ಶುಕ್ರವಾರ, ಏಪ್ರಿಲ್ 23, 2021
22 °C

ಮಂಡ್ಯ: ಎಫ್‌ಡಿಎ ಮನೆಗಳ ಮೇಲೆ ಎಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ

ಮಂಡ್ಯ: ಸಂಪಾದನೆಗೂ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಆರ್‌ಟಿಒ ಕಚೇರಿ ಎಫ್‌ಡಿಎಯೊಬ್ಬರ ಮನೆಗಳ ಮೇಲೆ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಎಫ್‌ಡಿಎ ಚನ್ನವೀರಪ್ಪ ಮೈಸೂರು ಆರ್‌ಟಿಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.  ನಗರದ ಕುವೆಂಪು ನಗರದಲ್ಲಿರುವ ನಿವಾಸ ಹಾಗೂ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿರುವ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದರು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಪರಿಶೀಲನೆಯಲ್ಲಿ ತೊಡಗಿದ್ದರು. ಪ್ರಮುಖ ಕಾಗದ ಪತ್ರಗಳು ಹಾಗೂ ಇತರ ದಾಖಲಾತಿಗಳನ್ನು ವಶಕ್ಕೆ ಪಡೆದರು.

‘ದಾಖಲಾತಿ ಪರಿಶೀಲನಾ ಕಾರ್ಯ ನಡೆಯುತ್ತಿದೆ. ತಪಾಸಣೆ ಮುಗಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿವೈಎಸ್‌ಪಿ ಧರ್ಮೇಂದ್ರ ತಿಳಿಸಿದರು. ದಾಳಿ ವೇಳೆ ಎಸಿಬಿ ಎಸ್ಪಿ ಅರುಣ್‌, ಇನ್‌ಸ್ಪೆಕ್ಟರ್‌ ಸತೀಶ್‌ ಇದ್ದರು.

ಗ್ರಾಮ ಲೆಕ್ಕಿಗ ವಶಕ್ಕೆ: ಪೌತಿ ಖಾತೆ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ, ತಾಲ್ಲೂಕಿನ ಹನುಮಂತಪುರದ ಗ್ರಾಮಲೆಕ್ಕಿಗ ಸಿ.ಚುಂಚಸ್ವಾಮಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಲಿಗೆರೆಪುರ ಗ್ರಾಮದ ಕುಮಾರ್ ಎಂಬುವರು 2020ರ ಸೆಪ್ಟೆಂಬರ್‌ನಲ್ಲಿ ತಮ್ಮ ತಂದೆ ಮಲ್ಲೇಗೌಡ ನಿಧನರಾಗಿದ್ದು, ತಾಯಿ ಭಾಗ್ಯಮ್ಮ ಅವರಿಗೆ ಪೌತಿ ಖಾತೆ ಮಾಡಿಕೊಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ಚುಂಚಸ್ವಾಮಿ ಹನುಮಂತಪುರದ ಗ್ರಾಮ ಲೆಕ್ಕಿಗರಾಗಿ ವರ್ಗಾವಣೆಗೊಂಡಿದ್ದರು.

ಪೌತಿಖಾತೆ ಮಾಡಿಕೊಡಲು ಅವರು ₹4 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಾರ್ಚ್‌ 4ರಂದು ₹1,000 ಪಡೆದಿದ್ದರು. ಈ ಸಂಬಂಧ ಕುಮಾರ್ ಎಸಿಬಿಗೆ ದೂರು ನೀಡಿದ್ದರು. ಉಳಿಕೆ ₹3,000 ಅನ್ನು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಸಂಜೆ 4ರ ಸುಮಾರಿಗೆ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ದಾಳಿಯ ವೇಳೆ ಡಿವೈಎಸ್‌ಪಿ ಧರ್ಮೇಂದ್ರ, ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಎ.ಸತೀಶ್, ಸಿಬ್ಬಂದಿ ವೆಂಕಟೇಶ್, ಕುಮಾರ್, ಪಾಪಣ್ಣ, ಮಾದೇವ, ಮಹೇಶ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು