಕ್ಷೆ ಕುರಿತು ತಹಶೀಲ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳ ಹಿತದೃಷ್ಟಿಯಿಂದ ಕೇವಲ ಎರಡೇ ದಿನಕ್ಕೆ ಪರೀಕ್ಷೆಯನ್ನು ಸೀಮಿತಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲು ಸರ್ವ ಸಿದ್ಧತೆ ಮಾಡಲಾಗಿದೆ. ಸಹಾಯ ಕೇಂದ್ರವನ್ನು ತೆರೆಯಲಾಗುವುದು ವಿದ್ಯಾರ್ಥಿಗಳನ್ನು ಸರ್ವರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಿಯೇ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಮಾತನಾಡಿ, ಯಲಬುರ್ಗಾ ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಪ್ರೌಢ ಶಾಲೆ, ಮಂಜುನಾಥ ಪ್ರೌಢ ಶಾಲೆ, ಸಿದ್ದರಾಮೇಶ್ವರ ಪ್ರೌಢ ಶಾಲೆ, ಬೇವೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಹಿರೇವಂಕಲಕುಂಟಾದ ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಧೋಳದ ತ್ರಿಲಿಂಗೇಶ್ವರ ಪ್ರೌಢ ಶಾಲೆ, ಹಿರೇಅರಳಿಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಳೂಟಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಗುನ್ನಾಳದ ಸರ್ಕಾರಿ ಪ್ರೌಢ ಶಾಲೆ, ತಾಳಕೇರಿಯ ಸರ್ಕಾರಿ ಪ್ರೌಢ ಶಾಲೆ, ಯಲಬುರ್ಗಾದ ಎಸ್ ಎ.ನಿಂಗೋಜಿ ಪ್ರೌಢ ಶಾಲೆ(ಖಾಸಗಿ ಅಭ್ಯರ್ಥಿಗಳಿಗಾಗಿ) ಸೇರಿ ಒಟ್ಟು 12 ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಪರೀಕ್ಷೆಯಲ್ಲಿ 179 ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು 2782 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಆರೋಗ್ಯ ಪರೀಕ್ಷಾ ಕೇಂದ್ರ, ಐಸೋಲೇಷನ್ ಕೊಠಡಿ ವ್ಯವಸ್ಥೆ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಎರಡು ಕೊಠಡಿಗಳು ಸೇರಿ ಕೋವಿಡ್ ನಿಯಮಾನುಸಾರ ಪರೀಕ್ಷೆ ನಡೆಸಲಾಗುವುದು ಎಂದರು.

ಸಿಪಿಐ ಎಂ.ನಾಗರೆಡ್ಡಿ ಮಾತನಾಡಿ, ಮಕ್ಕಳ ಹಿತದೃಷ್ಟಿಯಿಂದ ಶಾಂತಿ ಸುವ್ಯವಸ್ಥೆ ಕಾಪಾಡಲಾಗುವುದು ಎಂದರು. ತಾಲ್ಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ ಬ್ಯಾಲಹುಣಸಿ, ಶಿಕ್ಷಣ ಇಲಾಖೆಯ ಸುರೇಶ ಮಾದಿನೂರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವ್ಹಿ. ಧರಣಾ, ಸರಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಜಿಪಾಟೀಲ, ಸಿದ್ದಲಿಂಗಪ್ಪ ಶ್ಯಾಗೋಟಿ, ಅಧಿಕಾರಿಗಳಾದ ಎಸ್.ವ್ಹಿ,ಬಡಿಗೇರ, ಎಸ್.ಬಿ.ಭಜಂತ್ರಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು