ಬುಧವಾರ, ಜೂನ್ 23, 2021
30 °C
ಭಾರತೀನಗರ ಪೊಲೀಸ್ ಠಾಣೆಯಲ್ಲಿ ಮುಖಂಡರ ಸಭೆ

ಭಾರತೀನಗರ: ಅಂಬೇಡ್ಕರ್ ಜಯಂತಿ ಆಚರಣೆಗೆ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತೀನಗರ: ‘ಕೋವಿಡ್ -19 ಹಿನ್ನೆಲೆಯಲ್ಲಿ ಸಾರ್ವಜನಿಕರು ಒಂದೆಡೆ ಸೇರಲು ನಿರ್ಬಂಧ ವಿಧಿಸಿರುವ ಕಾರಣ ಈ ಬಾರಿಯ ಅಂಬೇಡ್ಕರ್ ಜಯಂತಿಯನ್ನು ಸಾಮೂಹಿಕವಾಗಿ ಆಚರಣೆ ಮಾಡಲು ಅವಕಾಶವಿಲ್ಲ’ ಎಂದು ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಶಿವಮ್ಮ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಗುರುವಾರ ನಡೆದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಕೊರೊನಾ ವೈರಸ್ ದಿನದಿಂದ ದಿನಕ್ಕೆ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಮಂಡ್ಯ ಜಿಲ್ಲೆಯಲ್ಲಿಯೂ 5 ಮಂದಿಗೆ ಕೊರೋನಾ ವೈರಸ್ ತಗುಲಿದೆ. ಈ ದಿಸೆಯಲ್ಲಿ ಸಾಮೂಹಿಕವಾಗಿ ಹಾಗೂ ಸಾರ್ವಜನಿಕವಾಗಿ ಅಂಬೇಡ್ಕರ್ ಜಯಂತಿ ಆಚರಣೆಗೆ ಈ ಬಾರಿ ಅವಕಾಶವಿಲ್ಲ. ತಮ್ಮ ತಮ್ಮ ಮನೆಗಳಲ್ಲಿ, ತಮ್ಮ ಸಂಘಟನೆಗಳ ಕಚೇರಿಗಳಲ್ಲಿ ಕಡಿಮೆ ಸಂಖ್ಯೆಯ ಜನರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಜಯಂತಿ ಆಚರಣೆ ಮಾಡಿಕೊಂಡರೆ ಅದಕ್ಕೆ ಅಡ್ಡಿಪಡಿಸುವುದಿಲ್ಲ’ ಎಂದು ತಿಳಿಸಿದರು.

‘ಶುಕ್ರವಾರ ಮುಸ್ಲಿಂ ಜನಾಂಗದವರು ಆಚರಿಸುವ ಷಬ್ ಎ ಬರಾತ್ ಹಾಗೂ ಕ್ರೈಸ್ತರು ಆಚರಿಸುವ ಗುಡ್ ಪ್ರೈಡೇ ಹಬ್ಬಗಳನ್ನು ಸಹ ಸಾಮೂಹಿಕವಾಗಿ ಹಾಗೂ ಸಾರ್ವಜನಿಕವಾಗಿ ಆಚರಣೆಗೆ ಅವಕಾಶ ಕೊಡುವುದಿಲ್ಲ. ಹಾಗಾಗಿ ಎಲ್ಲಾ ಧರ್ಮದವರು ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ಮನೆಗಳಲ್ಲೇ ಹಬ್ಬ ಆಚರಣೆ ಮಾಡಿಕೊಳ್ಳಬೇಕೆಂದು’ ಮನವಿ ಮಾಡಿದರು.

ಎಎಸ್ಐ ಸುದರ್ಶನ್ ಅವರು ಮಾತನಾಡಿ, ‘ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ 24 ಜನರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇವರೆಲ್ಲರ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ. ಆದರೂ ಮುಜಾಂಗ್ರತಾ ಕ್ರಮವಾಗಿ ಮನೆಯಿಂದ ಹೊರಗಡೆ ಬರದಂತೆ ಅವರಿಗೆ ಸೂಚಿಸಲಾಗಿದೆ. ಯಾರೂ ಕೂಡ ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ. ಯಾವುದೇ ಸಮಸ್ಯೆ ಬಂದರೂ ತಕ್ಷಣ ಪೊಲೀಸರಿಗೆ ಕರೆ ಮಾಡಿ’ ಎಂದು ಕೋರಿದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ ಅವರು ಮಾತನಾಡಿ, ‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಟ್ಟಣ ಪೊಲೀಸರ ಕಾರ್ಯ ಶ್ಲಾಘನೀಯ. ವಿವಿಧ ಹಳ್ಳಿಗಳ ರೈತರು ಪ್ರತಿನಿತ್ಯ ಸೊಪ್ಪು ತರಕಾರಿ ಮಾರಾಟ ಮಾಡಲು ಪಟ್ಟಣಕ್ಕೆ ಬರುತ್ತಾರೆ. ಅವರಿಗೆ ಯಾವುದೇ ಕಾರಣಕ್ಕೂ ತೊಂದರೆ ನೀಡಬಾರದೆಂದು’ ವಿನಂತಿಸಿದರು.

ರೈತ ಮುಖಂಡ ಕೆ.ಸಿ. ಮಾದೇಗೌಡ, ದಲಿತ ಸಮನ್ವಯ ಸಮಿತಿ ಅಧ್ಯಕ್ಷ ಮಣಿಗೆರೆ ಕಬ್ಬಾಳಯ್ಯ ಸಮಸ್ಯೆಗಳ ಕುರಿತು ಮಾತನಾಡಿದರು. ಸಮತಾ ಸೈನಿಕ ದಳ ಜಿಲ್ಲಾ ಘಟಕ ಅಧ್ಯಕ್ಷ ಕರಡಕೆರೆ ಯೋಗೇಶ, ದಸಂಸ ತಾಲ್ಲೂಕು ಸಂಚಾಲಕ ಗುಡಿಗೆರೆ ಬಸವರಾಜ, ದೊಡ್ಡರಸಿನಕೆರೆ ಮಹೇಂದ್ರ, ಮುಸ್ಲಿಂ ಮುಖಂಡ ಕರೀಂಖಾನ್ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು