ಮಂಗಳವಾರ, ಮಾರ್ಚ್ 28, 2023
26 °C
ಜಿಲ್ಲೆಯಲ್ಲಿ ಬಾಕಿ ಉಳಿದ ನೀರಾವರಿ ಯೋಜನೆಗಳು, ಪ್ರಣಾಳಿಕೆಯ ಒಂದು ಅಂಶ ಘೋಷಣೆಯ ನಿರೀಕ್ಷೆ

‘ಪ್ರಜಾ ಧ್ವನಿ’ ಆಗುವರೇ ಕಾಂಗ್ರೆಸ್ ನಾಯಕರು?

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಚಾರದ ಕಹಳೆ ಊದಲು ಕಾಂಗ್ರೆಸ್‌ ಹಮ್ಮಿಕೊಂಡಿರುವ ‘ಪ್ರಜಾಧ್ವನಿ’ ಬಸ್‌ ಯಾತ್ರೆ ಮಂಗಳವಾರ ನಗರಕ್ಕೆ ಬರಲಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಮತ್ತು ಕಾರ್ಯಾಧ್ಯಕ್ಷರು ಸೇರಿದಂತೆ ಅನೇಕ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಇವರೆಲ್ಲ ಇಲ್ಲಿನ ಪ್ರಜೆಗಳ ಬೇಡಿಕೆಗಳಿಗೆ ’ಧ್ವನಿ’ಯಾಗುವರೇ ಎನ್ನುವ ಪ್ರಶ್ನೆ ಜಿಲ್ಲೆಯ ಜನರದ್ದಾಗಿದೆ. ಜೊತೆಗೆ ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಚುನಾವಣೆ ಮತಬೇಟೆ ಪ್ರಚಾರ ಮತ್ತು ಶಕ್ತಿ ಪ್ರದರ್ಶನಕ್ಕೂ ಈ ಸಮಾವೇಶ ವೇದಿಕೆಯಾಗಲಿದೆ.

ಇದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದು, ನಗರದ ಪ್ರಮುಖ ರಸ್ತೆಗಳೆಲ್ಲ ಕಾಂಗ್ರೆಸ್‌ಮಯವಾಗಿವೆ. ಪಕ್ಷದ ಪೋಸ್ಟರ್‌ಗಳು, ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರನ್ನು ಸ್ವಾಗತಿಸಲು ಹಾಕಿರುವ ಬ್ಯಾನರ್‌ಗಳು ರಾರಾಜಿಸುತ್ತಿವೆ. ಕಾರ್ಯಕ್ರಮ ನಡೆಯಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿಯೂ ಸಿದ್ಧತೆಯ ಕಾರ್ಯ ನಡೆದಿತ್ತು.

ಮಂಗಳವಾರ ಸಂಜೆ 4.30ಕ್ಕೆ ಯಾತ್ರೆ ಹೊಸಪೇಟೆಯಿಂದ ನೇರವಾಗಿ ಕೊಪ್ಪಳಕ್ಕೆ ಬಂದು ಗವಿಸಿದ್ಧೇಶ್ವರ ಮಠಕ್ಕೆ ತೆರಳಲಿದೆ. ಸ್ವಾಮೀಜಿಯ ಆಶೀರ್ವಾದ ಪಡೆದು ಬಸವೇಶ್ವರ ವೃತ್ತದ ಮೂಲಕ ತಾಲ್ಲೂಕು ಕ್ರೀಡಾಂಗಣಕ್ಕೆ ಬರಲಿದೆ. ಬಳಿಕ ವೇದಿಕೆ ಕಾರ್ಯಕ್ರಮ ಜರುಗಲಿದೆ.

ಬೆಳಗಾವಿಯಲ್ಲಿ ಪ್ರಜಾಧ್ವನಿ ಯಾತ್ರೆ ಆರಂಭವಾದಾಗ ‘ಬಿಪಿಎಲ್‌ ಕುಟುಂಬಗಳಿಗೆ 10 ಕೆ.ಜಿ ಅಕ್ಕಿ ಮತ್ತು 200 ಯೂನಿಟ್‌ ತನಕ ಪ್ರತಿ ಕುಟುಂಬಗಳಿಗೂ ಉಚಿತ ವಿದ್ಯುತ್‌ ಪೂರೈಕೆ ಮಾಡಲಾಗುವುದು’ ಎಂದು ನಾಯಕರು ಪ್ರಣಾಳಿಕೆಯ ಅಂಶಗಳನ್ನು ಘೋಷಣೆ ಮಾಡಿದ್ದರು. ಯಾತ್ರೆಯ ಸಮಯದಲ್ಲಿ ಐದು ಕಡೆ ಪ್ರಣಾಳಿಕೆಯ ಅಂಶಗಳನ್ನು ಘೋಷಣೆ ಮಾಡುವ ಯೋಜನೆಯನ್ನು ಕಾಂಗ್ರೆಸ್‌ ಹಾಕಿಕೊಂಡಿದೆ. ಅದರಲ್ಲಿ ಒಂದು ಅಂಶ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಘೋಷಣೆ ಆಗಬಹುದು ಎನ್ನುವ ನಿರೀಕ್ಷೆ ಇಲ್ಲಿಗೆ ಜನರದ್ದು. ಕಾಂಗ್ರೆಸ್‌ ನಾಯಕರು ಕೂಡ ಇದೇ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಜಿಲ್ಲೆಯಲ್ಲಿ ನಡೆಸಿದ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳು ಪೂರ್ಣಗೊಳ್ಳದ ವಿಷಯಗಳೇ ಪ್ರಮುಖವಾಗಿ ಚರ್ಚೆಯಾಗಿದ್ದೆವು. ಇದು ಉಭಯ ಪಕ್ಷಗಳ ನಾಯಕರ ಜಟಾಪಟಿಗೂ ಕಾರಣವಾಗಿದ್ದವು.

ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಜನ ಎದುರು ನೋಡುತ್ತಿರುವ ಕೊಪ್ಪಳ ಏತ ನೀರಾವರಿ ಮತ್ತು ಸಿಂಗಟಾಲೂರು ನೀರಾವರಿ ಯೋಜನೆಗಳನ್ನು ಪೂರ್ಣಗೊಂಡಿಲ್ಲ. ಇದು ಈ ಬಾರಿಯ ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ. ಪ್ರಮುಖವಾದ ಈ ವಿಷಯದ ಬಗ್ಗೆ ಕಾಂಗ್ರೆಸ್‌ನ ನಾಯಕರು ‘ಚುನಾವಣಾ ಪ್ರಚಾರ ವೇದಿಕೆ’ಯಲ್ಲಿ ಏನು ಹೇಳಲಿದ್ದಾರೆ ಎನ್ನುವ ಕುತೂಹಲವಿದೆ.

ಪ್ರತಿ ತಿಂಗಳೂ ಸಿದ್ದರಾಮಯ್ಯ ಕಾರ್ಯಕ್ರಮ 

ಅಕ್ಟೋಬರ್‌ನಿಂದ ಪ್ರತಿ ತಿಂಗಳೂ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಜಿಲ್ಲೆಗೆ ಬಂದಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ಈಗ ಪಾಲ್ಗೊಳ್ಳಲಿರುವ ನಾಲ್ಕನೇ ಕಾರ್ಯಕ್ರಮ ಇದಾಗಿದೆ.

ಬಳ್ಳಾರಿಯಲ್ಲಿ ನಡೆದ ಭಾರತ್‌ ಜೋಡೊ ಯಾತ್ರೆಯ ಪೂರ್ವಭಾವಿ ಸಭೆ ನಡೆಸಲು ಅಕ್ಟೋಬರ್‌ 11ರಂದು ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನ. 20ರಂದು ತಾಲ್ಲೂಕಿನ ವನಬಳ್ಳಾರಿಯಲ್ಲಿ ಕಾಂಗ್ರೆಸ್‌ ಮುಖಂಡ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹನುಮಂತಪ್ಪ ಅರಸಿನಕೇರಿ ಕುಟುಂಬದವರ ಮದುವೆ ಕಾರ್ಯಕ್ರಮ ಮತ್ತು ಡಿ. 16ರಂದು ಕುಷ್ಟಗಿಯಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಜನ್ಮದಿನ ಮತ್ತು ಕಾಂಗ್ರೆಸ್‌ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಫೆಬ್ರುವರಿಯಲ್ಲಿ ಕೊಪ್ಪಳ ಮತ್ತು ಮಾರ್ಚ್‌ನಲ್ಲಿ ಯಲಬುರ್ಗಾದಲ್ಲಿ ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳು ನಿಗದಿಯಾಗಿವೆ ಎಂದು ಮೂಲಗಳು ತಿಳಿಸಿವೆ.

ಭಾರತ್‌ ಜೋಡೊ ಯಾತ್ರೆಯಿಂದ ದೇಶದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಪ್ರಜಾಧ್ವನಿಯಿಂದ ರಾಜ್ಯದಲ್ಲಿಯೂ ಮಹತ್ವದ ಬದಲಾವಣೆ ಆಗುತ್ತದೆ.
ರಾಘವೇಂದ್ರ ಹಿಟ್ನಾಳ, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು