ಬುಧವಾರ, ಆಗಸ್ಟ್ 4, 2021
25 °C
ಹಕ್ಕಿಗಳಿಗೆ ಆಶ್ರಯ ನೀಡಿದ ಅಪರೂಪದ ಛಾಯಾಗ್ರಾಹಕ ಎಂ.ವಿ.ಕೃಷ್ಣ

ಮಾಗನೂರು: ಮನೆಯೇ ಪಕ್ಷಿಧಾಮ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಆ ಮನೆಯ ಸುತ್ತಲಿನ 10 ಗುಂಟೆ ಭೂಮಿಯಲ್ಲಿ ನೂರಾರು ಜಾತಿಯ ಗಿಡಮರಗಳಿವೆ. ಹಸಿರಿನಿಂದ ಕಂಗೊಳಿಸುವ ಅಲ್ಲಿ ಹಕ್ಕಿ ಗೂಡು ಕಟ್ಟಲು ಸಕಲ ಸೌಲಭ್ಯಗಳಿವೆ. ಎಲ್ಲಿಂದಲೋ ಬಂದ ಪಕ್ಷಿಗಳು ಅಲ್ಲಿ ಸಂತಾನೋತ್ಪತ್ತಿಗಾಗಿ ನಿಲ್ಲುತ್ತವೆ. ಹಕ್ಕಿಗಳ ಕಲರವದಿಂದ ಮೊಳಗುವ ಆ ಮನೆ ಪಕ್ಷಿಧಾಮದಂತೆ ಕಂಗೊಳಿಸುತ್ತಿದೆ. 

ಮಳವಳ್ಳಿಯಿಂದ ಮೂರೂವರೆ ಕಿ.ಮೀ ದೂರದಲ್ಲಿರುವ ಮಾಗನೂರು ಕಾಲೊನಿಯಲ್ಲಿ ಈ ತಾಣವಿದೆ. ಮಳವಳ್ಳಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಎಂ.ವಿ.ಕೃಷ್ಣ ಅವರು ಪಟ್ಟಣದಿಂದ ಹೊರ ಬಂದು ಪ್ರಕೃತಿಯ ನಡುವೆ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಮನೆಯ ಸುತ್ತಲೂ ಹಣ್ಣು, ತರಕಾರಿ, ಹೂವು, ತೆಂಗು, ಅಪರೂಪದ ಔಷಧೀಯ ಸಸ್ಯ ಬೆಳೆಸಿ ಪಕ್ಷಿಗಳಿಗೆ ಆಶ್ರಯ ನೀಡಿದ್ದಾರೆ. ಅಲ್ಲಲ್ಲಿ ನೀರಿನ ತೊಟ್ಟಿ, ಕಾಳುಗಳ ಡಬ್ಬಿ ಕಟ್ಟಿ ಹಕ್ಕಿಗಳ ಹೊಟ್ಟೆ ತುಂಬಿಸುತ್ತಿದ್ದಾರೆ.

ನೈಸರ್ಗಿಕ ಕೃಷಿಕರೂ ಆಗಿದ್ದು ರಾಸಾಯನಿಕ ಗೊಬ್ಬರ ಬಳಸದೇ ಸುತ್ತಲಿನ ಜಾಗಕ್ಕೆ ಅರಣ್ಯದ ರೂಪ ಕೊಟ್ಟಿದ್ದಾರೆ. ಪಕ್ಷಿಗಳು ಅಲ್ಲಿ ನೆಲೆ ನಿಲ್ಲಲು ಇದೂ ಕಾರಣವಾಗಿದೆ. ಮನೆಯ ಮುಂದೆ ಸುಳಿಯುವ ಪಕ್ಷಗಳ ಜೊತೆ ಆಪ್ತ ಬಾಂಧವ್ಯ ಬೆಳೆಸಿಕೊಂಡಿರುವ ಅವರು ನೂರಾರು ಪಕ್ಷಿಗಳ ಛಾಯಾಚಿತ್ರ ತೆಗೆದಿದ್ದಾರೆ. ಅವುಗಳಿಗೆ ‘ಪಕ್ಷಿ ಮತ್ತು ಗೂಡು’ ಪುಸ್ತಕ ರೂಪ ನೀಡಿದ್ದಾರೆ. ಪುಸ್ತಕ ಇಂಗ್ಲಿಷ್‌ಗೂ ಭಾಷಾಂತರಗೊಂಡಿದೆ.

ಸ್ಥಳೀಯ ಹಕ್ಕಿಗಳ ಜೊತೆಗೆ ವಲಸೆ ಪಕ್ಷಿಗಳು ಕೂಡ ಕೃಷ್ಣ ಅವರ ಪಕ್ಷಿಧಾಮಕ್ಕೆ ಬರುತ್ತವೆ. ಟೈಲರ್‌ ಬರ್ಡ್‌, ಸ್ಪಾಟೆಡ್‌ ಮುನಿಯ (ರಾಟ್‌ವಾಳ), ರಾಬಿನ್‌, ಬಿಳಿ ಉಬ್ಬಿನ ಪಿಕಳಾರ,  ಕಾಡುಗುಬ್ಬಿ, ಬಿಳಿ ರಣಹದ್ದು, ಹೂವಿನ ಹಕ್ಕಿ, ಮಟಪಕ್ಷಿ (ಟ್ರೀಪಿ), ಮರಕುಟಿಗ, ಹರಟೆ ಮಲ್ಲ, ಗಿಡುಗ ಅಲ್ಲಿ ಕಾಣಸಿಗುತ್ತವೆ. ಹಳದಿ ಬಾಲಬುಡುಕ (ಯೆಲ್ಲೋ ವಾಗ್ಟೈಲ್‌), ಅಪರಂಜಿ (ಗೋಲ್ಡನ್‌ ವಾರಿಯರ್‌)ಗಳೂ ಅಲ್ಲಿಗೆ ಬರುತ್ತವೆ.

‘ಗೂಡು ಕಟ್ಟಲು ಅವಶ್ಯವಾದ ತೆಂಗಿನ ಗರಿ, ಹತ್ತಿ ಗಿಡ ನಮ್ಮ ತೋಟದಲ್ಲಿವೆ. ಹಣ್ಣು, ಕಾಳು, ನೀರು ದೊರೆಯುತ್ತಿರುವ ಕಾರಣ ಪಕ್ಷಿಗಳು ಬರುತ್ತವೆ. ಅವು ಮೊಟ್ಟೆ ಇಟ್ಟು, ಮರಿ ಮಾಡುವುದಕ್ಕಾಗಿ  ಮಾತ್ರ ಗೂಡು ಕಟ್ಟಿಕೊಳ್ಳುತ್ತವೆ. ಸಂತಾನೋತ್ಪತ್ತಿ ಮುಗಿಸಿ ಹಾರಿ ಹೋಗುತ್ತವೆ. ಗೂಡು ಕಟ್ಟಲು ಒಂದು ವಾತಾವರಣ ಕಲ್ಪಿಸಿದರೆ ಯಾವುದೇ ಜಾಗ ಪಕ್ಷಿಧಾಮವಾಗಬಲ್ಲದು’ ಎನ್ನುತ್ತಾರೆ ಎಂ.ವಿ.ಕೃಷ್ಣ.

ಮನೆಯ ಸುತ್ತಲೂ ಮಳೆನೀರು ಸಂಗ್ರಹ ಘಟಕವಿದ್ದು 26 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಿದ್ದಾರೆ. ಸೌರಶಕ್ತಿಯಿಂದ ಬೆಳಕು ಪಡೆದಿದ್ದಾರೆ. ಪತ್ನಿ ಕಿರಣಾ ಅವರು ಪುತ್ತೂರಿನವರಾಗಿದ್ದು ತೋಟದ ಹಿಂದಿನ ಶಿಲ್ಪಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು