ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ: ನೀರಿಗಾಗಿ ಮಹಿಳೆಯರ ಜಾಗರಣೆ

ಕನಕಗಿರಿ: ಕೆಟ್ಟು ನಿಂತ ಪೊಲೀಸ್ ಠಾಣೆ ಹಿಂಭಾಗದ ಕೊಳವೆಬಾವಿ, ಕೆಲ ಪ್ರದೇಶಗಳಲ್ಲಿ ಸಮಸ್ಯೆ ಉಲ್ಬಣ
ಮೆಹಬೂಬಹುಸೇನ ಕನಕಗಿರಿ
Published 10 ಮಾರ್ಚ್ 2024, 4:20 IST
Last Updated 10 ಮಾರ್ಚ್ 2024, 4:20 IST
ಅಕ್ಷರ ಗಾತ್ರ

ಕನಕಗಿರಿ: ಬೇಸಿಗೆ ಆರಂಭವಾಗುತ್ತಿದ್ದಂತೆ ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ.

ಇಲ್ಲಿನ‌ ವಾಲ್ಮೀಕಿ‌ ನಗರ, ಶಿವಾಜಿ ನಗರ, ಇಂದಿರಾ ನಗರಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕಳೆದ‌ ಒಂದು ತಿಂಗಳಿಂದಲೂ ನೀರಿನ‌ ಸಮಸ್ಯೆ ತಲೆದೋರಿದ್ದು
ಕಾಲೊನಿ ನಿವಾಸಿಗಳು ನೀರಿಗಾಗಿ ಜಾಗರಣೆ ಮಾಡುವಂತಾಗಿದೆ.

ಇಡೀ ರಾತ್ರಿ ನಲ್ಲಿಯ ಮುಂದೆ‌ ಕುಳಿತರೆ ಒಂದು ಕೊಡ‌ ನೀರು ಬರುತ್ತಿಲ್ಲ. ಪಕ್ಕದ ವಾರ್ಡ್‌ಗಳಿಗೆ ತೆರಳಿ ನೀರು ತರುವಂಥ ಸ್ಥಿತಿ ಬಂದಿದೆ. ಈಗ‌ ಈ ರೀತಿಯಾದರೆ ಮುಂದೆ ಹೇಗೆ ಪರಿಸ್ಥಿತಿ ಎದುರಿಸಬೇಕೆಂಬ‌ ಚಿಂತೆ ಕಾಡುತ್ತಿದೆ ಎಂದು ಹನುಮವ್ವ ಪ್ರಶ್ನಿಸಿದರು.

ನೀರಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ. ಪಟ್ಟಣ ಪಂಚಾಯಿತಿಯವರು ನಿಯಮಿತವಾಗಿ ಪ್ರತಿ ದಿನ ಟ್ಯಾಂಕರ್ ಮೂಲಕ‌ ನೀರು ಸರಬರಾಜು ಮಾಡುತ್ತಿರುವುದು‌ ಕಂಡು ಬಂದಿದೆ. ನಾಲ್ಕು ಹಾಗೂ ಐದನೇಯ ವಾರ್ಡ್ ನಿವಾಸಿಗಳು ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಕೊಳವೆಬಾವಿಯ ನೀರನ್ನು ಅವಲಂಬಿಸಿದ್ದು, ಅದು ಈಚೆಗೆ ಕೆಟ್ಟು ನಿಂತಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.

ರೀ ಬೋರ್ ಮಾಡಿ ದುರಸ್ತಿ ಮಾಡಿಸಿದರೂ ನೀರು‌ ಬರುತ್ತಿಲ್ಲ. ಹೀಗಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಪಟ್ಟಣ‌‌ ಪಂಚಾಯಿತಿ ಮೂಲಗಳು ತಿಳಿಸಿವೆ.

ಪಟ್ಟಣ ಪಂಚಾಯಿತಿಯವರು ಲಕ್ಷ್ಮೀದೇವಿ ಕೆರೆಯಲ್ಲಿರುವ‌ ನೀರನ್ನು ಟ್ಯಾಂಕರ್‌ನಲ್ಲಿ ತಂದು ಕೊರತೆ ಎದುರಿಸುತ್ತಿರುವ ವಾರ್ಡ್‌ಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಕಳೆದ ವರ್ಷ ಮಳೆ ಬೀಳದ ಕಾರಣ ಕೆರೆಯ ನೀರು ಸಹ ಬರಿದಾಗುತ್ತಿದೆ. ಹೀಗೆ ಪರಿಸ್ಥಿತಿ ಮುಂದುವರಿದರೆ ಮುಂಬರುವ ದಿನಗಳಲ್ಲಿ ಬದುಕು ಕಷ್ಟವಾಗುತ್ತದೆ ಎಂಬ ಆತಂಕ ಕಾಡುತ್ತಿದೆ ಎಂದು ಅಲ್ಲಿನ ನಿವಾಸಿಗಳು ಅಳಲು ವ್ಯಕ್ತಪಡಿಸಿದರು.

ಶನಿವಾರ ಕೋಳಿ ಆನಂದ ಮನೆಯ ಮುಂದೆ‌ ನಿಂತಿದ್ದ ಟ್ಯಾಂಕರ್‌ನ ಮುಂದೆ ಮಹಿಳೆಯರು ನೂರಾರು‌ ಬಕೇಟ್, ಕೊಡಗಳನ್ನು ಸಾಲಾಗಿಟ್ಟು ಸುಡುವ ಬಿಸಿಲಿನಲ್ಲಿ ನೀರು ತುಂಬಿಕೊಳ್ಳುತ್ತಿರುವುದು‌ ಕಂಡುಬಂತು. ಎರಡೇ ಟ್ಯಾಂಕರ್ ಇರುವ ಕಾರಣ ಇಡೀ‌ ದಿನ‌ ನೀರಿನ ಟ್ಯಾಂಕರ್ ಬರುವಿಕೆಗಾಗಿ ಜನ ಕಾಯುವಂತಾಗಿದೆ.

ಬಾಡಿಗೆ ಟ್ಯಾಂಕರ್: ಪಟ್ಟಣ ಪಂಚಾಯಿತಿಗೆ ಸೇರಿದ ಒಂದು ಟ್ಯಾಂಕರ್ ಹಾಗೂ ಮತ್ತೊಂದು ಟ್ಯಾಂಕರ್ ಅನ್ನು ಬಾಡಿಗೆ ಪಡೆದುಕೊಂಡು ನೀರು ಸರಬರಾಜು ಮಾಡಲಾಗುತ್ತಿದೆ. ಜನರು ನೀರು ಸಂಗ್ರಹ ಮಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ತಿಳಿಸಿದರು.

ಅಲ್ಲಲ್ಲಿ ನೀರು ಪೋಲು: ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ನೀರಿಗಾಗಿ ಜನ ಪರದಾಡುತ್ತಿದ್ದರೆ ಹಲವಾರು ವಾರ್ಡ್‌ಗಳಲ್ಲಿ ನೀರು ಯಥೇಚ್ಛವಾಗಿ ಪೋಲು ಮಾಡುತ್ತಿರುವುದು ಕಂಡು ಬಂದಿದೆ. ಮನೆ ಅಂಗಳದಲ್ಲಿ ನಲ್ಲಿಗೆ ಪೈಪ್ ಅಳವಡಿಸಿ ಬಟ್ಟೆ ಸ್ವಚ್ಛ ಮಾಡಿ ನೀರು ಹಾಳು ಮಾಡುತ್ತಿದ್ದಾರೆ. ಈ ಪರಿಸರದಲ್ಲಿ 24 ಗಂಟೆಗಳ ಕಾಲ ನೀರು ಹರಿಯುತ್ತಿದೆ.

‘ಶಾಶ್ವತ ಪರಿಹಾರ ಮಾಡಿ’: ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದೇ ಸಮಸ್ಯೆಗೆ ಪರಿಹಾರವಲ್ಲ. ಕೂಲಿ ಕೆಲಸ ಬಿಟ್ಟು ನೀರಿಗಾಗಿ ಕಾಯಬೇಕಾಗುತ್ತದೆ. ಹೊಸ ಕೊಳವೆಬಾವಿ ಕೊರೆಯಿಸಿ ಶಾಶ್ವತ ಪರಿಹಾರ‌ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಟ್ಯಾಂಕರ್ ಮೂಲಕ ನೀರು ಸರಬರಾಜು ಕೆಟ್ಟು ನಿಂತ ಕೊಳವೆಬಾವಿ ತಿಂಗಳಿಂದಲೂ‌ ನೀರಿಗಾಗಿ ಪರದಾಟ

ತಾಲ್ಲೂಕಿನಲ್ಲಿ ನೀರಿನ‌ ಕೊರತೆ ನೀಗಿಸಲು ಸಹಾಯವಾಣಿ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅವಶ್ಯಕತೆ ಇರುವ ಸ್ಥಳಗಳಲ್ಲಿ ಹೊಸ ಕೊಳವೆಬಾವಿ ಕೊರೆಯಿಸಲಾಗುವುದು

-ವಿಶ್ವನಾಥ ಮುರುಡಿ ತಹಶೀಲ್ದಾರ್ ಕನಕಗಿರಿ

ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಕೊಳವೆಬಾವಿಯಲ್ಲಿ ನೀರಿನ‌ ಕೊರತೆ ಉಂಟಾದ ಪರಿಣಾಮ ನಾಲ್ಕು ಹಾಗೂ ಐದನೇಯ ವಾರ್ಡ್‌ಗಳಲ್ಲಿ ಸಮಸ್ಯೆ ತಲೆದೋರಿದೆ. ಸದ್ಯ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಭಾನುವಾರ ರೀ ಬೋರ್‌ ಮಾಡಿಸಲಾಗುವುದು

-ದತ್ತಾತ್ರೇಯ ಹೆಗಡೆ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT