ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದೆ ನಡೆದ ‘ಹಸಿರು ಕ್ರಾಂತಿ’

ಬಯಲು ಸೀಮೆಯಲ್ಲಿ ಮಲೆನಾಡಿನ ಅನುಭವ: ಸಂಕಷ್ಟದಲ್ಲಿ ನೆರವಾದ ನರೇಗಾ
Last Updated 5 ಜೂನ್ 2021, 6:02 IST
ಅಕ್ಷರ ಗಾತ್ರ

ಕನಕಗಿರಿ: ಬಯಲು ಸೀಮೆ ಪ್ರದೇಶಕ್ಕೆ ಹೆಸರಾದ ಈ ಭಾಗದ ಗುಡ್ಡಗಳ ಕಡೆಗೆ ಪಯಣ ಬೆಳಸಿದರೆ ಸಾಕು, ಮಲೆನಾಡಿನ ಪರಿಸರ ಅನುಭವವಾಗುತ್ತದೆ. ಎಲ್ಲೆಡೆ ಹಚ್ಚ ಹಸಿರು ನೋಡುಗರನ್ನು ಕೈ ಬೀಸಿ ಕರೆಯುತ್ತದೆ.

ಸಾಮಾಜಿಕ ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿಗಳ ಆಶ್ರಯದಲ್ಲಿ ನರೇಗಾ ಯೋಜನೆಯ ಹಣವನ್ನು ಬಳಸಿ ಈ ಭಾಗದ ಗುಡ್ಡ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಅರಣ್ಯ ಇಲಾಖೆಗೆ ಸೇರಿದ ಐದು ಗುಡ್ಡಗಳ ಪೈಕಿ 12 ಸಾವಿರ ಎಕರೆ ಪ್ರದೇಶದಲ್ಲಿ 15 ಅಡಿ ಉದ್ದ, 3 ಅಡಿ ಅಗಲ, 3 ಅಡಿ ಆಳ ಅಳತೆಯ 2000ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. 5000 ಕ್ಕೂ ಹೆಚ್ಚು ಗಿಡಮರಗಳು ಹಸಿರಾಗಿವೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮಣ್ಣು ಮತ್ತು ನೀರು ಸಂರಕ್ಷಣೆ (ಎಸ್‍ಎಂಸಿ) ಕಾಮಗಾರಿಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಕೂಲಿಕಾರರಿಗೆ ನರೇಗಾ ಕೆಲಸ ನೀಡಿದ ಪರಿಣಾಮ ಒಟ್ಟು 12,400 ಮಾನವ ದಿನಗಳ ಸೃಜನೆಯಿಂದ ಈ ಹಸಿರು ವಾತಾವರಣ ಸೃಷ್ಟಿಯಾಗಿದೆ.

ತಾಲ್ಲೂಕಿನ ಚಿಕ್ಕಮಾದಿನಾಳ, ಮುಸಲಾಪುರ, ಹುಲಿಹೈದರ, ಕರಡೋಣ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗುಡ್ಡಗಳು ಹಸಿರು ರೂಪ ಪಡೆದು ಕಂಗೊಳಿಸುತ್ತಿವೆ.

ಕಳೆದ ಎರಡು ವರ್ಷಗಳಿಂದಲೂ ತಾಲ್ಲೂಕು ಪಂಚಾಯಿತಿ, ಸಾಮಾಜಿಕ ಅರಣ್ಯ ಇಲಾಖೆ ಗಂಗಾವತಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಭಾಗದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ (ಎಸ್‌ಎಂಸಿ) ಕಾಮಗಾರಿಗೆ ಒತ್ತು ನೀಡಿದ ಪರಿಣಾಮ ಮಳೆ ನೀರು ಪೋಲಾಗುವುದನ್ನು ತಪ್ಪಿಸಲು ಟ್ರೆಂಚ್‌ಗಳನ್ನು(ಇಂಗು ಗುಂಡಿ) ತೆಗಿಸಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಲಾಗಿದೆ.

ತೆಗ್ಗುಗುಂಡಿಗಳಿಂದ ಭೂಮಿಯ ಅಂತರ್ಜಲ ಮಟ್ಟ ಸಹ ಹೆಚ್ಚಳವಾಗಿದೆ. ಸುತ್ತಮುತ್ತಲ್ಲಿನ ಗುಡ್ಡಗಳು ಹಸಿರುಮಯವಾಗಿವೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ರಾಮು ನಾಯಕ, ನಾಗೇಶ ಪೂಜಾರ, ಶರಣೆಗೌಡ ಹಾಗೂ ರವೀಂದ್ರ ಕುಲಕರ್ಣಿ ತಿಳಿಸುತ್ತಾರೆ.

ಚಿಕ್ಕಮಾದಿನಾಳ ಗ್ರಾ.ಪಂ. ವ್ಯಾಪ್ತಿಯ ಬಂಕಾಪುರ ಗ್ರಾಮದಲ್ಲಿ 120 ಜನ ಕೂಲಿಕಾರರು 45 ದಿನ ಕೆಲಸ ಮಾಡಿ 830 ಟ್ರೆಂಚ್ ನಿರ್ಮಾಣ ಮಾಡಿದರೆ ನಾಗಲಾಪುರ ಗ್ರಾಮದಲ್ಲಿ 95 ಕೂಲಿಕಾರರು 20 ದಿನ ಕೆಲಸ ಮಾಡಿ 300 ಟ್ರೆಂಚ್‌ಗಳನ್ನು ನಿರ್ಮಾಣ ಮಾಡಿದ್ದಾರೆ.

ಕರಡೋಣ ಗ್ರಾ.ಪಂ ವ್ಯಾಪ್ತಿಯ ಉಮಳಿ ಕಾಟಾಪುರದಲ್ಲಿ 105 ಕೂಲಿಕಾರ್ಮಿಕರು 30 ದಿನ ಕೆಲಸ ಮಾಡಿ 400 ಟ್ರೆಂಚ್‌ಗಳನ್ನು ತೆಗೆದಿದ್ದರಿಂದ ಇಲ್ಲಿನ ಬೆಟ್ಟದಲ್ಲಿ ನೆಡುತೋಪು ಯೋಜನೆಯಡಿ ಹಾಕಿದ್ದ 8000 ಗಿಡಗಳಿಗೆ ಮರುಜೀವ ಬಂದಿದೆ.

ಹುಲಿಹೈದರ ಗ್ರಾ.ಪಂ. ವ್ಯಾಪ್ತಿಯ ಹೊಸಗುಡ್ಡದಲ್ಲಿ 95 ಕೂಲಿ ಕಾರ್ಮಿಕರು 20 ದಿನ ಕೆಲಸ ಮಾಡಿ 200 ಟ್ರೆಂಚ್‌ಗಳನ್ನು ತೋಡಿದ್ದಾರೆ.

ಎರಡು ದಿನಗಳ ಹಿಂದೆ ಈ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಆದ್ದರಿಂದ ಅವು ಭರ್ತಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT