ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಬಸ್‌ಗಳಿಗಿಲ್ಲ ಕೊರತೆ, ರಸ್ತೆ ಗುಂಡಿಗಳದ್ದೇ ಚಿಂತೆ

ರಸ್ತೆ ಬದಿ ಮುಳ್ಳುಕಂಟಿ ತೆರವಿಗೆ ಗ್ರಾಪಂಗಳ ನಿರ್ಲಕ್ಷ್ಯ
Published 6 ಡಿಸೆಂಬರ್ 2023, 5:46 IST
Last Updated 6 ಡಿಸೆಂಬರ್ 2023, 5:46 IST
ಅಕ್ಷರ ಗಾತ್ರ

ಕುಷ್ಟಗಿ: ಮೂಲಗಳ ಪ್ರಕಾರ ಈ ತಾಲ್ಲೂಕಿನಲ್ಲಿ ಸಾರಿಗೆ ಸಂಪರ್ಕ ಇಲ್ಲದ ಹಳ್ಳಿಗಳೇ ಇಲ್ಲ. ಎಂಥ ಕುಗ್ರಾಮಗಳಿಗೂ ಒಂದಲ್ಲ ಒಂದು ಬಸ್‌ ಬಂದೇ ಬರುತ್ತದೆ. ರಸ್ತೆಗಳ ದುಸ್ಥಿತಿ ಮತ್ತು ಗ್ರಾಮೀಣ ಪ್ರದೇಶದಲ್ಲಿನ ರಸ್ತೆಗಳು ಕಿರಿದಾಗಿರುವುದು ಬಸ್‌ ಸಂಚಾರಕ್ಕೆ ಪ್ರಮುಖ ಅಡ್ಡಿಯಾಗಿರುವುದು ಕಂಡುಬಂದಿದೆ.

ಗಡಿಭಾಗದಲ್ಲಿರುವ ಚಂದ್ರಗಿ ಹನುಮಸಾಗರ ಮಧ್ಯೆ ಡಾಂಬರು ರಸ್ತೆಯೇನೊ ಇದೆ, ಆದರೆ ಎದುರಿನಿಂದ ಇನ್ನೊಂದು ವಾಹನ ಬಂದರೆ ಪಕ್ಕಕ್ಕೆ ಸರಿಯಲು ಸಾಧ್ಯವಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಮುಳ್ಳುಕಂಟಿಗಳು ಬೆಳೆದಿವೆ. ಈ ರಸ್ತೆಯಲ್ಲಿ ಹೋದರೆ ಬಸ್‌ಗಳ ಎಡ ಬಲ ಬದಿಯಲ್ಲಿರುವ ಕನ್ನಡಿಗಳು ಉಳಿಯುವುದೇ ಅಪರೂಪ. ಕಿಟಿಕಿ ತೆರೆದಿದ್ದರೆ ಪ್ರಯಾಣಿಕರಿಗೆ ಮುಳ್ಳು ಪರಚಿಕೊಳ್ಳುವುದು ಗ್ಯಾರಂಟಿ. ಅನೇಕ ಕಿಲೋ ಮೀಟರ್ ವರೆಗೆ ಇದೇ ಸ್ಥಿತಿ ಇದ್ದು ಬಸ್‌ ಹೋಗಿ ಬರುವುದಕ್ಕೆ ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಾರೆ ಬಸ್‌ ಚಾಲಕರು. ಮುಳ್ಳುಕಂಟಿ ತೆಗೆಯಿಸಿ ನಿಮ್ಮೂರಿನ ಜನರಿಗೇ ತೊಂದರೆ ತಪ್ಪುತ್ತದೆ ಎಂದು ಹೇಳಿದರೂ ಯರಗೇರಾ ಗ್ರಾಮ ಪಂಚಾಯಿತಿ ಗಮನಹರಿಸಿಲ್ಲ ಎನ್ನುತ್ತಾರೆ ಈ ಭಾಗದ ಪ್ರಯಾಣಿಕರು.

ಇಳಕಲ್‌ ತಾಲ್ಲೂಕಿಗೆ ಹೊಂದಿಕೊಂಡಿರುವ ಹೂಲಗೇರಾ, ಸೇಬಿನಕಟ್ಟಿ ಗ್ರಾಮಗಳದ್ದು ಹೇಳತೀರದ ಸಮಸ್ಯೆ. ಇಡೀ ಪ್ರದೇಶ ಗ್ರಾನೈಟ್ ಗಣಿಗಾರಿಕೆಗೆ ಸೇರಿದ್ದು, ಇಲ್ಲಿ ರಸ್ತೆಗಳು ಇರುವುದು ಕೇವಲ ಬೃಹತ್‌ ಗಾತ್ರದ ಗ್ರಾನೈಟ್‌ ಬ್ಲಾಕ್‌ ಸಾಗಿಸುವ ಲಾರಿಗಳಿಗೆ ಸೀಮಿತವಾಗಿದೆಯೇನೊ ಎಂಬಂತೆ ಭಾಸವಾಗುತ್ತದೆ. ಅತಿ ಭಾರದ ಲಾರಿಗಳ ಹಾವಳಿಯಿಂದ ಮೊದಲೇ ರಸ್ತೆ ನಜ್ಜುಗುಜ್ಜಾಗಿಹೋಗಿದೆ. ಅಕ್ಕಪಕ್ಕದಲ್ಲಿ ಸದಾಕಾಲವೂ ಲಾರಿಗಳು ಠಿಕಾಣಿ ಹೂಡಿರುತ್ತವೆ. ಬಸ್‌ ಹೋಗುವುದಕ್ಕೆ ಅಸಾಧ್ಯವಾದ ಸನ್ನಿವೇಶ ಇದೆ.

ಪ್ರಯಾಣಿಕರಿಂದ ಕಿಕ್ಕಿರಿದ ಬಸ್‌ಗಳನ್ನು ಈ ಮಾರ್ಗವಾಗಿ ತೆಗೆದುಕೊಂಡು ಹೋಗಿ ಬರುವುದೆಂದರೆ ಸವಾಲಿನ ಸಂಗತಿಯೂ ಹೌದು. ಹಾಗಾಗಿ ಪ್ರಯಾಣಿಕರಿಗೆ ಏನಾದರೂ ತೊಂದರೆಯಾದರೆ ನಾವೇ ಅದರ ಹೊಣೆ ಹೊರಬೇಕಾಗುತ್ತದೆ ಎನ್ನುವ ಕಾರಣಕ್ಕೆ ಕೆಲ ಸಂದರ್ಭಗಳಲ್ಲಿ ಸಾರಿಗೆ ಘಟಕದವರು ಬಸ್‌ ಬಿಟ್ಟರೂ ರಸ್ತೆಗಳ ಅವ್ಯವಸ್ಥೆಯಿಂದ ಬೇಸತ್ತ ಬಸ್‌ ಚಾಲಕರು ಚಂದ್ರಗಿರಿ, ಹೂಲಗೇರಾ ಭಾಗಗಳಿಗೆ ಬಸ್‌ ಚಾಲನೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಯಲಬುರ್ತಿ ಹಿರೇಬನ್ನಿಗೋಳ, ಹಿರೇನಂದಿಹಾಳ ರಸ್ತೆಗಳ ಸ್ಥಿತಿಯೂ ಭಿನ್ನವಾಗಿಲ್ಲ.  ಹನುಮಸಾಗರ, ಗಜೇಂದ್ರಗಡ ರಾಜ್ಯ ಹೆದ್ದಾರಿಗಳಲ್ಲಿ ಡಾಂಬರು ಹಾಕಿದ ಕೆಲದಿನಗಳಲ್ಲೇ ಗುಂಡಿಗಳು ಸೃಷ್ಟಿಯಾಗಿವೆ. ಕ್ಯಾದಿಗುಪ್ಪಾ ಬಳಿ ರಾಜ್ಯ ಹೆದ್ದಾರಿ ಇದು ರಸ್ತೆ ಹೌದೊ ಅಲ್ಲವೊ ಎಂಬಂತಾಗಿದೆ. ದೋಟಿಹಾಳದಲ್ಲಿ ಬಸ್‌ ಹೊರಳುವುದಕ್ಕೂ ರಸ್ತೆ ಇಲ್ಲದ ಕಾರಣ ಬಸ್‌ಗಳು ಮುದೇನೂರು ಕ್ರಾಸ್‌ದಲ್ಲಿಯೇ ನಿಲ್ಲುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಅಲ್ಲಿವರೆಗೂ ನಡೆದುಕೊಂಡು ಹೋಗಿ ಬಸ್‌ ಏರುವ ಅನಿವಾರ್ಯತೆ ಇದೆ ಎನ್ನುತ್ತಾರೆ ಗ್ರಾಮಸ್ಥ ಹನುಮಗೌಡ ಮುದೂಟಗಿ.

ಚಂದ್ರಗಿರಿ ರಸ್ತೆಯಲ್ಲಿ ಮುಳ್ಳುಕಂಟಿಗಳು ಬಸ್‌ ಕಿಟಿಕಿ ಮೂಲಕ ಕೈ–ಮೈ ಗೀಚುತ್ತಿವೆ. ಕೆಲವು ಬಾರಿ ಬಟ್ಟೆಗಳೂ ಹರಿದ ಉದಾಹರಣೆಗಳಿವೆ. ಮುಳ್ಳು ಕಂಟಿ ತೆಗೆಯಿಸುವುದಕ್ಕೂ ಗ್ರಾಮ ಪಂಚಾಯಿತಿಗಳಿಗೆ ಬಡತನವೇ ಎಂದು ಕಾಲೇಜು ವಿದ್ಯಾರ್ಥಿನಿಯರು ಪ್ರಶ್ನಿಸುತ್ತಾರೆ.

ಕುಷ್ಟಗಿ ತಾಲ್ಲೂಕಿನ ಬಹುತೇಕ ಊರುಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ. ರಸ್ತೆಗಳು ಗುಣಮಟ್ಟದಿಂದ ಕೂಡಿದರೆ ಹೆಚ್ಚಿನ ಸಂಖ್ಯೆ ಬಸ್‌ಗಳ ಮೂಲಕ ಇನ್ನಷ್ಟು ಉತ್ತಮ ಸೇವೆ ನೀಡುವುದಕ್ಕೆ ಸಾಧ್ಯವಾಗುತ್ತದೆ.

-ಸುಂದರಗೌಡ ಪಾಟೀಲ ಸಾರಿಗೆ ಘಟಕದ ವ್ಯವಸ್ಥಾಪಕ

ರಸ್ತೆ ಅಕ್ಕಪಕ್ಕ ಗ್ರಾನೈಟ್‌ ಲಾರಿ ನಿಲ್ಲುವುದರಿಂದ ಕೆಲವು ಬಾರಿ ಊರೊಳಗೆ ಬಸ್‌ ಬರುವುದೇ ಇಲ್ಲ. ಈ ಸಮಸ್ಯೆಯನ್ನು ಯಾರ ಮುಂದೆ ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ.

-ಬಸಪ್ಪ ಗುಳೇದ ಹೂಲಗೇರಿ ಗ್ರಾಮಸ್ಥ

ಬಸ್‌ ಓಡಿಸುತ್ತೇವೆ ದಾರಿ ಸರಿಪಡಿಸಿ

ಬಸ್‌ಗಳನ್ನು ಓಡಿಸುವುದಕ್ಕೆ ಸಮಸ್ಯೆ ಇಲ್ಲ. ತಾಲ್ಲೂಕಿನ 105 ಮಾರ್ಗಗಳಲ್ಲಿ 587 ಟ್ರಿಪ್‌ಗಳಲ್ಲಿ ಬಸ್‌ಗಳು ಹೋಗಿ ಬರುತ್ತಿವೆ. ರಸ್ತೆ ದುಸ್ಥಿತಿ ಮತ್ತು ಅಕ್ಕಪಕ್ಕದ ಮುಳ್ಳುಕಂಟಿಗಳಿಂದಾಗಿ ಸಮಯಕ್ಕೆ ಸರಿಯಾಗಿ ಬಸ್‌ಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇನ್ನಷ್ಟು ಹೆಚ್ಚಿನ ಟ್ರಿಪ್‌ಗಳಲ್ಲಿ ಬಸ್‌ ಓಡಿಸುವುದಕ್ಕೆ ರಸ್ತೆಗಳ ದುಸ್ಥಿತಿ ಅಡ್ಡಿಯಾಗಿದೆ ಎನ್ನುತ್ತಾರೆ ಇಲ್ಲಿಯ ಘಟಕ ವ್ಯವಸ್ಥಾಪಕ ಸುಂದರಗೌಡ ಪಾಟೀಲ. ಶಕ್ತಿ ಯೋಜನೆ ಬಂದ ನಂತರ ಪ್ರಯಾಣಿಕರ ಸಂಖ್ಯೆ ಮಿತಿಮೀರಿದೆ. ಭಾರದಿಂದ ಬಸ್‌ಗಳು ನಲುಗುತ್ತಿವೆ. ಉತ್ತಮ ರಸ್ತೆಗಳಿದ್ದರೆ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT