ಮಳವಳ್ಳಿ: ತಳಗವಾದಿ ಹಾಲು ಉತ್ಪಾದಕರ ಸಹಕಾರ ಸಂಘದ 2018-19ನೇ ಸಾಲಿನಲ್ಲಿ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಿಸಿರುವ ಬಗ್ಗೆ ತನಿಖೆ ನಡೆಸಲು ಭಾನುವಾರ ನಡೆದ ವಾರ್ಷಿಕ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಸದಸ್ಯ ದಿಲೀಪ್ ಕುಮಾರ್ (ವಿಶ್ವ) ಹಾಗೂ ಟಿಎಪಿಸಿಎಂಎಸ್ ನಿರ್ದೇಶಕ ಟಿ.ಸಿ.ಚೌಡಯ್ಯ, ‘2018-19ನೇ ಸಾಲಿನಲ್ಲಿ ಕಾನೂನುಬಾಹಿರವಾಗಿ ನಿಯಮ ಉಲ್ಲಂಘಿಸಿ, ಇಲಾಖೆ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿದ್ದು, ಆಕ್ಷೇಪಣೆಯಲ್ಲಿಟ್ಟು ಅಮಾನತು ಲೆಕ್ಕದಲ್ಲಿಡಲಾಗಿದ್ದ ₹53 ಲಕ್ಷದ ಬಗ್ಗೆ ತನಿಖೆ ನಡೆಸಿ’ ಎಂದು ಆಗ್ರಹಿಸಿದರು. ಈ ಬಗ್ಗೆ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿದರು.
ಅಧ್ಯಕ್ಷ ಪಿ.ಬಸವರಾಜು ಮಾತನಾಡಿ, ‘ತನಿಖೆ ನಡೆಸಲು ಅನುಮತಿ ನೀಡಲಾಗುವುದು’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಟಿ.ಎಚ್.ಆನಂದ್ ಮಾತನಾಡಿ, ‘ಸಂಘದ ಸದಸ್ಯತ್ವ ಬಯಸುವ ರೈತರಿಗೆ ಷೇರು ನೀಡಬೇಕು, ಸಂಘದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
ಸಿಇಒ ಟಿ.ಎಲ್.ನಿಂಗರಾಜು ಮಾತನಾಡಿ, ‘ವಾರ್ಷಿಕ ವರದಿಯನ್ನು ಮಂಡಿಸಿ, ಸಂಘವು ರೈತರ ಪರವಾಗಿ ಕಾರ್ಯನಿರ್ವಹಿಸಿ ಕಳೆದ ಸಾಲಿನಲ್ಲಿ ₹4.38 ಕೋಟಿ ವಾಹಿವಾಟು ನಡೆಸಿದೆ. ₹20.16 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದರು.
ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಹಾಗೂ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಇಬ್ಬರು ರೈತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.