ಮಂಗಳವಾರ, ಫೆಬ್ರವರಿ 7, 2023
27 °C
ನೂತನ ನಗರಸಭೆ ಕಟ್ಟಡ ಉದ್ಘಾಟಿಸಿದ ಸಚಿವ ಎಂಟಿಬಿ

ವೇದಿಕೆಯಲ್ಲಿ ಕಣ್ಣೀರು ಸುರಿಸಿದ ನಗರಸಭೆ ಅಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ‘ಬಹುದಿನಗಳ ನಗರಸಭೆ ಕಟ್ಟಡ ನಿರ್ಮಾಣದ ಕನಸು ಈಗ ಈಡೇರಿದ್ದು, ಅಧಿಕಾರಿಗಳು ದಕ್ಷ ಹಾಗೂ ಪ್ರಾಮಾಣಿಕವಾಗಿ ಜನರ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಚಿವ ಎಂಟಿಬಿ ನಾಗರಾಜ ಹೇಳಿದರು.

ನಗರದಲ್ಲಿ ಸೋಮವಾರ ನಗರಸಭೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ‘ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗಿದ್ದು, ‘ರಾಜ್ಯದ 309 ಸ್ಥಳೀಯ ಸಂಸ್ಥೆಗಳಿಗೆ 3ನೇ ಹಂತದ ಅನುದಾನ ಬಿಡುಗಡೆ ಮಾಡಿಲಾಗಿದೆ. ನಾಲ್ಕನೇ ಹಂತದಲ್ಲಿ ಪಟ್ಟಣ ಪಂಚಾಯಿತಿಗೆ ₹10 ಲಕ್ಷ, ಪುರಸಭೆಗೆ ₹20 ಲಕ್ಷ ಮತ್ತು ನಗರಸಭೆಗೆ ₹40 ಲಕ್ಷ ಅನುದಾನ ನೀಡಲಾಗುತ್ತದೆ’ ಎಂದರು.

‘ಸ್ಥಳೀಯ ಸಂಸ್ಥೆಗಳ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದಲ್ಲಿ, ಪರಿಶೀಲಿಸಿ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ. ಅಂದಾಜು ವೆಚ್ಚ ಹಾಗೂ ಅನುದಾನ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋದ ಟೆಂಡರ್‌ಗಳನ್ನು ತೆರವು ಮಾಡಿ ಹೊಸ ಟೆಂಡರ್‌ ಕರೆಯಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್ ಯು.ನಾಗರಾಜ,‌ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಕೆ.ವಿರೂಪಾಕ್ಷಪ್ಪ, ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ, ರಾಘವೇಂದ್ರ ಶೆಟ್ಟಿ, ಉಮೇಶ ಸಿಂಗನಾಳ, ಶರ ಭೋಜಿರಾವ್, ಪರಶುರಾಮ ಮಡ್ಢೇರಾ, ಉಸ್ಮಾನ್ ಬಿಚ್ಚಿಗತ್ತಿ ಸೇರಿ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

 

ವೇದಿಕೆಯಲ್ಲಿ ಕಣ್ಣೀರು ಸುರಿಸಿದ ನಗರಸಭೆ ಅಧ್ಯಕ್ಷೆ

ಗಂಗಾವತಿ ನಗರಸಭೆ ಅಧ್ಯಕ್ಷೆ ಸಂದೀಪ ಮಾಲಾಶ್ರೀ ವೇದಿಕೆಯಲ್ಲಿಯೇ ಕಣ್ಣೀರು ಸುರಿಸಿದರು.

‘ನಗರಸಭೆ ಕಟ್ಟಡ ನಿರ್ಮಾಣಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅನುದಾನ ತಂದಿದ್ದರು. ಕೆಲವರು ಶಾಸಕರಿಂದ ಹಣಪಡೆದು ನಗರಸಭೆ ಕಟ್ಟಡ ನಿರ್ಮಾಣಕ್ಕೆ ಸಮ್ಮತಿ ನೀಡಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ. ನಾಗರಿಕರ ಹಾಗೂ ಅಧಿಕಾರಿಗಳಿಗೆ ಕಟ್ಟಡದ ಅವಶ್ಯಕತೆ ತುಂಬಾ ಇರುವುದರಿಂದ ಉದ್ಘಾಟನೆಗೆ ಸಮ್ಮತಿ ನೀಡಿದ್ದೇನೆ. 2022 ಜನಸಂಖ್ಯೆ ಪ್ರಕಾರ ನಗರಸಭೆಗೆ 100 ಜನ ಪೌರಕಾರ್ಮಿಕರ ಕೊರತೆಯಿದೆ. ಇದನ್ನು ಸರಿಪಡಿಸಬೇಕು’ ಎಂದು ಸಚಿವರ ಎದುರೇ ಕಣ್ಣೀರು ಹಾಕಿದರು.

ಎಂಟಿಬಿ ನಾಗರಾಜ ‘ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಆರಂಭವಾದ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಪಕ್ಷಕ್ಕಿಂತ ಅಭಿವೃದ್ಧಿ ಕೆಲಸ ಮುಖ್ಯ’ ಎಂದು ಸಮಾಧಾನ ಪಡಿಸಿದರು.

ಶಾಸಕ ಪರಣ್ಣ ಮುನವಳ್ಳಿ ಅವರು ಮಾಲಾಶ್ರೀ ಹೇಳಿಕೆಗೆ ಪ್ರತಿಕ್ರಿಯಿಸಿ ‘ಕಟ್ಟಡ ನಿರ್ಮಾಣಕ್ಕೆ ನಗರೋತ್ಥಾನದಡಿ ₹3ಕೋಟಿ ಮಾತ್ರ ಇದ್ದು, ಇದೀಗ ₹6ಕೋಟಿ ಖರ್ಚಾಗಿದೆ. ಈ ಹಿಂದೆ ಶಾಸಕನಾಗಿದ್ದಾಗ ಆನೆಗೊಂದಿ ಸಮೀಪದ ಕಡೆಬಾಗಿಲು ಉದ್ಘಾಟನೆಯನ್ನು ಬೇರೆಯವರು ಮಾಡಿದ್ದರು. ಅದಕ್ಕೆ ₹25ಕೋಟಿ ಅನುದಾನ ಖರ್ಚು ಮಾಡಿದ್ದು ನಾನು. ಅಧ್ಯಕ್ಷರು ಮಾನಸಿಕವಾಗಿ ನೊಂದು ಹೀಗೆ ಮಾತನಾಡಿರಬಹುದು’ ಎಂದು ಟಾಂಗ್‌ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು