ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಕಾನ್ವೆಂಟ್‌ ಮೀರಿಸಿದ ಹೈಟೆಕ್‌ ಸರ್ಕಾರಿ ಪ್ರೌಢಶಾಲೆ

Published 9 ಜೂನ್ 2024, 6:52 IST
Last Updated 9 ಜೂನ್ 2024, 6:52 IST
ಅಕ್ಷರ ಗಾತ್ರ

ಮಂಡ್ಯ: ಶಿಕ್ಷಕರಿಗೆ ಹಾಜರಾತಿಗಾಗಿ ಬಯೋಮೆಟ್ರಿಕ್‌ ವ್ಯವಸ್ಥೆ, ಶಾಲೆಯ ಸುತ್ತಲೂ 16 ಸಿಸಿಟಿವಿ ಕ್ಯಾಮೆರಾ, ಸುಸಜ್ಜಿತ ಪ್ರಯೋಗಾಲಯ, ಯುಪಿಎಸ್‌ ಸೌಲಭ್ಯ, ಸ್ಮಾರ್ಟ್‌ ತರಗತಿ, ಗ್ರಂಥಾಲಯ, ಶಾಲಾ ಮುಂಭಾಗದಲ್ಲಿ 25 ತೆಂಗಿನ ಮರಗಳ ಸಾಲು, ಸುತ್ತಲೂ 200ಕ್ಕೂ ಹೆಚ್ಚು ಮರಗಳ ಆವರಣ, ಹೂವು, ತರಕಾರಿ, ಅಲಂಕಾರಿಕ ಗಿಡಗಳ ತೋಟ. ಪ್ರಕೃತಿ ಮಡಿಲಲ್ಲಿ ಅರಳಿ ನಿಂತಿರುವ ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳೇ ಪುಣ್ಯವಂತರು.

ಇದಾವುದೋ ಖಾಸಗಿ ಶಾಲೆಯಲ್ಲ, ಇಂಟರ್‌ ನ್ಯಾಷನಲ್‌, ಪ್ಯಾನ್‌ ಇಂಡಿಯಾ ಶಿಕ್ಷಣ ಸಂಸ್ಥೆಯಲ್ಲ, ಇದು ಅಪ್ಪಟ ಸರ್ಕಾರಿ ಶಾಲೆ. ಇದೇ ತಾಲ್ಲೂಕಿನ ಉಮ್ಮಡಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ. ಶಿಸ್ತಿನ ಸಿಪಾಯಿ ಯಂತಿರುವ ಮುಖ್ಯಶಿಕ್ಷಕ ನಾಗರಾಜು ಅವರ ನೇತೃತ್ವದಲ್ಲಿ ಉಮ್ಮಡಹಳ್ಳಿ ಸರ್ಕಾರಿ ಶಾಲೆ ಮಕ್ಕಳ ಮನಸೂರೆ ಗೊಂಡಿದೆ. ಇಂಗ್ಲಿಷ್‌ ಕಾನ್ವೆಂಟ್‌ಗಳಿಗೆ ಸೆಡ್ಡು ಹೊಡೆದಿರುವ ಈ ಸರ್ಕಾರಿ ಶಾಲೆ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರ ಇಲಾಖೆ ಸಿದ್ಧಪಡಿಸಿರುವ ಮಕ್ಕಳ ಜಾಗೃತಿಯ ವಿಡಿಯೊ ಜಾಹೀರಾತಿನಲ್ಲಿ ಉಮ್ಮಡಹಳ್ಳಿ ಶಾಲೆಯ ಆವರಣವನ್ನು ಚಿತ್ರಿಸಲಾಗಿದೆ. ಇಲ್ಲಿಯ ಮಕ್ಕಳು, ಶಿಕ್ಷಕರು, ಮುಖ್ಯಶಿಕ್ಷಕರು ಮಾತನಾಡಿ ದ್ದಾರೆ. ಸರ್ಕಾರ ನೀಡುವ ಅನುದಾನ, ದಾನಿಗಳ ನೆರವು ಪಡೆದು ಶಾಲೆಯನ್ನು ಮಾದರಿಯನ್ನಾಗಿ ರೂಪಿಸಲಾಗಿದೆ.

ಕೆಇಎಸ್‌ ಅರ್ಹತೆ ಪಡೆದಿರುವ ಮುಖ್ಯಶಿಕ್ಷಕ ನಾಗರಾಜು ಅವರು ಬಿಆರ್‌ಸಿಯಾಗಿಯೂ ಕೆಲಸ ಮಾಡಿದ್ದು ಶಾಲೆಗಳಲ್ಲಿ ಶಿಸ್ತು ತರಲು ಸಾಕಷ್ಟು ಶ್ರಮಿಸಿದ್ದರು. ಉಮ್ಮಡಹಳ್ಳಿ ಶಾಲೆಗೆ ಮುಖ್ಯಶಿಕ್ಷಕರಾಗಿ ಬಂದ ನಂತರ ಶಾಲೆಯ ಚಿತ್ರಣವೇ ಬದಲಾಗಿದೆ. ನಗರಕ್ಕೆ ಸಮೀಪವಿರುವ ಕಾರಣ ಶಾಲಾ ಮಕ್ಕಳ ಸಂಖ್ಯೆ ಕುಸಿದಿತ್ತು. ಆದರೆ ನಾಗರಾಜು ಅವರ ವಿಶೇಷ ಶ್ರಮದಿಂದಾಗಿ ಶಾಲಾ ಮಕ್ಕಳ ಸಂಖ್ಯೆ ಈಗ 120 ದಾಟಿದೆ.

ಮುಖ್ಯಶಿಕ್ಷಕರ ಕೊಠಡಿ, ಶಿಕ್ಷಕ, ಶಿಕ್ಷಕಿಯರ ಕೊಠಡಿಗಳಿಗೆ ಪ್ರತ್ಯೇಕ ಶೌಚಾಲಯ, ಮಕ್ಕಳಿಗೆ ಸ್ವಚ್ಛತೆಯ ಶೌಚಾಲಗಳಿವೆ. ಕುಡಿಯುವ ನೀರಿಗಾಗಿ ಶುದ್ಧ ನೀರಿನ ಘಟಕವಿದೆ. ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಅರಳಿರುವ ಈ ಶಾಲೆಯಲ್ಲಿ ಬ್ಯಾಸ್ಕೆಟ್‌ ಬಾಲ್‌ ಆವರಣ, ಟೇಬಲ್‌ ಟೆನಿಸ್‌ ಅಂಕಣಗಳಿವೆ. ಸುಂದರ ಸ್ಮಾರ್ಟ್‌ ತರಗತಿ ನಿರ್ಮಿಸ ಲಾಗಿದ್ದು ₹ 2 ಲಕ್ಷ ಬೆಲೆಯ ಸ್ಮಾರ್ಟ್‌ ಬೋರ್ಡ್‌ ಅಳವಡಿಸಲಾಗಿದೆ.

ಗ್ರಾ.ಪಂ, ತಾಪಂ, ಜಿಪಂ ಅನುದಾನಗಳನ್ನು ಸಮರ್ಥವಾಗಿ ಬಳಸಿಕೊಂಡಿರುವ ಈ ಶಾಲೆ ಉತ್ತಮ ಸೌಲಭ್ಯಗಳನ್ನು ಒಳಗೊಂಡಿದೆ. ಮಂಡ್ಯ ತಾಲ್ಲೂಕು ಇಒ ಎಂ.ಎಸ್‌.ವೀಣಾ ಅವರು ತಮ್ಮ ಮೊದಲ ತಿಂಗಳ ₹ 50 ಸಾವಿರ ಸಂಬಳವನ್ನು ಸಂಪೂರ್ಣವಾಗಿ ಶಾಲೆಗೆ ಅರ್ಪಿಸಿರುವುದನ್ನು ಸಿಬ್ಬಂದಿ ಪ್ರೀತಿಯಿಂದ ನೆನೆಯುತ್ತಾರೆ.

ಬಿಸಿಯೂಟಕ್ಕೆ ಬೇಕಾದ ತರಕಾರಿಗೆ ಮಾರುಕಟ್ಟೆಗೆ ಹೋಗಬೇಕಾಗಿಲ್ಲ. ಶಾಲಾ ಆವರಣದಲ್ಲೇ ತರಕಾರಿ ಬೆಳೆದುಕೊಳ್ಳಲಾಗುತ್ತದೆ. ಮೂಲಂಗಿ, ಬದನೆ, ಬೆಂಡೆಕಾಯಿ, ನುಗ್ಗೇಕಾಯಿ ಗಿಡ ಸೇರಿದಂತೆ ಹಲವು ಹಣ್ಣಿನ ಗಿಡಗಳನ್ನೂ ಬೆಳೆಸಲಾಗಿದೆ. ತೇಗ, ನೇರಳೆ, ಹೊಂಗೆ, ಹರಳಿ, ಬಾಗೆ, ಬೇವು, ಬಿದಿರು, ಹೊನ್ನೆ, ಮಹಾಘನಿ ಮುಂತಾದ ಮರಗಳು ಶಾಲಾ ಆವರಣದಲ್ಲಿವೆ.

ಶಾಲೆಯ ಪ್ರವೇಶದ್ವಾರದಲ್ಲಿ 20 ತೆಂಗಿನ ಗಿಡಗಳ ಸಾಲಿದ್ದು ಉದ್ದಕ್ಕೂ ಲಾನ್‌ ನಿರ್ಮಾಣ ಮಾಡಲಾಗಿದೆ. ಶಾಲೆಗೆ ಪ್ರವೇಶಿಸುತ್ತಿದ್ದಂತೆ ಪ್ರತಿ ಕೊಠಡಿಗಳಿಗೂ ಹಾಕಲಾಗಿರುವ ನಾಮಫಲಕ ಗಮನ ಸೆಳೆಯುತ್ತವೆ. ಶಾಲಾ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ವಾಹನಗಳ ಪಾರ್ಕಿಂಗ್‌ ಸ್ಟ್ಯಾಂಡ್‌ ನಿರ್ಮಿಸಿಕೊಟ್ಟಿದ್ದಾರೆ.

ಶಾಲೆಯಲ್ಲಿ ದೊರೆಯುವ ಉತ್ತಮ ಸೌಲಭ್ಯ, ಗುಣಮಟ್ಟದ ಶಿಕ್ಷಣ ಕುರಿತಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿ.ಪಂ ಸಿಇಒ ಶಾಲೆಗೆ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶಾಲಾ ಆವರಣಕ್ಕೆ ಭೇಟಿ ನೀಡಿ ಸಸಿ ನೆಟ್ಟು ಹೋಗಿದ್ದಾರೆ.

ಸ್ವಯಂಚಾಲಿತ ಬೆಲ್‌...

ಶಾಲೆಯಲ್ಲಿ ಸ್ವಯಂಚಾಲಿತ ಬೆಲ್‌ ಅಳವಡಿಸಲಾಗಿದ್ದು ಪ್ರತಿದಿನ ತಂತಾನೆ ಗಂಟೆ ಬಾರಿಸುತ್ತದೆ.  ವಾರದ ದಿನಗಳು, ಶನಿವಾರದ ಬೆಳಿಗ್ಗೆ ತರಗತಿಯ ಅವಧಿಯಂತೆ ಸಮಯ ನಿಗದಿ ಮಾಡಲಾಗಿದ್ದು ಸಮಯಕ್ಕೆ ಸರಿಯಾಗಿ ಗಂಟೆ ಬಾರಿಸುತ್ತದೆ.

ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದ್ದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ಎಸ್‌ಎಸ್‌ಎಲ್‌ಸಿ ನಂತರ ಮುಂದೇನು, ವಿವಿಧ ಸ್ಪರ್ಧಾತ್ಮಕ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಬಾರಿಯ ಎನ್‌ಎಂಎಂಎಸ್‌ ಪರೀಕ್ಷೆಯಲ್ಲಿ ಉಮ್ಮಡಹಳ್ಳಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ತಾಲ್ಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT