ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದೊಳಗೆ ಎಡಿಎಲ್‌ಆರ್ ಕಚೇರಿ ಆರಂಭಿಸಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ಸೂಚನೆ
Last Updated 28 ಜೂನ್ 2022, 12:26 IST
ಅಕ್ಷರ ಗಾತ್ರ

ಕನಕಗಿರಿ: ‘ಭೂ ದಾಖಲೆಗಳ ಸಹಾಯಕ ನಿರ್ದೇಶಕರ ತಾಲ್ಲೂಕು ಕಚೇರಿ (ಎಡಿಎಲ್‌ಆರ್)ಯನ್ನು ಒಂದು ವಾರದೊಳಗೆ ಪಟ್ಟಣದಲ್ಲಿ ಆರಂಭಿಸಬೇಕು’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಕಲಕೇರಿ ರಸ್ತೆಯಲ್ಲಿರುವ ಸರ್ಕಾರಿ ಭೂಮಿಯನ್ನು ಪರಿಶೀಲಿಸಲಾಗಿದೆ. ಅಲ್ಲದೆ ಖಾಸಗಿ ವ್ಯಕ್ತಿಯೊಬ್ಬರ ಭೂಮಿಯನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ. ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಕೆಪಿಎಸ್ (ಪ್ರೌಢಶಾಲೆಯ) ಶಾಲೆಯ ಕೊಠಡಿಗಳಲ್ಲಿ ನಡೆಯುತ್ತಿರುವ ತಾಲ್ಲೂಕು ಪಂಚಾಯಿತಿ ಕಚೇರಿಯನ್ನು ಆದಷ್ಟು ಬೇಗನೆ ಸ್ಥಳಾಂತರ ಮಾಡಿಕೊಳ್ಳುವಂತೆ ತಾ.ಪಂ ಇಒ ಕಾವ್ಯರಾಣಿ ಅವರಿಗೆ ತಾಕೀತು ಮಾಡಿದರು. ವಿಳಂಬ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಸೂಳೇಕಲ್ ಗ್ರಾಮದ ಸೀಮೆಯಲ್ಲಿರುವ ಸರ್ವೆ ನಂಬರ್ 146ರಲ್ಲಿ ಕಂದಾಯ ಇಲಾಖೆಯ ನೌಕರರ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುವುದು, ತಾಂತ್ರಿಕ ಶಿಕ್ಷಣ ಕಾಲೇಜಿನ (ಡಿಪ್ಲೊಮಾ) ಕಟ್ಟಡವನ್ನು ನಿರ್ಮಾಣ ಮಾಡಲು ಸೂಳೇಕಲ್ ಗ್ರಾಮದ ಸೀಮೆಯಲ್ಲಿ ಈಗಾಗಲೆ ಜಾಗ ಗುರುತಿಸಲಾಗಿದೆ ಎಂದು ತಿಳಿಸಿದರು.

ವಸತಿ ನಿಲಯಗಳ ಕಟ್ಟಡ ಸ್ಥಾಪನೆಗೆ ಪಟ್ಟಣ ಪಂಚಾಯಿತಿಗೆ ಸೇರಿದ ಖಾಲಿ ನಿವೇಶನವನ್ನು ಕಾಯ್ದಿರಿಸಿ ಅನುಕೂಲ ಮಾಡಿಕೊಡಬೇಕು ಎಂದು ಮುಖ್ಯಾಧಿಕಾರಿ ಹೆಗಡೆ ಅವರಿಗೆ ಸೂಚಿಸಿದರು.

ಶಾಸಕ ಬಸವರಾಜ ದಢೇಸೂಗೂರು ಅವರು, ತಾಲ್ಲೂಕಿನಲ್ಲಿ ಆಗಬೇಕಿರುವ ಅಭಿವೃದ್ಧಿ ಕಾಮಗಾರಿ ಹಾಗೂ ತಾಲ್ಲೂಕು ಮಟ್ಟದ ಕಚೇರಿಗಳ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜತೆಗೆ ಚರ್ಚಿಸಿದರು.

ಪಟ್ಟಣ ಪಂಚಾಯಿತಿ ವತಿಯಿಂದ ನೀಡುವ ನಿವೇಶನಗಳ ಅರ್ಜಿ-3 ವಿತರಣೆ, ಬಳ್ಳಾರಿಯಿಂದ ಕನಕಗಿರಿಗೆ ಓಡಿಸುವ ಬಸ್, ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ತರಗತಿಗಳ ದುರಸ್ತಿ, ಆಶ್ರಯ ಮನೆಗಳ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದರು.

ತಹಶೀಲ್ದಾರ್ ಧನಂಜಯ ಮಾಲಗಿತ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ, ವಿರೂಪಾಕ್ಷಪ್ಪ ಭತ್ತದ, ಪಾಂಡುರಂಗ ರಾಠೋಡ್, ಪ್ರಕಾಶ ಹಾದಿಮನಿ ಸೇರಿದಂತೆ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT