ಭಾನುವಾರ, ಮೇ 16, 2021
22 °C
ಜನರಿಂದ ಸುರಕ್ಷಾ ನಿಯಮಗಳ ಪಾಲನೆ

ನಿಯಂತ್ರಣಕ್ಕೆ ಬಾರದ ಕೊರೊನಾ: ಲಾಕ್‌ಡೌನ್‌ ಸಂಕಷ್ಟದಲ್ಲಿ ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೋವಿಡ್‌ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಿದ್ದು, ಎರಡನೇ ಅಲೆ ಆರಂಭವಾದಗಿನಿಂದ ಒಟ್ಟು 18,278 ಜನರು ಸೋಂಕು ಪೀಡಿತರಾಗಿದ್ದಾರೆ.

ಶನಿವಾರ ನಡೆದ ಕೋವಿಡ್‌ ಸೋಂಕಿನ ಪತ್ತೆ ಪರೀಕ್ಷೆಯಲ್ಲಿ ಗಂಗಾವತಿ- 48, ಕೊಪ್ಪಳ- 69, ಕುಷ್ಟಗಿ-47, ಯಲಬುರ್ಗಾದಲ್ಲಿ 149 ಪ್ರಕರಣ ಪತ್ತೆಯಾಗಿವೆ. ಕೋವಿಡ್‌ ಕಾರಣದಿಂದ 70 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಕ್ಸಿಜನ್ ಮತ್ತು ಐಸಿಯು ಹಾಸಿಗೆಗಳ ಕೊರತೆಯಾಗದಂತೆ ತೀವ್ರ ನಿಗಾ ವಹಿಸಲಾಗಿದೆ. ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿ ಯಾವುದೇ ಸಮಸ್ಯೆಯಾಗದಂತೆ ಸಲಹೆ ನೀಡಿದ್ದಾರೆ.

ವಲಸೆ ಕಾರ್ಮಿಕರ ಸಮಸ್ಯೆ: ಕೋವಿಡ್‌ ಲಾಕ್‌ಡೌನ್‌ನಿಂದ ಸಾವಿರಾರು ಜನ ಉದ್ಯೋಗ ಕಳೆದುಕೊಂಡು ಮನೆಗೆ ಹಿಂತಿರುಗಿದ್ದಾರೆ. ಆದರೆ, ಸಂಕಷ್ಟದ ಈ ಪರಿಸ್ಥಿತಿಯಲ್ಲಿ ಇದುವರೆಗೆ ಯಾರೊಬ್ಬರೂ ಅವರ ನೆರವಿಗೆ ಧಾವಿಸಿಲ್ಲ. 

ಇಲ್ಲಿ ಧನವಂತರಿಗೇನೂ ಕೊರತೆಯಿಲ್ಲ. ಬಹುತೇಕ ಜನಪ್ರತಿನಿಧಿಗಳು ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯರು. ಆದರೆ, ಅವರು ಸಹ ಇದುವರೆಗೆ ಬಡವರ ನೋವಿಗೆ ಮಿಡಿಯುವ ಕೆಲಸ ಮಾಡಿಲ್ಲ.

ಹೋದ ವರ್ಷ ಇದೇ ಸಂದರ್ಭದಲ್ಲಿ ಲಾಕ್‌ಡೌನ್‌ ಘೋಷಿಸಿದಾಗ ಅನೇಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಜನರಿಗೆ ನೆರವಿನ ಹಸ್ತ ಚಾಚಿದ್ದರು. ಅನೇಕ ಸಂಘ ಸಂಸ್ಥೆಗಳು, ಉದ್ಯಮಿಗಳು, ಜನಪ್ರತಿನಿಧಿಗಳು ಮುಂದೆ ಬಂದಿದ್ದರು. ಕೆಲವರು ನೆರವಿನ ಹೆಸರಿನಲ್ಲಿ ಸಾಕಷ್ಟು ಪ್ರಚಾರ ಕೂಡ ಪಡೆದುಕೊಂಡಿದ್ದರು. ಮತ್ತೆ ಕೆಲವರು ಯಾವುದೇ ರೀತಿಯ ಸದ್ದುಗದ್ದಲವಿಲ್ಲದೆ ಸಹಾಯ ಮಾಡಿದ್ದರು.

ಎರಡ್ಮೂರು ತಿಂಗಳಿಗೆ ಸಾಕಾಗುವಷ್ಟು ಅಕ್ಕಿ, ಬೇಳೆ, ಜೋಳ, ಗೋಧಿ, ಅಡುಗೆ ಎಣ್ಣೆ, ಸಾಬೂನು, ಕೊಬ್ಬರಿ ಎಣ್ಣೆ, ಅರಿಶಿಣ, ಸಾಬೂನು, ಮಾಸ್ಕ್‌, ಸ್ಯಾನಿಟೈಸರ್‌ ಹೀಗೆ ಹಲವು ವಸ್ತುಗಳನ್ನು ಒಳಗೊಂಡ ಕಿಟ್‌ಗಳನ್ನು ತಯಾರಿಸಿ ಜನರಿಗೆ ನೆರವು ನೀಡಿದ್ದರು. ಈ ಸಲ ಯಾರೊಬ್ಬರೂ ಇದುವರೆಗೆ ಈ ಕುರಿತು ತುಟಿ ಬಿಚ್ಚಿಲ್ಲ. ನೆರವಿಗೆ ಮುಂದೆ ಕೂಡ ಬಂದಿಲ್ಲ.

ಜಿಲ್ಲೆಯಲ್ಲಿ 15,000 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳದವರ ಸಂಖ್ಯೆ ಇದಕ್ಕೂ ಹೆಚ್ಚಿದೆ. ಕೆಲಸ ಅರಸಿಕೊಂಡು ಅತಿ ಹೆಚ್ಚು ಗುಳೇ ಹೋಗುವವರಲ್ಲಿ ಈ ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗ ಅವರೆಲ್ಲ ತವರೂರಿಗೆ ಹಿಂತಿರುಗಿದ್ದಾರೆ.

ನಿತ್ಯದ ಕೂಲಿ ಅವಲಂಬಿಸಿಯೇ ಅವರ ಬದುಕು ನಡೆಯುತ್ತದೆ. ಆದರೆ, ವಾರದ ಹಿಂದೆ ಊರುಗಳಿಗೆ ಮರಳಿರುವ ಅವರು ಕೆಲಸವಿಲ್ಲದೆ ಮನೆಯಲ್ಲಿ ಸುಮ್ಮನೆ ಕೂತಿದ್ದಾರೆ. ಕೈಯಲ್ಲಿದ್ದ ಹಣ ಖಾಲಿಯಾಗಿದೆ. ಮನೆಯಲ್ಲಿನ ರೇಷನ್‌ ಮುಗಿಯುತ್ತ ಬಂದಿದ್ದು, ಅದು ಅವರನ್ನು ಚಿಂತೆಗೀಡು ಮಾಡಿದೆ.

ಈ ಹಿಂದೆ ಬಿಪಿಎಲ್‌ ಕುಟುಂಬದ ಮನೆಯ ಪ್ರತಿ ಸದಸ್ಯನಿಗೆ 7 ಕೆ.ಜಿ. ಅಕ್ಕಿ ಕೊಡಲಾಗುತ್ತಿತ್ತು. ಈಗ ಅದನ್ನು 5 ಕೆ.ಜಿ.ಗೆ ಇಳಿಸಲಾಗಿದೆ. ಇದು ಅವರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.

‘ಜಿಲ್ಲೆಯಲ್ಲಿ ಅಸಂಘಟಿತ, ಕೌಶಲವಿಲ್ಲದ ಕಾರ್ಮಿಕರ ಸಂಖ್ಯೆ ಬಹಳ ದೊಡ್ಡದಿದೆ. ಹೋದ ವರ್ಷದ ಲಾಕ್‌ಡೌನ್‌ನಿಂದ ಅವರು ಚೇತರಿಸಿಕೊಂಡಿಲ್ಲ. ಈಗ ಪುನಃ ಲಾಕ್‌ಡೌನ್‌ ಘೋಷಿಸಿರುವುದರಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ನಿರ್ಮಾಣ ಕಾರ್ಯಕ್ಕೆ ತಡೆ ಒಡ್ಡಿಲ್ಲ. ಆದರೆ, ಬಹುತೇಕ ಕಟ್ಟಡ ನಿರ್ಮಾಣ ಚಟುವಟಿಕೆಗಳು ನಿಂತಿವೆ. ಇದರಿಂದ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲೇ ಕೂತಿದ್ದಾರೆ’ ಎಂದು ಕಾರ್ಮಿಕ ಶಿವಪ್ಪ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು