ಗುರುವಾರ , ಫೆಬ್ರವರಿ 25, 2021
30 °C
8ರಂದು ಪೋಷಕರು, ಶಿಕ್ಷಣ ಪ್ರೇಮಿಗಳಿಂದ ಮುಖ್ಯಮಂತ್ರಿಗೆ ಮನವಿ

ಸಿಎಂ ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯ ಮಾಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಮನಗರ: ಮುಖ್ಯಮಂತ್ರಿಗಳು ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯ ಮಾಡಿದರೆ, ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸಂಚಾಲಕ ಸಿ.ಆರ್. ಅರುಣ್‌ಕುಮಾರ್ ಹೇಳಿದರು.

ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಭಾನುವಾರ ನಡೆದ ‘ಸರ್ಕಾರಿ ಶಾಲೆಗಳನ್ನು ಉಳಿಸಲು ಮಿಸ್ಡ್‌ ಕಾಲ್‌ ಕೊಡಿ ಅಭಿಯಾನ’ದಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳು ವಾಸ್ತವ್ಯ ಮಾಡುವುದರಿಂದ ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿರುವ ಅವಜ್ಞೆ ದೂರವಾಗುತ್ತದೆ ಎಂದು ತಿಳಿಸಿದರು.

ಶಾಲೆಗಳನ್ನು ಸಬಲೀಕರಣಗೊಳಿಸುವುದು ಸರ್ಕಾರದ ಮುಖ್ಯ ಕಾರ್ಯವಾಗಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸಲು ಹಾಗೂ ವಿವಿಧ ಹೊಸ ಶಿಕ್ಷಣ ನೀತಿ ಜಾರಿ ಆಗ್ರಹಿಸಿ ಹಮ್ಮಿಕೊಂಡಿರುವ ಮಿಸ್ಡ್ ಕಾಲ್ ಅಭಿಯಾನಕ್ಕೆ ಜನತೆಯಿಂದ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಈಗಾಗಲೇ 1.95 ಲಕ್ಷಕ್ಕೂ ಹೆಚ್ಚು ಮಿಸ್ಡ್ ಕಾಲ್‌ಗಳು ದಾಖಲಾಗುವ ಮೂಲಕ ಸರ್ಕಾರಿ ಶಾಲೆ ಉಳಿಸುವ ಹೋರಾಟಕ್ಕೆ ಆನೆಬಲ ದೊರಕಿದಂತಾಗಿದೆ ಎಂದರು.

ಎಲ್ಲರಿಗೂ ಇಚ್ಛಾಶಕ್ತಿ ಇದ್ದರೆ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿಯನ್ನು ಹೆಚ್ಚಿಸಬಹುದು. ಇದರ ಪೂರ್ವಭಾವಿಯಾಗಿ ಈ ಮಿಸ್ಡ್ ಕಾಲ್ ಅಭಿಯಾನವನ್ನು ಹಮ್ಮಿಕೊಂಡು ಜನರ ಬೆಂಬಲ ಪಡೆಯಲಾಗುತ್ತಿದೆ. ಇದೇ 8ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಿಂದ ವಿಧಾನಸೌಧಕ್ಕೆ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ. ಈ ಆಂದೋಲನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ನೀವೂ ಮಿಸ್ಡ್‌ಕಾಲ್ ಕೊಡಿ: ಸರ್ಕಾರಿ ಶಾಲೆ ಉಳಿಸುವ ಅಂಗವಾಗಿ ಕೆಲವು ದಿನಗಳ ಹಿಂದೆಯಷ್ಟೇ ಆರಂಭಗೊಂಡ ಮಿಸ್ಡ್‌ಕಾಲ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 1.95 ಲಕ್ಷಕ್ಕಿಂತಲೂ ಅಧಿಕ ಮಂದಿ ಮಿಸ್ಡ್ ಕಾಲ್ ನೀಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ಇದರ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ರೂಪಿಸಲು ಮೊ: 7676444225ಗೆ ಮಿಸ್ಡ್‌ ಕಾಲ್ ನೀಡುವ ಮೂಲಕ ಜನರು ಈ ಆಂದೋಲನ ಜತೆ ಕೈ ಜೋಡಿಸಬೇಕು ಎಂದರು.

ಶ್ರೀರಾಮ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ತ್ಯಾಗರಾಜು ಮಾತನಾಡಿ ಬಡ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳನ್ನು ಉಳಿಸಬೇಕಾಗಿದೆ. ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಿದೆ ಎನ್ನುವುದನ್ನು ಈಗಾಗಲೇ ಹಲವು ಶಾಲೆಗಳು ತೋರಿಸಿಕೊಟ್ಟಿವೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು ಉಳಿಯಬೇಕು. ಅದಕ್ಕಾಗಿ ಹೊಸ ಶಿಕ್ಷಣ ನೀತಿ ಜಾರಿಗೆ ಬರಬೇಕು ಎಂದು ತಿಳಿಸಿದರು.

ಮುಖಂಡ ಕೆ. ಲೋಕೇಶ್‌ ಮಾತನಾಡಿ ಎಲ್ಲ ಶಾಲೆಗಳಲ್ಲಿಯೂ ಏಕರೂಪದ ಶಿಕ್ಷಣವನ್ನು ಜಾರಿಗೆ ತರಬೇಕು. ಕನ್ನಡ ಶಾಲೆಗಳ ಉಳಿವಿನ ಹೋರಾಟ ತೀವ್ರಗತಿಯಲ್ಲಿ ನಡೆಯಬೇಕು ಎಂದು ತಿಳಿಸಿದರು.

ಮುಖಂಡರಾದ ವೆಂಕಟಪ್ಪ, ಪುಟ್ಟಮಾದಯ್ಯ, ಮಾದಪ್ಪ, ವೆಂಕಟೇಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು