ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಗಿರಿ: ಪ್ರೌಢಶಾಲೆಗಳಲ್ಲಿ ವೃತ್ತಿ ಶಿಕ್ಷಣ ಕಲಿಕೆ ಆರಂಭ

‘ಅಕ್ಷರ ಆವಿಷ್ಕಾರ’ದಡಿ ವಿದ್ಯಾರ್ಥಿ ದೆಸೆಯಿಂದಲೆ ಉದ್ಯೋಗ, ಕೌಶಲ ಬೆಳೆಸಲು ಆದ್ಯತೆ
Published 26 ಮೇ 2024, 4:44 IST
Last Updated 26 ಮೇ 2024, 4:44 IST
ಅಕ್ಷರ ಗಾತ್ರ

ಕನಕಗಿರಿ: ಸಮಗ್ರ ಶೈಕ್ಷಣಿಕ ಅಭಿವೃದ್ಧಿ, ಮೂಲ‌ ಸೌಲಭ್ಯ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ಕಲ್ಯಾಣ ಕರ್ನಾಟದ ಏಳು ‌ಜಿಲ್ಲೆಗಳ ಆಯ್ದ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ‘ಅಕ್ಷರ ಆವಿಷ್ಕಾರ’ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ ಕಲಿಕೆಗೆ ಮುಂದಾಗಿದೆ.

ಈ ಯೋಜನೆ ಅಡಿ ಅರ್ಹತೆ ಮೇರೆಗೆ ಕನಕಗಿರಿ ಹಾಗೂ ಕಾರಟಗಿ, ಗಂಗಾವತಿ ತಾಲ್ಲೂಕಿನ 32 ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಇಸಿಸಿಇ (ಶಾಲಾ ಪೂರ್ವ ಶಿಕ್ಷಣ-ಎಲ್‌ಕೆಜಿ ಹಾಗೂ ಯುಕೆಜಿ ಹಾಗೂ 10 ಪ್ರೌಢಶಾಲೆಗಳಲ್ಲಿ ರಾಷ್ಟ್ರೀಯ ವೃತ್ತಿ ಶಿಕ್ಷಣ ಕೌಶಲ ಚೌಕಟ್ಟು (ಎನ್‌ಎಸ್‌ಕ್ಯೂಎಫ್) ಅಡಿ ಕೌಶಲ ತರಗತಿಗಳನ್ನು ಆರಂಭಿಸಲು ಪ್ರಸ್ತಾಪಿಸಲಾಗಿದ್ದು, ಮೇ 29ರ ಒಳಗಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.

ಕನಕಗಿರಿ ತಾಲ್ಲೂಕಿನ ಮುಸಲಾಪುರ, ಪಟ್ಟಣದ ಆದರ್ಶ ವಿದ್ಯಾಲಯ, ನವಲಿ, ಚಿಕ್ಕಡಂಕನಕಲ್, ಹಿರೇಖೇಡ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸೇರಿ ಹತ್ತು ಶಾಲೆಗಳು ಆಯ್ಕೆ ಮಾಡಲಾಗಿದೆ. ಈ ಸರ್ಕಾರಿ ಪ್ರೌಢಶಾಲೆಗಳಲ್ಲಿ ಒಂಬತ್ತನೇ ತರಗತಿಯಿಂದ 12ನೇ ತರಗತಿ (ಪಿಯುಸಿ)ವರೆಗೆ ಕಲಿಕೆಗೆ ಅವಕಾಶ ಸಿಗಲಿದ್ದು, ಸದ್ಯ 9ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ ವಿಷಯವನ್ನು ಕಲಿಸಲಾಗುತ್ತಿದೆ. ಈ ವೃತ್ತಿ ಶಿಕ್ಷಣವು ತೃತೀಯ ಭಾಷೆ ಹಿಂದಿ ವಿಷಯಕ್ಕೆ ಸಮವಾಗಿದ್ದು, 9 ಮತ್ತು 10ನೇ ತರಗತಿವರೆಗೆ ಮುಂದುವರೆಸಬೇಕಾಗಿದೆ. ವಿದ್ಯಾರ್ಥಿಗಳು ಹಿಂದಿ ಭಾಷೆಯ ಬದಲಾಗಿ ಈ ಕೌಶಲ ವಿಷಯಗಳನ್ನು ಕಲಿಯಬಹುದಾಗಿದೆ.

ಈ ಹೊಸ ನಿಯಮ ಅನ್ವಯ ಮಾಹಿತಿ ತಂತ್ರಜ್ಞಾನ, ಆಟೊಮೊಬೈಲ್, ಬ್ಯೂಟಿ ವೆಲನೆಸ್, ಕೃಷಿ, ಪತ್ರಿಕಾ ಮಾಧ್ಯಮ ಮತ್ತು ಮನರಂಜನೆ, ಹೆಲ್ತ್‌ಕೇರ್, ಎಲೆಕ್ಟ್ರಾನಿಕ್ ಹಾಗೂ ಹಾರ್ಡ್‌ವೇರ್ ಒಳಗೊಂಡಂತೆ ಒಟ್ಟು ಹತ್ತು ವಿಷಯಗಳಿದ್ದು ಅದರಲ್ಲಿ ಮಾಹಿತಿ ತಂತ್ರಜ್ಞಾನ ವಿಷಯ ಕಡ್ಡಾಯವಾಗಿದೆ. ಒಂದು‌ ವಿಷಯಕ್ಕೆ ಗರಿಷ್ಠ 25 ವಿದ್ಯಾರ್ಥಿಗಳು ಪ್ರತಿ ಶಾಲೆಯಲ್ಲಿ ಎರಡು ವಿಷಯಗಳಿಗೆ 50 ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಲು ಅವಕಾಶ‌ ನೀಡಲಾಗಿದೆ. 20 ವಿದ್ಯಾರ್ಥಿಗಳು ಆಯಾ ವಿಷಯಗಳನ್ನು ಕಲಿಯಲು ಬಯಸಿದರೆ ಮಾತ್ರ ಆರಂಭಿಸುವಂತೆ ಸೂಚನೆ‌ ನೀಡಲಾಗಿದೆ.

‘ಸಾಮಾನ್ಯ ಶಿಕ್ಷಣದ ಜತೆಗೆ ವೃತ್ತಿ ಶಿಕ್ಷಣದ ವಿಷಯಗಳನ್ನು ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಅಳವಡಿಸಿ ಭವಿಷ್ಯದಲ್ಲಿ ಉದ್ಯೋಗ ನಿರ್ವಹಿಸಲು ಅಗತ್ಯ ಕೌಶಲ ಹಾಗೂ ಸಾಮರ್ಥ್ಯಗಳ ಬಗ್ಗೆ ತರಬೇತಿ‌ ನೀಡುವುದಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ ತಿಳಿಸಿದರು.

ತರಬೇತುದಾರರ ನೇಮಕ:

ಹೊಸ ವಿಷಯಗಳನ್ನು ಬೋಧಿಸಲು ಪಠ್ಯಕ್ರಮ, ಪರೀಕ್ಷಾ ಕ್ರಮವನ್ನು ಸರ್ಕಾರ ಒದಗಿಸುವುದಲ್ಲದೇ ಆಯಾ‌ ವಿಷಯಗಳ ಬೋಧಕರನ್ನು (ಶಿಕ್ಷಕರು) ನೇಮಕ ಮಾಡಲಾಗುತ್ತಿದೆ.

‘ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಕೌಶಲ ವಿಷಯವನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಬದಲಾವಣೆ ಮಾಡಲು ಅವಕಾಶ‌ ಇರುವುದಿಲ್ಲ’ ಎಂದು ಕಲಬುರಗಿ ವಿಭಾಗದ ಶಾಲಾ ಶಿಕ್ಷಣ‌ ಇಲಾಖೆ ಹೆಚ್ಚುವರಿ ಆಯುಕ್ತ ಆಕಾಶ್ ಎಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT