ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ನಡುವೆಯೂ ಖರೀದಿ

ಕೊರೊನಾ, ಬಸ್ ಬಂದ್: ಜಿಲ್ಲೆಯಲ್ಲಿ ತಗ್ಗದ ಚಂದ್ರಮಾನ ಯಗಾದಿ ಸಂಭ್ರಮ
Last Updated 13 ಏಪ್ರಿಲ್ 2021, 6:28 IST
ಅಕ್ಷರ ಗಾತ್ರ

ಕೊಪ್ಪಳ: ಭಾರತೀಯರ ಪಾಲಿಗೆ ಹೊಸ ವರ್ಷವೇ ಎಂದೇ ಪರಿಗಣಿತವಾದ ಚಂದ್ರಮಾನ ಯುಗಾದಿಯನ್ನು ಜಿಲ್ಲೆಯಾದ್ಯಂತ ಜನ ಏನೇ ತೊಂದರೆ ಇದ್ದರೂ ಸಂಭ್ರಮದಿಂದ ಆಚರಿಸಿದ್ದು ಕಂಡು ಬಂತು.

ಕೊರೊನಾ ಹಿನ್ನೆಲೆಯಲ್ಲಿ ಎರಡನೇಯ ಅಲೆಯ ಭೀತಿಯಲ್ಲಿ ಮಾಸ್ಕ್‌ ಧರಿಸದೇ, ಪರಸ್ಪರ ಅಂತರ ಇಲ್ಲದೆ ನಗರದ ಜೆಪಿ ಮಾರುಕಟ್ಟೆ ಸೇರಿದಂತೆ ಪ್ರಮುಖ ವ್ಯಾಪಾರ ವಹಿವಾಟು ಪ್ರದೇಶಗಳಲ್ಲಿ ಸಾವಿರಾರು ಜನ ನೆರೆದು ಹೂವು, ಹಣ್ಣು ಖರೀದಿಸುತ್ತಿರುವುದು ಕಂಡು ಬಂತು.

ಪ್ರಖರ ಬಿಸಿಲು ಮತ್ತು ಬೆಲೆ ಏರಿಕೆ ಮಧ್ಯೆ ಜನರು ಉತ್ಸಾಹದಿಂದ ಹಬ್ಬಕ್ಕೆ ಅಗತ್ಯವಾದ ಹೂವು, ಹಣ್ಣು, ಕಬ್ಬು, ಬಾಳೆ, ಬೆಲ್ಲ ಖರೀದಿಸಿದರು.

ಹೂವು, ಹಣ್ಣುಗಳ ಬೆಲೆ ದುಪ್ಪಟ್ಟು ಬೆಲೆಯಲ್ಲಿ ಏರಿಕೆ ಕಂಡರೂ ಖರೀದಿಸುವುದೇ ನಡೆದೇ ಇತ್ತು. ಹಿಂದೂಗಳ ಪಾಲಿನ ದೊಡ್ಡ ಹಬ್ಬವಾದ ಇದು, ವ್ಯಾಪಾರಸ್ಥರಿಗೂ ಪ್ರಮುಖವಾದ ಹಬ್ಬ ಲೇವಾದೇವಿ, ಖರೀದಿ, ಖಾತಾ ಪುಸ್ತಕ, ಹೊಲ, ಮನೆ ಲೀಸ್‌ ಪತ್ರಗಳು ಸೇರಿದಂತೆ ವಿವಿಧ ವ್ಯವಹಾರಗಳು ಭರ್ಜರಿಯಾಗಿ ನಡೆದವು.

ಸೋಮವಾರಅಮವಾಸ್ಯೆ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ಗವಿಮಠದ ಎದುರು ಹೊಸ ವಾಹನಗಳು ಪೂಜೆಗೆ ಸಾಲುಗಟ್ಟಿನಿಂತಿದ್ದವು. ಹೊಸ ಪಂಚಾಂಗ ಖರೀದಿ ಮತ್ತು ಪಠಣ, ಮಳೆ, ರಾಶಿ ಭವಿಷ್ಯ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.

ಮಂಗಳವಾರ ಯುಗಾದಿ ಪಾಡ್ಯಯನ್ನು ಈ ಭಾಗದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಇದನ್ನು ಪವಿತ್ರ ಮತ್ತು ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ.

ಗೃಹಪ್ರವೇಶ ಸೇರಿದಂತೆ ವಿವಿಧ ಖಾಸಗಿ ಕಾರ್ಯಕ್ರಮಗಳು ನಡೆಯುತ್ತವೆ. ಅತ್ಯಂತ ಪ್ರಶಸ್ತ ದಿನವಾಗಿದ್ದರಿಂದ ಪಾಡ್ಯಕ್ಕೆ ಹೆಚ್ಚಿನ ಮಹತ್ವವಿದೆ.

ಗ್ರಾಮೀಣ ಪ್ರದೇಶದಲ್ಲಿ ಯುಗಾದಿಯಂದು ಅಡವಿಗೆ ತೆರಳಿ ಮೊಲಗಳ ಬೇಟೆಯಾಡಿ ಅವುಗಳನ್ನು ಮೆರವಣಿಗೆ ಮೂಲಕ ತಂದು ಬಾಡೂಟ ಮಾಡುವ ಪದ್ಧತಿ ಕೂಡಾ ಇತ್ತು. ಅರಣ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಬೇಟೆಯನ್ನು ನಿಷೇಧಿಸಲಾಗಿದೆ.

ಇದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹದ್ದಿನ ಕಣ್ಣು ಇಟ್ಟು ಕಾಯುತ್ತಾರೆ. ಹನುಮಂತ ದೇವರ ಮಂದಿರದ ಎದುರು ಹಾಲೋಕಳಿ, ಬಣ್ಣದ ಓಕುಳಿ ಆಡುವ ಪದ್ಧತಿ ಕೂಡಾ ಇದೆ.

ಕೊರೊನಾ ಕಾರಣ ಸಂಕ್ಷಿಪ್ತವಾಗಿ ಧಾರ್ಮಿಕ ಆಚರಣೆಗಳು ನಡೆಯಲಿವೆ ಎನ್ನಲಾಗುತ್ತದೆ. ಪಾಡ್ಯದ ಕರಿದಿನದಂದು ಮಾಂಸದ ಊಟಕ್ಕೆ ಮೊದಲ ಪ್ರಾಶಸ್ತ್ಯವಿದ್ದು, ಮಾಂಸಾಹಾರಿಗಳು ಸಂಭ್ರಮದಿಂದ ಬಾಡೂಟ ಸೇವಿಸುವುದು ವಾಡಿಕೆಯೂ ಇದೆ.

ವಿವಿಧ ಭಾಗದಲ್ಲಿ ದೇವರ ಜಾತ್ರೆ, ಪಲ್ಲಕ್ಕಿ ಉತ್ಸವ, ಹೊಳೆಗೆ ದೇವರನ್ನು ಕರೆದುಕೊಂಡು ಹೋಗುವುದು, ಮುಖ ತೊಳೆಯುವ ಶಾಸ್ತ್ರ, ಎಲೆ ಪೂಜೆ, ಬಣ್ಣದಾಟ ಕೂಡಾ ನಡೆಯುತ್ತದೆ.

ಈ ಎಲ್ಲ ಕಾರಣಗಳಿಗಾಗಿ ಹಬ್ಬಕ್ಕೆ ಅಗತ್ಯ ವಸ್ತು ಖರೀದಿಗೆ ಜನರು ಟಂಟಂ, ರಿಕ್ಷಾ, ಟ್ರ್ಯಾಕ್ಸ್, ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿ ತಂಡೋಪತಂಡವಾಗಿ ಮಾರುಕಟ್ಟೆಗೆ ಬಂದಿದ್ದರಿಂದ ಗಿಜಿಗಿಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT