ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತಾವದಲ್ಲಿಯೇ ಮುಳುಗಿದ ವನ್ಯಜೀವಿ ಧಾಮ

ಅರಣ್ಯ, ಕಂದಾಯ ಇಲಾಖೆ ಅನುಮೋದನೆಗೆ ವಿಳಂಬ: ಸಂಕಷ್ಟದಲ್ಲಿ ಕಾಡು ಪ್ರಾಣಿಗಳು, ಮುಂದುವರಿದ ಮಾನವ–ವನ್ಯಜೀವಿ ಸಂಘರ್ಷ
Last Updated 19 ಏಪ್ರಿಲ್ 2021, 4:21 IST
ಅಕ್ಷರ ಗಾತ್ರ

ಕೊಪ್ಪಳ: ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ತಡೆಗೆ ಜಿಲ್ಲೆಯಲ್ಲಿ ವನ್ಯಜೀವಿ ಧಾಮಗಳನ್ನು ನಿರ್ಮಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದ್ದು, ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ಅಳವಿನಂಚಿನಲ್ಲಿ ಇರುವ ಪ್ರಾಣಿಗಳಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ.

ಕಾಡಿನಲ್ಲಿ ಆಹಾರ, ನೀರು, ಜನ, ಕ್ರೂರಮೃಗಗಳೊಂದಿಗೆ ನಿತ್ಯ ಸಂಕಷ್ಟದಲ್ಲಿಯೇ ಹೋರಾಟದ ಬದುಕು ಕಂಡುಕೊಂಡು ತಮ್ಮ ಸಂತತಿ ಕಾಪಾಡಿಕೊಳ್ಳುತ್ತಾ ಬಂದಿರುವುದು ನಿಸರ್ಗದ ವೈಚಿತ್ರ್ಯ ಮತ್ತು ವೈಶಿಷ್ಟ್ಯವೇ ಆಗಿದೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ಕರಡಿ, ಚಿರತೆ, ತೋಳ, ನರಿ, ಜಿಂಕೆ, ನೀರು ನಾಯಿ, ನವಿಲು, ಕೃಷ್ಣ ಮೃಗಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅವುಗಳ ನಿಖರವಾದ ಗಣತಿ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. 20ಕ್ಕೂ ಹೆಚ್ಚು ಚಿರತೆ, 40ಕ್ಕೂ ಹೆಚ್ಚು ಕರಡಿ, 100ಕ್ಕೂ ಹೆಚ್ಚು ತೋಳ, ನರಿಗಳು ಈ ಭಾಗದಲ್ಲಿ ಇವೆ.

ಅತ್ಯಂತ ಅಪರೂಪದ ವಿಶೇಷವಾಗಿ ಕರ್ನಾಟಕದ ತುಂಗಭದ್ರ ಪರಿಸರದ ಹಂಪಿ, ಆನೆಗೊಂದಿ ನದಿಪಾತ್ರಗಳಲ್ಲಿ ನೀರು ನಾಯಿ ಸಂತತಿ ಅಳವಿನಂಚಿನಲ್ಲಿದೆ. ನೀರು ನಾಯಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದ್ದರೂ, ಅವುಗಳಿಗೆ ನಾಯಿ, ಮೊಸಳೆ, ಜನರ ಕಾಟ ತಪ್ಪಿಲ್ಲ. ಅತ್ಯಂತ ನಾಚಿಕೆ ಸ್ವಭಾವದ ಈ ಪ್ರಾಣಿ ನೋಡಲು ನಾಯಿ ಮುಖವನ್ನು ಹೊಂದಿದ್ದರೂ ಮೀನಿನಂತೆ ಸರ, ಸರನೆ ಈಜುವುದನ್ನು ನೋಡುವುದೇ ಒಂದು ಖುಷಿ.

ಜಿಂಕೆಧಾಮ: ಕೊಪ್ಪಳ, ಕುಕನೂರು ಮತ್ತು ಯಲಬುರ್ಗಾ ತಾಲ್ಲೂಕಿನಲ್ಲಿ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜಿಂಕೆ, ಚಿಗರಿ, ಕೃಷ್ಣಮೃಗಗಳು ಇವೆ ಎಂದು ಅಂದಾಜಿಸಲಾಗಿದೆ. ಒಂದು ಗುಂಪಿನಲ್ಲಿ 100ಕ್ಕೂ ಹೆಚ್ಚು ಪ್ರಾಣಿಗಳು ಕಂಡು ಬರುತ್ತಿವೆ.
ಆಹಾರಕ್ಕಾಗಿ ಬೇಟೆ, ಬೆಳೆಗೆ ಕ್ರಿಮಿನಾಶಕ ಸಿಂಪರಣೆ, ವಿಷ ಬೆರೆಸುವ ಪ್ರಸಂಗ ಸೇರಿದಂತೆ ಅನೇಕ ತೊಂದರೆಗಳು ಈ ಸುಂದರ ಪ್ರಾಣಿಗಳಿಗೆ ಇದೆ.

ರೈತರು ಜಮೀನಿನಲ್ಲಿ ಬೆಳೆದ ಚಿಗುರು ಬೆಳೆಯನ್ನೇ ತಿಂದು ಬದುಕುವ ಈ ಜಿಂಕೆಗಳಿಂದ ಬೆಳೆಯನ್ನು ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಬೆಳೆ ಹಾನಿಯಾದ ರೈತರಿಗೆ ಅರಣ್ಯ ಇಲಾಖೆ ಪರಿಹಾರ ನೀಡುತ್ತಿದ್ದರೂ ಅದು ಯಾತಕ್ಕೂ ಸಾಕಾಗುವುದಿಲ್ಲ ಎಂಬ ರೈತರ ರೋಧನೆ ಪ್ರತಿ ವರ್ಷ ಇರುತ್ತದೆ.

ಈ ಎಲ್ಲ ಕಾರಣಗಳಿಂದ ಹಿರೇಹಳ್ಳ ಪ್ರದೇಶದಲ್ಲಿ ಜಿಂಕೆಧಾಮ ನಿರ್ಮಾಣ ಮಾಡಿ ಅವುಗಳಿಗೆ ಹುಲ್ಲು, ಮೇವು, ನೀರು ನೀಡಿ ಸಂರಕ್ಷಿತಧಾಮ ನಿರ್ಮಾಣ ಮಾಡಿದರೆ ವನ್ಯಜೀವಿಗಳನ್ನು ಉಳಿಸಬಹುದು.

ಚಿರತೆಧಾಮ: ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಚಿರತೆಗಳು ಇವೆ ಎಂಬ ಅಂದಾಜಿದೆ. ಈಚೆಗೆ ಒಂದು ವರ್ಷದಲ್ಲಿ ಇಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದು, 4ಕ್ಕೂ ಜಾನುವಾರುಗಳನ್ನು ಕೊಂದು ತಿಂದಿವೆ. ಚಿರತೆಗಳು ಪ್ರಮುಖವಾಗಿ ಕನಕಗಿರಿ, ಗಂಗಾವತಿ, ಕೊಪ್ಪಳ ತಾಲ್ಲೂಕಿನ ಆನೆಗೊಂದಿ, ಕಲ್ಲತಾವರಗೇರಾ, ಬೆಣಕಲ್ ಸೇರಿದಂತೆ ಅನೇಕ ಕಡೆ ಕಂಡು ಬಂದಿವೆ. ಜನ-ಜಾನುವಾರುಗಳಿಗೆ ತೊಂದರೆ ನೀಡಿದ ಮೂರು ಚಿರತೆಗಳನ್ನು ಹಿಡಿದುಸಾಗಿಸಲಾಗಿದೆ.

ಕನಕಗಿರಿ ಭಾಗದಲ್ಲಿ ಚಿರತೆಧಾಮ ನಿರ್ಮಾಣ ಮಾಡಿದರೆ ಸೂಕ್ತ ಎಂಬ ಪ್ರಸ್ತಾವ ಕೂಡಾ ಇದೆ. ಅವುಗಳ ಆಹಾರದ ಕೊರತೆ, ಗಣಿಗಾರಿಕೆ ಸದ್ದು, ನಶಿಸುತ್ತಿರುವ ಕಾಡುಗಳಿಂದ ಊರೊಳಕ್ಕೆ ನುಗ್ಗಿ ಜನಜೀವನಕ್ಕೆ ಆತಂಕ ಇದ್ದೇ ಇದೆ.

ಈ ಭಾಗದಲ್ಲಿ ಸಂಜೆಯಾದರೆ ಒಬ್ಬಂಟಿಯಾಗಿ ತಿರುಗಾಡಲು ಭಯಪಡುವಂತೆ ಆಗಿದೆ.ಧಾಮ ನಿರ್ಮಾಣ ಮಾಡಿ ಸಂರಕ್ಷಣೆ ಮಾಡಿದರೆ ವನ್ಯಜೀವಿಗೆ ಹೆಚ್ಚಿನ ಅನುಕೂಲ ಆಗಲಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಕರಡಿಧಾಮ: ಇದು ಗಂಗಾವತಿ, ಕೊಪ್ಪಳದ ಪೂರ್ವಭಾಗ, ಕನಕಗಿರಿಯಲ್ಲಿ 40ಕ್ಕೂ ಹೆಚ್ಚು ಕರಡಿಗಳು ಕಂಡು ಬರುತ್ತಿವೆ.
ಇವುಗಳ ಸಹಜ ಆವಾಸ ಸ್ಥಾನವಾದ ಕಲ್ಲು, ಗುಡ್ಡ, ಗುಹೆ, ಕುರುಚಲು ಕಾಡು ಸಂತತಿ ಹೆಚ್ಚಳಕ್ಕೆ ಕಾರಣವಾಗಿದೆ. ಈ ಸಾರಿ ಸಂತೋಷದ ಸಂಗತಿ ಎಂದರೆ ಅವುಗಳ ಅಚ್ಚುಮೆಚ್ಚಿನ ಆಹಾರವಾದ ಕಾಡಿನಲ್ಲಿ ಬೆಳೆಯುವ ಸೀತಾಫಲ, ಜೇನು ಸೇರಿದಂತೆ ವಿವಿಧ ಹಣ್ಣುಗಳನ್ನು ಪ್ರತಿವರ್ಷ ಕೊಯ್ಲು ಮಾಡಿ ಅರಣ್ಯ ಇಲಾಖೆ ಹರಾಜು ಮಾಡುತ್ತಿತ್ತು. ಆದರೆ ಇತ್ತೀಚಿನ ಎರಡು ವರ್ಷಗಳಿಂದ ಯಾವುದೇ ಹಣ್ಣು ಮಾರಾಟಕ್ಕೆ ನಿಷೇಧ ಹೇರಿದ್ದರಿಂದ ಅವುಗಳ ಸಂತತಿ ಹೆಚ್ಚಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಕರಡಿಧಾಮ ನಿರ್ಮಾಣ ಮಾಡಿ ಅದನ್ನು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದರೆ ಮಾನವ-ವನ್ಯಜೀವಿ ಸಂಘರ್ಷವನ್ನು ತಪ್ಪಿಸಬಹುದಾಗಿದೆ.

ಕುಷ್ಟಗಿ ತಾಲ್ಲೂಕಿನಲ್ಲಿ ಕಂಡು ಬರುವ ಅಪರೂಪದ ನರಿ, ತೋಳ, ಕಾಡು ಬೆಕ್ಕು ಸೇರಿದಂತೆ ನವಿಲುಗಳ ರಕ್ಷಣೆಗೆ ಧಾಮ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಅಂದುಕೊಂಡಂತೆ ನಡೆದರೆ ಜಿಲ್ಲೆಯ ಪ್ರಾಣಿ ಸಂಪತ್ತು ಕಾಪಾಡಿಕೊಂಡು ನಿಸರ್ಗದ ಸಮತೋಲನಕ್ಕೆ ಕಾರಣವಾಗುತ್ತದೆ. ಆದರೆ ಪ್ರಸ್ತಾವ ಸಲ್ಲಿಕೆಯಲ್ಲಿಯೇ ಸಂಬಂಧಿಸಿದ ಇಲಾಖೆ ಮುಳುಗಿದ್ದರಿಂದ ವನ್ಯಜೀವಿಗಳಿಗೆ ಸಂಕಷ್ಟ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT