ಕೊಪ್ಪಳ: ‘ಜಿಲ್ಲೆಯ ಎಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜಿಲ್ಲೆಯನ್ನು ರಾಜ್ಯದಲ್ಲಿಯೇ ಮೊದಲ ಕ್ಷಯ ಮುಕ್ತ ಜಿಲ್ಲೆಯಾಗಿಸಲು ಪಣ ತೊಡಬೇಕಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಲಕಾನಂದ ಡಿ.ಮಳಗಿ ಹೇಳಿದರು.
ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಇಲ್ಲಿನ ಸಾಹಿತ್ಯ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಶಶಿಧರ ಎ. ಪ್ರಾಸ್ತಾವಿಕವಾಗಿ ಮಾತನಾಡಿ ‘ಕ್ಷಯರೋಗ ನಿರ್ಮೂಲನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ‘ಹೌದು ನಾವು ಕ್ಷಯರೋಗ ಕೊನೆಗಾಣಿಸೋಣ’ ಎನ್ನುವ 2023ರ ಘೋಷವಾಕ್ಯದೊಂದಿಗೆ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಬೇಕಾಗಿದೆ’ ಎಂದರು.
ವಿಶೇಷ ಆಹ್ವಾನಿತರಾಗಿದ್ದ ಜಿಲ್ಲಾ ಕ್ಷಯಮುಕ್ತ ಆಂದೋಲನದ ರಾಯಭಾರಿ ಹಾಸ್ಯ ಕಲಾವಿದ ಬಿ. ಪ್ರಾಣೇಶ್ ‘ಕ್ಷಯರೋಗ ನಿರ್ಮೂಲನೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಭಾರತ ಸರ್ಕಾರದ ಕ್ಷಯಮುಕ್ತ ಕನಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಮಾಜದ ಸ್ವಾಸ್ಥ್ಯ ಪೌಷ್ಟಿಕ ಆಹಾರ ಸೇವನೆಯಲ್ಲಿ ಅಡಗಿರುವ ಕಾರಣ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಸಮಾಜವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದರು.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಲ್ಲಿ ಉತ್ತಮ ಪ್ರಗತಿ ಸಾಧಿಸಿದ ಹಾಗೂ ಉತ್ತಮ ಕಾರ್ಯನಿರ್ವಹಣೆಗಾಗಿ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆ, ಮುನಿರಾಬಾದ್ ಸಮುದಾಯ ಆರೋಗ್ಯ ಕೇಂದ್ರ, ಚಿಕೇನಕೊಪ್ಪ ಪ್ರಾಥಮಿಕ ಅರೋಗ್ಯ ಕೇಂದ್ರ ಹಾಗೂ ವೈಯುಕ್ತಿಕ ವಿಭಾಗದಲ್ಲಿ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಹುಸೇನ ಬಾಷಾ, ಹಿರಿಯ ಪ್ರಯೋಗಶಾಲಾ ಮೇಲ್ವಿಚಾರಕ ಸೈಯದ್ ನೂರುಲ್ಲಾ, ಕ್ಷಯರೋಗ ಆರೋಗ್ಯ ಪರಿವೀಕ್ಷಕ ವೀರಭದ್ರಪ್ಪ ಹಾಗೂ ಕ್ಷಯರೋಗ ಆರೋಗ್ಯ ಪರಿವೀಕ್ಷಕ ಮಲ್ಲಿಕಾರ್ಜುನ ಹ್ಯಾಟಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ ಎಂ.ಎಚ್., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ವೆಂಕಟೇಶ ಕೆ., ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಶಶಿಧರ ಎ., ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ, ವಿಶ್ವ ಆರೋಗ್ಯ ಸಂಸ್ಥೆಯ ಬಳ್ಳಾರಿ ವಿಭಾಗದ ಸಲಹೆಗಾರ ಡಾ.ಹಂಸವೇಣಿ ಇದ್ದರು.
ಜಾಥಾ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್ ಮತ್ತು ಡಾ.ರವೀಂದ್ರನಾಥ ಎಂ.ಎಚ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.