ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನೆಗೊಂದಿ ಪ್ರೌಢಶಾಲೆ: ಆಡುವ ಮೊದಲೇ ಹಾಳಾದ ಮೈದಾನ

ಕಳಪೆ ಬ್ಯಾಸ್ಕೆಟ್‌ಬಾಲ್ ಕೋರ್ಟ್: ಹಣ ದುರ್ಬಳಕೆ ಆರೋಪ
ಎನ್‌.ವಿಜಯ್‌
Published 26 ಜೂನ್ 2024, 4:51 IST
Last Updated 26 ಜೂನ್ 2024, 4:51 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಸರ್ಕಾರಿ ಪ್ರೌಢಶಾಲೆಯಲ್ಲಿ ನರೇಗಾದಡಿ ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಬ್ಯಾಸ್ಕೆಟ್‌ಬಾಲ್ ಅಂಕಣ ಆಟವಾಡುವ ಮುನ್ನವೇ ಚೆಂಡು ಹಾಕುವ ಬುಟ್ಟಿ, ಮೈದಾನ, ಕಂಬಗಳ ಮೇಲಿನ ಫಲಕ ಸಂಪೂರ್ಣ ಹಾಳಾಗಿ ಕ್ರಿಕೆಟ್ ಆಡುವ ಸ್ಥಳವಾಗಿ ಬದಲಾಗಿದೆ.

ಆನೆಗೊಂದಿ ಪ್ರೌಢಶಾಲೆಯಲ್ಲಿ ಬ್ಯಾಸ್ಕೆಟ್‌ಬಾಲ್ ಆಟವಾಡುವ ಒಬ್ಬ ವಿದ್ಯಾರ್ಥಿಯೂ ಇಲ್ಲ. ಈ ಆಟದ ಬಗ್ಗೆ ಅದರ ನಿಯಮಗಳ ಕುರಿತಾಗಿ ಶಿಕ್ಷಕರಿಗೆ ಕಿಂಚಿತ್ತು ಮಾಹಿತಿಯಿಲ್ಲ. ಆದರೂ ಆನೆಗೊಂದಿ ಗ್ರಾಮ ಪಂಚಾಯಿತಿ ಆಡಳಿತ ಪ್ರೌಢಶಾಲೆಗೆ ಬ್ಯಾಸ್ಕೆಟ್‌ಬಾಲ್ ಮೈದಾನ ನಿರ್ಮಿಸಿದೆ.

ಆನೆಗೊಂದಿ ಪ್ರೌಢಶಾಲೆ ಬೆಟ್ಟದಂಚಿನಲ್ಲಿದ್ದು ಸ್ಥಳವನ್ನು ಶಾಲಾ ಕೊಠಡಿ, ವಿಜ್ಞಾನ ಪ್ರಯೋಗಶಾಲೆ, ಶೌಚಾಲಯ ಕಟ್ಟಡ, ಬೃಹತ್ ಗಿಡಗಳು ಆವರಿಸಿವೆ. ಇದರಿಂದ ಮೈದಾನದ ಕೊರತೆಯಾಗಿ ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗಿದ್ದಾರೆ.

2022ರಲ್ಲಿ ಆರಂಭವಾದ ಬ್ಯಾಸ್ಕೆಟ್‌ಬಾಲ್ ಕೋರ್ಟ್ ಕಾಮಗಾರಿ ಸಂಪೂರ್ಣವಾಗಿ ನಡೆದಿಲ್ಲ. ಅರೆಬರೆ ಕಾಮಗಾರಿ ಮಾಡಲಾಗಿದೆ. ಶೌಚಾಲಯದ ಕೊರತೆಯಿದೆ. ಸುಸಜ್ಜಿತ ಶೌಚಾಲಯ ನಿರ್ಮಿಸಿಕೊಡುವಂತೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಕೆಲಸವಾಗಿಲ್ಲ.
ವಿಜಯಕುಮಾರ, ಮುಖ್ಯಶಿಕ್ಷಕ, ಆನೆಗೊಂದಿ ಪ್ರೌಢಶಾಲೆ

ಕಳಪೆ ಆರೋಪ: ನರೇಗಾದಡಿ ಅಚ್ಚುಕಟ್ಟಾಗಿ ನಿರ್ಮಿಸಬೇಕಿದ್ದ ಬ್ಯಾಸ್ಕೆಟ್‌ಬಾಲ್ ಕೋರ್ಟ್ ಏರುಪೇರಾಗಿ ನಿರ್ಮಿಸಿದ್ದು, ಮಳೆ ನೀರು ಎಲ್ಲೆಂದರಲ್ಲಿ ನಿಲ್ಲುತ್ತಿದೆ. ಕೋರ್ಟ್ ಮಧ್ಯದಲ್ಲಿ ಬಿರುಕು ಬಿಟ್ಟು ಹಾಳಾಗಿದೆ. ಚೆಂಡು ಹಾಕಲು ಕಂಬಗಳಿಗೆ ಇರಬೇಕಾದ ಬುಟ್ಟಿಗಳೇ ಇಲ್ಲ. ಬೋರ್ಡ್‌ಗಳು ಸಂಪೂರ್ಣ ಕಿತ್ತು ಹೋಗಿವೆ.

‘ಬ್ಯಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಾಣಕ್ಕೆ ನರೇಗಾದಡಿ 2022ರಲ್ಲಿ ₹5 ಲಕ್ಷ ಅನುದಾನ ಮಂಜೂರಾಗಿ ಸಾಮಗ್ರಿಗಾಗಿ ₹4.01 ಲಕ್ಷ, 30 ಜನ ಕೂಲಿಕಾರರು 262 ದಿನ ನಿರ್ಮಾಣ ಮಾಡಿದ ಕೆಲಸಕ್ಕೆ ₹81 ಸಾವಿರ ಕೂಲಿ ಹಣ ನೀಡಿದ ಬಗ್ಗೆ ಕಾಮಗಾರಿ ಆದೇಶದಲ್ಲಿ ನಮೂದಾಗಿದೆ. ಆದರೆ ಕಾಮಗಾರಿಗೆ ಇಷ್ಟೊಂದು ಹಣ ಬಳಕೆಯಾಗಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬ್ಯಾಸ್ಕೆಟ್‌ಬಾಲ್ ಕೋರ್ಟ್ ರೂಪುರೇಷದ ಪ್ರಕಾರವೇ ನಿರ್ಮಿಸಲಾಗಿದೆ. ಪೂರ್ಣ ಕೆಲಸ ಮಾಡಿಲ್ಲ. ಪ್ರೌಢಶಾಲೆಗೆ ಈಗಾಗಲೇ ಒಂದು ಶೌಚಾಲಯ ನಿರ್ಮಿಸಿಕೊಡಲಾಗಿದೆ. ಮನವಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಕೃಷ್ಣಪ್ಪ, ಪಿಡಿಒ, ಆನೆಗೊಂದಿ ಗ್ರಾ.ಪಂ

‘ವಾರಾಂತ್ಯ ಮತ್ತು ರಜಾದಿನ ಬಂದರೆ ಸಾಕು ಯುವಕರೆಲ್ಲರೂ ಶಾಲಾ ಆವರಣದೊಳಗೆ ಠಿಕಾಣಿ ಹೂಡುತ್ತಾರೆ. ಕೆಲವರು ಆಟವಾಡಿದರೆ ಇನ್ನೂ ಕೆಲವರು ಮದ್ಯಪಾನ, ಧೂಮಪಾನ ಜೊತೆಗೆ ಮಲಮೂತ್ರ ವಿಸರ್ಜನೆ ಮಾಡಿ ಆವರಣ ಹೊಲಸೆಬ್ಬಿಸುತ್ತಾರೆ. ಇನ್ನು ಕೆಲವರಿಗೆ ಇದು ಜೂಜಾಟದ ಅಡ್ಡೆಯಾಗುತ್ತಿದೆ’ ಎನ್ನುವುದು ಜನರ ಆರೋಪ.

ಆನೆಗೊಂದಿ ಪ್ರೌಢಶಾಲೆಯಲ್ಲಿ ಬ್ಯಾಸ್ಕೆಟ್‌ಬಾಲ್ ಮೈದಾನದಲ್ಲಿ ಬಾಲ್ ಹಾಕುವ ಬುಟ್ಟಿ ಫಲಕ ಕಿತ್ತು ಹೋಗಿರುವುದು

ಆನೆಗೊಂದಿ ಪ್ರೌಢಶಾಲೆಯಲ್ಲಿ ಬ್ಯಾಸ್ಕೆಟ್‌ಬಾಲ್ ಮೈದಾನದಲ್ಲಿ ಬಾಲ್ ಹಾಕುವ ಬುಟ್ಟಿ ಫಲಕ ಕಿತ್ತು ಹೋಗಿರುವುದು

ಆನೆಗೊಂದಿ ಪ್ರೌಢಶಾಲೆಯ ಪಾಳುಬಿದ್ದ ಅಪೂರ್ಣ ಶೌಚಾಲಯ ಕಟ್ಟಡ

ಆನೆಗೊಂದಿ ಪ್ರೌಢಶಾಲೆಯ ಪಾಳುಬಿದ್ದ ಅಪೂರ್ಣ ಶೌಚಾಲಯ ಕಟ್ಟಡ

ವಿದ್ಯಾರ್ಥಿನಿಯರಿಗೆ ಶೌಚಾಲಯ ಸಮಸ್ಯೆ

ಆನೆಗೊಂದಿ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿವರೆಗೆ 154 ವಿದ್ಯಾರ್ಥಿಗಳು ಓದುತ್ತಿದ್ದು ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ. ಇರುವ ಶೌಚಾಲಯ ಕೊಠಡಿಗಳು ದುರಸ್ತಿಗೆ ಕಾದು ಬಳಕೆಗೆ ಬಾರದಂತಾಗಿವೆ. ನೂತನ ಶೌಚಾಲಯ ಒಂದಿದ್ದು ಶಿಕ್ಷಕರು ಮಾತ್ರ ಬಳಕೆ ಮಾಡುವಂತಿದೆ.

‘ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಶಾಲೆ ಹಿಂಬದಿ ಪಾಳುಬಿದ್ದ ಅಸ್ವಚ್ಛತೆಯಿಂದ ಕೂಡಿದ ಹಳೆ ಶೌಚಾಲಯ ಬಳಸಬೇಕಾಗಿದೆ. ಇಲ್ಲಿ ಮೂತ್ರ ವಿಸರ್ಜನೆಗೆ ಮಾತ್ರ ಅವಕಾಶವಿದ್ದು ಶೌಚದ ಪರಿಸ್ಥಿತಿ ಹೇಳತೀರದು. ಮಳೆಗೆ ಶಾಲೆಯ ಹಿಂಬದಿ ಹಸಿರಿನ ಹುಲ್ಲು ಬೆಳೆದಿದ್ದು ವಿಷಜಂತುಗಳ ಕಾಟವೂ ಇದೆ. ಮುಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಪರಿಸ್ಥಿತಿ ಹೇಳತೀರದು’ ಎಂದು ಹೆಸರು ಹೇಳಲು ಬಯಸದ ವಿದ್ಯಾರ್ಥಿನಿಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT