ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ಕುಡುಕರ ತಾಣವಾದ ಶಾಲಾ ಆವರಣ

Last Updated 4 ಆಗಸ್ಟ್ 2021, 10:48 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಬಸಾಪಟ್ಟಣದ ಗಾಂಧಿ ವೃತ್ತ ಬಳಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣವು ಕತ್ತಲಾಗುತ್ತಿದ್ದಂತೆ ಮದ್ಯಪ್ರಿಯರ ತಾಣವಾಗಿ ಪರಿವರ್ತನೆಯಾಗುತ್ತದೆ.

ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ಹಿಂದೆ ರಾಜ್ಯ ಸರ್ಕಾರ ಶಾಲೆಗಳಿಗೆ ರಜೆ ನೀಡಿತ್ತು. ಇದನ್ನೇ ಕೆಲ ಕುಡುಕುರು ದುರುಪಯೋಗ ಮಾಡಿಕೊಂಡು ಸಂಜೆಯಾಗುತ್ತಿದ್ದಂತೆ ಶಾಲೆಯ ಆವರಣದಲ್ಲಿ ಮದ್ಯ ಸೇವಿಸಿ, ಅಲ್ಲಿಯೇ ಬಾಟಲಿಗಳನ್ನು ಬಿಸಾಡಿ ಹೋಗುತ್ತಿದ್ದರು. ಇದು ಈಗಲೂ ನಡೆಯುತ್ತಲೇ ಇದೆ. ಇದರಿಂದಾಗಿ ಇಡೀ ಶಾಲೆಯ ಆವರಣವು ಗಾಜಿನ ಬಾಟಲಿ, ಗಾಜಿನ ಚೂರು ಹಾಗೂ ತಂಬಾಕು ಉತ್ಪನ್ನಗಳ ರಾಶಿಯಿಂದ ಕೂಡಿದೆ.

ಈಗ ಮತ್ತೆ ಶಾಲೆ ಆರಂಭವಾಗಿದ್ದು, ಶಾಲೆಯಲ್ಲಿ 20 ಬಾಲಕರು, 27 ಬಾಲಕಿಯರು ಸೇರಿದಂತೆ ಒಟ್ಟು 47 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಗೆ ಬರುವ ಮಕ್ಕಳು ಹಾಗೂ ಅಡುಗೆ ಸಹಾಯಕರು ಆವರಣದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳ ಗಾಜಿನ ಚೂರುಗಳನ್ನು ನಿತ್ಯ ಆಯ್ದು ಎಸೆಯುತ್ತಾರೆ. ಕೆಲವೊಮ್ಮೆ ಮಕ್ಕಳ ಕಾಲಿಗೆ ಗಾಜಿನ ಚೂರು ಚುಚ್ಚಿ, ಗಾಯಗೊಂಡ ಘಟನೆಯೂ ನಡೆದಿದೆ.

ಶಾಲೆಯ ಆವರಣದಲ್ಲಿ ಮದ್ಯ ಸೇವಿಸಬೇಡಿ ಎಂದು ಸ್ಥಳೀಯರು ಕುಡುಕರಿಗೆ ಹೇಳಿದರೆ, ಅವರನ್ನೇ ದಬಾಯಿಸುತ್ತಾರೆ.

ಶಾಲೆಯ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದೆ. ಇಲ್ಲಿನ ನೀರು ಪಡೆಯಲು ನಿತ್ಯ ಶಾಲೆಗೆ ಬರುವ ಜನರ ಕಾಲಿಗೆ ಗಾಜಿನ ಚೂರುಗಳು ಚುಚ್ಚುತ್ತಿವೆ.

ಕುಡುಕರ ಹಾವಳಿ ತಪ್ಪಿಸಿ ಎಂದು ಶಾಲೆಯ ಮುಖ್ಯ ಶಿಕ್ಷಕರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯ ಶಿಕ್ಷಕರು ಶಾಲೆಗೆ ಸರಿಯಾಗಿ ಬರುತ್ತಿಲ್ಲ ಎಂದು ಪೋಷಕರು ದೂರುತ್ತಾರೆ.

ಅಲ್ಲದೇ ಶಾಲೆಯಲ್ಲಿನ ಕೆಲ ಕೊಠಡಿ ಹಾಗೂ ಅಡುಗೆ ದಾಸ್ತಾನು ಸಂಗ್ರಹಿಸಿಡುವ ಕೊಠಡಿಗಳು ಪಾಳು ಬಿದ್ದಿವೆ. ಹಾಳಾದ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ.

ಶಾಲೆಯ ಹಿಂದೆ ಇರುವ ಚರಂಡಿಗಳಲ್ಲಿ ತ್ಯಾಜ್ಯ ತುಂಬಿದೆ. ಅದನ್ನು ವಿಲೇವಾರಿ ಮಾಡಿಲ್ಲ. ಇದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಇದೆ. ಮಳೆ ಬಂದರೆ ಸಾಕು, ಶಾಲೆಯ ಇಡೀ ಆವರಣದಲ್ಲಿ ನೀರು ನಿಲುತ್ತದೆ. ವಿದ್ಯಾರ್ಥಿಗಳು ಆಟವಾಡಲು ತೊಂದರೆಯಾಗುತ್ತದೆ.

ಸಂಬಂಧಪಟ್ಟ ಅಧಿಕಾರಿಗಳು ಶಾಲೆ ಆವರಣಕ್ಕೆ ಭದ್ರತೆ ಒದಗಿಸಬೇಕು. ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT