ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್ ಸಂಖ್ಯೆ 19ರಲ್ಲಿ ಚೈನ್ ಲಿಂಕ್ ಮುರಿದು ಹೋಗಿರುವ ಕಾರಣ ಅದನ್ನು ಸರಿಪಡಿಸಲು ಜಲಾಶಯದ 60 ಟಿಎಂಸಿ ಅಡಿ ನೀರನ್ನು ಖಾಲಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜಲಾಶಯಕ್ಕೆ ಭಾನುವಾರ ಬೆಳಗಿನ ಜಾವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಕ್ಕೆ ಭೇಟಿ ನೀಡಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.
‘19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಮುರಿದಿರುವ ಕಾರಣ ಅನಿವಾರ್ಯವಾಗಿ ನೀರು ಹೊರಬಿಡಬೇಕಾಗಿದೆ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಸದ್ಯದ ಮಟ್ಟಿಗೆ 60ರಿಂದ 65 ಟಿಎಂಸಿ ಅಡಿಗೂ ಹೆಚ್ಚು ನೀರು ಖಾಲಿ ಮಾಡಬೇಕಾಗುತ್ತದೆ. ಕನಿಷ್ಠ 20 ಅಡಿ ನೀರು ಖಾಲಿಯಾದರೆ ಮಾತ್ರ ನಿಖರವಾಗಿ ಸಮಸ್ಯೆ ಏನಾಗಿದೆ ಎನ್ನುವುದು ಗೊತ್ತಾಗುತ್ತದೆ’ ಎಂದು ತಿಳಿಸಿದರು.
‘ಆಣೆಕಟ್ಟು ಕಟ್ಟಿದ ವಿನ್ಯಾಸವನ್ನು ತರಿಸಿಕೊಳ್ಳಲಾಗಿದ್ದು, ನೀರಿನ ರಭಸ ಹೆಚ್ಚಿರುವ ಕಾರಣ ಕೆಳಗಡೆ ಇಳಿದು ಕೆಲಸ ಮಾಡಲು ಆಗುವುದಿಲ್ಲ. ಸದ್ಯಕ್ಕೆ ಒಂದು ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ನೀರು ಹೊರಬಿಡುವ ಪ್ರಮಾಣ 2.50 ಲಕ್ಷ ಕ್ಯುಸೆಕ್ ದಾಟಿದರೆ ಮಾತ್ರ ಜನರಿಗೆ ತೊಂದರೆಯಾಗುತ್ತದೆ. ಈ ಘಟನೆ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಲಾಗಿದೆ’ ಎಂದರು.
ಕಡಿಮೆ ಸಮಯದಲ್ಲಿ ಸಮಸ್ಯೆ ಪರಿಹರಿಸಲು ಬೆಂಗಳೂರು, ಹೈದರಾಬಾದ್, ಚೆನ್ನೈನಿಂದ ತಜ್ಞರ ತಂಡ ಬರಲಿದೆ. ಬಳಿಕ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.