ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾವೇರಿ 5ನೇ ಹಂತ ಭಾರತದ ಅತಿದೊಡ್ಡ ಯೋಜನೆ: ಡಿ.ಕೆ.ಶಿವಕುಮಾರ್‌

ವಿಜಯದಶಮಿ ವೇಳೆಗೆ ಕಾವೇರಿ 5ನೇ ಹಂತದ ಯೋಜನೆ ಉದ್ಘಾಟನೆ: ಡಿ.ಕೆ.ಶಿವಕುಮಾರ್‌
Published : 23 ಸೆಪ್ಟೆಂಬರ್ 2024, 14:05 IST
Last Updated : 23 ಸೆಪ್ಟೆಂಬರ್ 2024, 14:05 IST
ಫಾಲೋ ಮಾಡಿ
Comments

ಹಲಗೂರು (ಮಂಡ್ಯ ಜಿಲ್ಲೆ): ‘ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳ ಜನರಿಗೆ ಕುಡಿಯಲು ನೀರು ಪೂರೈಸುವ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆಯನ್ನು ವಿಜಯದಶಮಿ ವೇಳೆಗೆ ನೆರವೇರಿಸುವ ಆಲೋಚನೆಯಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಮಳವಳ್ಳಿಯ ತೊರೆಕಾಡನಹಳ್ಳಿಯ ನೀರು ಶುದ್ಧೀಕರಣ ಮತ್ತು ಪಂಪಿಂಗ್ ಸ್ಟೇಷನ್ ಸಮೀಪ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಯ ಅಂತಿಮ ಹಂತದ ಕಾಮಗಾರಿಯನ್ನು ವೀಕ್ಷಿಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು.

‘ಬೆಂಗಳೂರು ಜನರಿಗೆ ಟ್ಯಾಂಕರ್ ಮೂಲಕ ನೀರು ಕೊಡುವುದನ್ನು ತಪ್ಪಿಸಿ ಮನೆ– ಮನೆಗೂ ಕುಡಿಯುವ ನೀರು ಹರಿಸುವುದು ನಮ್ಮ ಸಂಕಲ್ಪ. ಈ ಯೋಜನೆ ಜಾರಿಗೆ ಇದ್ದ ಅಡಚಣೆಗಳನ್ನು ಹಂತ– ಹಂತವಾಗಿ ನಿವಾರಿಸಲಾಗಿದೆ. ಈಗಾಗಲೇ 1,400 ಎಂ.ಎಲ್.ಡಿ ನೀರನ್ನು ನೀಡಲಾಗುತ್ತಿದ್ದು, ಇದಕ್ಕೆ 775 ಎಂ.ಎಲ್.ಡಿ ಯಷ್ಟು ನೀರು ಸೇರಿಸಲಾಗುವುದು. ಕನಿಷ್ಠ 10 ವರ್ಷ ಬೆಂಗಳೂರಿನಲ್ಲಿ ಕುಡಿಯಲು ನೀರಿನ ತೊಂದರೆ ಆಗಬಾರದು ಎಂದು ಯೋಜನೆ ರೂಪಿಸಲಾಗಿದೆ ಎಂದರು.

‘ಕೆಂಗೇರಿ ಸೇರಿದಂತೆ ಒಂದಷ್ಟು ಕಡೆ ಕಾಮಗಾರಿ ನಡೆಸಲು ಜಾಗಗಳ ಒತ್ತುವರಿ ತೊಂದರೆ, ಅರಣ್ಯ ಭೂಮಿಗಳ ತೊಂದರೆ ಸೇರಿದಂತೆ ಎಲ್ಲವನ್ನೂ ಬಗೆಹರಿಸಿದ್ದೇವೆ. ಅವರಿಗೆ ಪರಿಹಾರವಾಗಿ ಟಿ.ಡಿ.ಆರ್ ಕೊಟ್ಟಿದ್ದೇವೆ’ ಎಂದು ಮಾಹಿತಿ ನೀಡಿದರು.

₹5 ಸಾವಿರ ಕೋಟಿ ಮೊತ್ತದ ಯೋಜನೆ

5ನೇ ಹಂತ ಅನುಷ್ಠಾನದ ಬಳಿಕ 4 ಲಕ್ಷ ಹೊಸ ನೀರಿನ ಸಂಪರ್ಕ ನೀಡಲಾಗುತ್ತದೆ. ₹5 ಸಾವಿರ ಕೋಟಿ ಮೊತ್ತದಲ್ಲಿ ₹50 ಲಕ್ಷ ಜನರಿಗೆ ನೀರು ಒದಗಿಸುವ ದೇಶದ ದೊಡ್ಡ ಯೋಜನೆ ಇದಾಗಿದೆ. ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಜಪಾನ್ ಇಂಟರ್ ನ್ಯಾಷನಲ್ ಕೋ- ಆಪರೇಷನ್ ಏಜನ್ಸಿ (ಜೈಕಾ) ಸಂಸ್ಥೆ ಜೊತೆ ಸಾಲದ ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು.

‘ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಕೆಂಗೇರಿ, ಆನೇಕಲ್, ಯಶವಂತಪುರ, ಬ್ಯಾಟರಾಯನಪುರ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ ಹಲವು ಭಾಗಗಳಿಗೆ ನೀರು ಒದಗಿಸಲಾಗುವುದು. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ನಿವಾರಿಸಲೆಂದೇ ಈ ಬೃಹತ್ ಯೋಜನೆ ಅನುಷ್ಠಾನಕ್ಕೆ ತರುತ್ತಿದ್ದೇವೆ’ ಎಂದರು.

ಭಾರತದ ಅತಿದೊಡ್ಡ ಯೋಜನೆ

1.45 ಲಕ್ಷ ಮೆಗಾ ಟನ್ ಸ್ಟೀಲ್ ಪೈಪ್ ಗಳನ್ನು ಈ ಯೋಜನೆಯಲ್ಲಿ ಬಳಕೆ ಮಾಡಲಾಗಿದೆ. 110 ಕಿ.ಮೀ ಉದ್ದ ಪೈಪ್‌ಲೈನ್‌ ಅಳವಡಿಸಲಾಗಿದೆ. ಕನಕಪುರ ಬಳಿ ತಿರುವು ಮಾಡಲು ತೊಂದರೆ ಆಗಿತ್ತು. ಅದನ್ನು ಬಗೆಹರಿಸಲಾಗಿದೆ. ಇದೊಂದೇ ಹಂತದಲ್ಲಿ 775 ಎಂಎಲ್ ಡಿ ನೀರನ್ನು ಹರಿಸಲಾಗುತ್ತಿದೆ. ಭಾರತದಲ್ಲೇ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆ ಎಂದರು. 

‘ಕುಡಿಯುವ ನೀರಿನ ಸರಬರಾಜು ವಿಚಾರದಲ್ಲಿ ನಾವು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೇವೆ. ಕಳೆದ ಬೇಸಿಗೆ ವೇಳೆ 7 ಸಾವಿರ ಕೊಳವೆಬಾವಿಗಳು ಬತ್ತಿ ಹೋಗಿದ್ದರೂ ಅಧಿಕಾರಿಗಳು, ನೌಕರರು ಜನರ ಬದುಕಿಗೆ ತೊಂದರೆ ಆಗದಂತೆ ನೀರನ್ನು ನೀಡಿದ್ದಾರೆ. ಅವರ ಕೆಲಸಕ್ಕೆ, ಬದ್ಧತೆಗೆ ವಂದನೆಗಳು’ ಎಂದರು.

ದೇವಾಲಯ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಖಾಸಗಿಯವರಿಗೆ ನೀಡಬೇಕು ಎನ್ನುವ ವಿಚಾರದ ಬಗ್ಗೆ ಕೇಳಿದಾಗ ‘ಧಾರ್ಮಿಕ ದತ್ತಿ ಇಲಾಖೆ ಸರ್ಕಾರದ ಒಂದು ಭಾಗ. ಈ ಇಲಾಖೆಯನ್ನು ಇವತ್ತಿನಿಂದ ನಡೆಸಿಕೊಂಡು ಬರುತ್ತಿಲ್ಲ. ಕಬ್ಬಾಳಮ್ಮ, ಚಾಮುಂಡಿ ದೇವಸ್ಥಾನ ಯಾರ ಅಧೀನದಲ್ಲಿದೆ?. ಸರ್ಕಾರ ದೇವಸ್ಥಾನಗಳನ್ನು ನಡೆಸುವುದು ಸಂಪ್ರದಾಯ. ಖಾಸಗಿ ದೇವಾಲಯಗಳನ್ನು ಬೇಕಾದರೆ ಬೇರೆಯವರಿಗೆ ನೀಡಲಿ’ ಎಂದರು.

ತಿರುಪತಿ ಲಡ್ಡು ಕಲಬೆರಕೆ ಬಗ್ಗೆ ಕೇಳಿದಾಗ ‘ನಾನೂ ಲಡ್ಡು ತಿನ್ನುವವನೇ, ಪ್ರಸಾದ ತಿನ್ನುವವನೇ. ನನಗೆ ದೇವರ ಪ್ರಸಾದ ಹೇಗಿದ್ದರೂ ಅದನ್ನು ತಿರುಪತಿ ಲಡ್ಡು ಎಂದು ತಿನ್ನುತ್ತೇನೆ’ ಎಂದರು.

‘ವರದಿ ಬಂದ ನಂತರ ಕಾವೇರಿ ಆರತಿ’

‘ವಿರೋಧಪಕ್ಷಗಳ ಅಪಸ್ವರ, ವಿರೋಧವೇ ನಮಗೆ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸ್ಫೂರ್ತಿಯಾಗಲಿದೆ. ನಾವು ಕಾಟಾಚಾರಕ್ಕೆ ಕಾವೇರಿ ಆರತಿ ಮಾಡುವುದಿಲ್ಲ. ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಪ್ರವಾಸಿ ಕೇಂದ್ರದ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಕಾವೇರಿ ಆರತಿ ಪ್ರಾರಂಭ ಮಾಡಲು ನದಿಗಳಿಗೆ ಆರತಿ ನಡೆಸುವ ಸ್ಥಳಗಳಿಗೆ ಅಧ್ಯಯನ ಮಾಡಲು ತಂಡವನ್ನು ಕಳುಹಿಸಲಾಗಿತ್ತು. ವರದಿ ಬಂದ ನಂತರ ಕಾರ್ಯಕ್ರಮದ ರೂಪುರೇಷೆ ಬಗ್ಗೆ ತಿಳಿಸಲಾಗುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. 

ರೈತರು ಕಾಲುವೆಗಳಿಂದ ಅಕ್ರಮವಾಗಿ ನೀರು ತೆಗೆದುಕೊಳ್ಳುತ್ತಿದ್ದು, ಮಳವಳ್ಳಿ ತಾಲ್ಲೂಕಿನ ಕೊನೆಯ ಭಾಗಕ್ಕೆ ನೀರು ಹರಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಕಾಲುವೆಗಳಿಗೆ ಪಂಪ್ ಸೆಟ್ ಹಾಕಿಕೊಳ್ಳುವವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT