ಮಂಡ್ಯ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಮಾರ್ಚ್ 31ರಂದು 2023 ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಳ್ಳಲಿದ್ದು ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಜಿಲ್ಲೆಯಾದ್ಯಂತ 83 ಪರೀಕ್ಷಾ ಕೇಂದ್ರಗಳಲ್ಲಿ 21,036 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಸೇರಿದಂತೆ ಅಗತ್ಯ ಭದ್ರತೆ ಕೈಗೊಳ್ಳಲಾಗಿದೆ.
ಹೊಸದಾಗಿ ಹಾಗೂ ಪುನಾರಾವರ್ತಿತ 21,036 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಈ ಪೈಕಿ ಹೊಸದಾಗಿ 10,653 ಬಾಲಕರು, 9,903 ಬಾಲಕಿಯರು ಸೇರಿ 20,556 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಉಳಿದಂತೆ 310 ಬಾಲಕರು ಹಾಗೂ 170 ಬಾಲಕಿಯರು ಸೇರಿ 480 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಸೇರಿ 475 ಶಾಲೆಗಳಿದ್ದು, 83 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 61 ಶಾಲೆಗಳಿದ್ದು, 9 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಮದ್ದೂರು 88 ಶಾಲೆಗಳಿದ್ದು, 16 ಪರೀಕ್ಷಾ ಕೇಂದ್ರ ತೆರೆಯಲಾಗಿದೆ.
ಮಳವಳ್ಳಿ ತಾಲ್ಲೂಕಿನಲ್ಲಿ ಒಟ್ಟು 72 ಶಾಲೆಗಳಿದ್ದು, 13 ಪರೀಕ್ಷಾ ಕೇಂದ್ರ, ಮಂಡ್ಯ ಉತ್ತರ ವಲಯ 70 ಶಾಲೆಗಳಿದ್ದು, 13 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಮಂಡ್ಯ ದಕ್ಷಿಣ ವಲಯ 33 ಶಾಲೆಗಳಿದ್ದು, 6 ಪರೀಕ್ಷಾ ಕೇಂದ್ರಗಳಿರುತ್ತವೆ. ನಾಗಮಂಗಲ 53 ಶಾಲೆಗಳಿದ್ದು, 9 ಪರೀಕ್ಷಾ ಕೇಂದ್ರಗಳಿವೆ. ಪಾಂಡವಪುರ 48 ಶಾಲೆಗಳಿದ್ದು, 8 ಪರೀಕ್ಷಾ ಕೇಂದ್ರಗಳು ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 50 ಶಾಲೆಗಳಿದ್ದು, 9 ಪರೀಕ್ಷಾ ಕೇಂದ್ರ ತೆರೆಯಲಾಗಿದೆ.
ಪರೀಕ್ಷಾ ಕೇಂದ್ರಗಳ ಸುತ್ತ ಹದ್ದಿನ ಕಣ್ಣಿಡಲಾಗಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಗುಣಮಟ್ಟದ ಎಸ್ಸೆಸ್ಸೆಲ್ಸಿ ಫಲಿತಾಂಶ ಪಡೆಯಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರತಿ ಶಾಲೆಯಲ್ಲಿ ವಿವಿಧ ಚಟುವಟಿಕೆ ಹಮ್ಮಿಕೊಂಡಿದೆ, ಗುಂಪುವಾರು ಅಭ್ಯಾಸ ಮಾಡಿಸಲಾಗಿದೆ. ಶಾಲಾ ಹಂತದಲ್ಲಿ ಪ್ರತಿ ಶಿಕ್ಷಕರುಗಳಿಗೆ ಮಕ್ಕಳನ್ನು ದತ್ತು ನೀಡಲಾಗಿದೆ.
ಪ್ರತಿ ಶಾಲೆಯಲ್ಲಿ ಶೈಕ್ಷಣಿಕವಾಗಿ ವಿಷಯವಾರು ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅಂತಹ ವಿದ್ಯಾರ್ಥಿಗಳಿಗೆ ಶಾಲಾ ಅವಧಿಯ ಮೊದಲು ಮತ್ತು ನಂತರ ಒಂದು ಗಂಟೆಗಳ ಕಾಲ ವಿಶೇಷ ತರಬೇತಿ ನಡೆಸಲಾಗಿದೆ. ಮಕ್ಕಳು ಧೈರ್ಯವಾಗಿ ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬುವ ಸಲುವಾಗಿ ವಿಷಯ ತಜ್ಞರಿಂದ ಶೈಕ್ಷಣಿಕ ಮಾರ್ಗದರ್ಶನ ಹಾಗೂ ಪರೀಕ್ಷಾ ಚೈತನ್ಯ ಉಪನ್ಯಾಸವನ್ನು ಮಂಡ್ಯ ಡಯಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ನಿಷೇಧಾಜ್ಞೆ: 2023ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲೆಯಲ್ಲಿ ಸುಗಮವಾಗಿ ನಡೆಸುವ ದೃಷ್ಟಿಯಿಂದ ಜಿಲ್ಲೆಯ 83 ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಆದೇಶ ಹೊರಡಿಸಿದ್ದಾರೆ. ಪರೀಕ್ಷಾ ದಿನಗಳಂದು ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ ಇರುವ ಜೆರಾಕ್ಸ್, ಕಂಪ್ಯೂಟರ್ ಹಾಗೂ ಸೈಬರ್ ಸೆಂಟರ್‌ಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಆದೇಶಿಸಲಾಗಿದೆ.
****
ಎಸ್ಸೆಸ್ಸೆಲ್ಸಿ ಪರೀಕ್ಷೆಯು ಸುಗಮವಾಗಿ ನಡೆಯಲು ಅಗತ್ಯಕ್ರಮ ವಹಿಸಲಾಗಿದೆ. ಪೋಷಕರಾಗಲಿ, ವಿದ್ಯಾರ್ಥಿಗಳಾಗಲಿ ಆತಂಕ ಪಡುವುದು ಬೇಡ, ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೊಠಡಿಗೆ ತೆರಳಿ , ಧೈರ್ಯವಾಗಿ ಪರೀಕ್ಷೆ ಬರೆಯಬೇಕು.
–ಎಸ್.ಟಿ.ಜವರೇಗೌಡ, ಉಪ ನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.