ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಓದುಗರಾಗಿದ್ದರೆ ಸಿನಿಮಾ ಸೃಷ್ಟಿ ಸಾಧ್ಯ: ನಾಗತಿಹಳ್ಳಿ ಚಂದ್ರಶೇಖರ

‘ಸಿನಿರಮಾ– ರಾಷ್ಟ್ರಮಟ್ಟದ ಕಿರುಚಿತ್ರ ಉತ್ಸವ’: ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ ಅಭಿಮತ
Last Updated 10 ಮಾರ್ಚ್ 2023, 11:10 IST
ಅಕ್ಷರ ಗಾತ್ರ

ಮೈಸೂರು: ‘ಶಕ್ತಿಶಾಲಿ ಮಾಧ್ಯಮವಾದ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಮೊದಲು ಹೆಚ್ಚು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು’ ಎಂದು ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ ಸಲಹೆ ನೀಡಿದರು.

ನಗರದ ಅಮೃತ ವಿಶ್ವ ವಿದ್ಯಾಪೀಠದ ದೃಶ್ಯ ಸಂವಹನ ವಿಭಾಗವು ಶುಕ್ರವಾರ ಆಯೋಜಿಸಿದ್ದ ‘ಸಿನಿರಮಾ– ರಾಷ್ಟ್ರಮಟ್ಟದ ಕಿರುಚಿತ್ರ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ಹೆಚ್ಚು ನೋಡುಗರಾಗಿದ್ದೇವೆ. ಓದುವ ಅಭಿರುಚಿ ಕಳೆದುಕೊಂಡಿದ್ದೇವೆ. ಉತ್ತಮ ಸಿನಿಮಾ ಸೃಷ್ಟಿಗೆ ಸಾಹಿತ್ಯ ಓದುಗರಾಗಿರಬೇಕು. ಸಾಹಿತ್ಯ, ರಂಗಭೂಮಿ ಹಾಗೂ ಲಲಿತಕಲೆಗಳ ಪರಿಚಯವಿರಬೇಕು. ಆಗ ಮಾತ್ರ ಸಮೂಹ ಕಲೆಯಾದ ಸಿನಿಮಾ ನಮ್ಮದಾಗಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಸಿನಿಮಾ ನಿರ್ದೇಶಕ, ಕಲಾವಿದರಿಗೆ ಸಾಮಾಜಿಕ ಜವಾಬ್ದಾರಿ ಮುಖ್ಯ. 200 ವರ್ಷದ ಇತಿಹಾಸವಿರುವ ಸಿನಿಮಾವು ಸಾಹಿತ್ಯ, ರಂಗಭೂಮಿ ಸೇರಿದಂತೆ ಎಲ್ಲ ಕಲೆಗಳನ್ನು ಜನರಿಗೆ ಪರಿಣಾಮಕಾರಿಗೆ ದಾಟಿಸಿದೆ ಎಂಬುದನ್ನು ನೆನಪಿನಲ್ಲಿಟ್ಟು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸಿನಿಮಾ ಮಾಡಲು ಹಣದಷ್ಟೇ ಪ್ರೀತಿ–ಹುಚ್ಚು ಇರಬೇಕಾಗುತ್ತದೆ. ಅದು ಅನ್ನ– ನೀರು ಆಗಬೇಕು. ಅದನ್ನೇ ಧೇನಿಸಬೇಕು’ ಎಂದು ಹೇಳಿದ ಅವರು, ಅಮೆರಿಕದ ಕಿರುಚಿತ್ರ ನಿರ್ದೇಶಕನೊಬ್ಬ 8 ತಿಂಗಳು ಹೊಟೇಲ್‌ನಲ್ಲಿ ಕೆಲಸ ಮಾಡಿ, ಅದೇ ಹಣದಲ್ಲಿ 4 ತಿಂಗಳು ಸಿನಿಮಾ ಮಾಡುವ ಅಭಿರುಚಿಯನ್ನು ಉದಾಹರಿಸಿದರು.

‘ದೃಶ್ಯ ಮಾಧ್ಯಮದಲ್ಲಿ ಕಿರು ಚಿತ್ರ ಪ್ರಕಾರಕ್ಕೆ ಮಹತ್ವದ ಸ್ಥಾನವಿದೆ. ದೊಡ್ಡ ಸಿನಿಮಾ ಮಾಡಲು ಅನುಭವ ನೀಡುತ್ತದೆ. ಹೀಗಾಗಿ ಕಿರುಚಿತ್ರ ತಯಾರಕರನ್ನು ಉಪೇಕ್ಷಿಸುವಂತಿಲ್ಲ. ಪುರಾಣವನ್ನು ಕೆಲವೇ ನಿಮಿಷದಲ್ಲಿ ಹೇಳುವ ಸಾಮರ್ಥ್ಯ ಕಿರುಚಿತ್ರಗಳಿಗಿದೆ’ ಎಂದು ಅಭಿಪ್ರಾಯಪಟ್ಟರು.

‘ದಶಕದ ಹಿಂದೆ ಸಿನಿಮಾ ಕಲೆಯಾಗಿತ್ತು. ಇಂದು ಮಾರಾಟದ ಸರಕಾಗಿದೆ. ಪ್ರಾಯೋಜಕತ್ವ, ಮಾರಾಟ ಹೊಸಕಾಲದ ವಿದ್ಯಮಾನವಾಗಿದ್ದು, ಸೃಜಿಸುವ ಕ್ರಿಯೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು’ ಎಂದರು.

‘ಸಿನಿಮಾ ಸಂಸ್ಕೃತಿಯನ್ನು ಅರಿಯಲು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಬೇಕು. ಆಗ ಮಾತ್ರ ಸಿನಿಮಾ ಜಗತ್ತಿನೊಂದಿಗೆ ನಾವು ಉನ್ನತೀಕರಿಸಿಕೊಳ್ಳುತ್ತೇವೆ. ಹೊಸ ಕಾಲದ ತಂತ್ರಜ್ಞಾನ, ಚಿತ್ರಕಥೆ ನಿರೂಪಣೆ, ತಾಂತ್ರಿಕತೆಯನ್ನು ತಿಳಿಯಲು ಹಾಗೂ ಸಿನಿಮಾ ಜಗತ್ತಿನ ಸವಾಲನ್ನು ಮೀರಲು ಸಾಧ್ಯವಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ಜಾತ್ಯತೀತ ಮನೋಭಾವ ಇರಬೇಕು’: ‘ಕಲಾವಿದನಿಗೆ, ನಿರ್ದೇಶಕನಿಗೆ ಜನರ ಸಂಕಷ್ಟಗಳ ಅರಿವಿರಬೇಕು. ಬೆಲೆ ಏರಿಕೆ ಏಕೆ ಹೆಚ್ಚಾಗಿದೆ. ಕೋಮುಗಲಭೆಗಳು ಏಕೆ ನಡೆಯುತ್ತಿವೆ. ಅದನ್ನು ಎದುರಿಸುವುದು ಹೇಗೆ ಎಂಬ ಪ್ರಶ್ನೆಗಳಿರಬೇಕು. ಮನುಷ್ಯನ ನಡುವೆ ಜಾತ್ಯತೀತತೆ ಇದ್ದರೆ ಮಾತ್ರ ಸಮಾಜಕ್ಕೆ ಒಳ್ಳೆಯದನ್ನು ನೀಡಲು ಸಾಧ್ಯ ಎಂಬ ಭಾವ ಮೂಡಿಸಿಕೊಳ್ಳಬೇಕು’ ಎಂದು ರಂಗಕರ್ಮಿ ಮಂಡ್ಯ ರಮೇಶ್‌ ಹೇಳಿದರು.

‘ಸಿನಿಮಾ ನಿರ್ದೇಶಕರಾಗಬೇಕೆಂದರೆ ಸಾಹಿತ್ಯ ಪ್ರಜ್ಞೆ ಇರಬೇಕು. ಕುತೂಹಲಿಯಾಗಿರಬೇಕು. ಚಳವಳಿಗಳು ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ತಯಾರಿಸಿದ ಸಿನಿಮಾ ಜನರ ಪ್ರತಿನಿಧಿಯಾಗಲು ಸಾಧ್ಯ’ ಎಂದರು.

‘ಇಂದು ಮಾಡುವ ಕಿರುಚಿತ್ರ, ಮುಂದೆ ಮಾಡವ ಸಿನಿಮಾದ ಗುರುತಿನ ಚೀಟಿಯಾಗುತ್ತದೆ. ಕಿರುಚಿತ್ರ ಮಾಡುವಾಗಲೂ ಶ್ರಮ, ಶ್ರದ್ಧೆ ಇರಬೇಕು. ಸಿನಿಮಾ ನಟರು ಜಿಮ್‌ನಲ್ಲಿ ಹುಟ್ಟುವುದಿಲ್ಲ, ನಟಿಯರು ಬ್ಯೂಟಿ ಪಾರ್ಲರ್‌ನಲ್ಲಿ ಸೃಷ್ಟಿಯಾಗುವುದಿಲ್ಲ. ಸಂತೆ, ಜಾತ್ರೆ, ಜನರ ನಡುವೆ ಇರುತ್ತಾರೆಂಬ ಸೂಕ್ಷ್ಮತೆ ಬರಬೇಕು’ ಎಂದು ಅಭಿಪ್ರಾಯಪಟ್ಟರು.

‘ಅಮೃತ ಸಿಂಚನ’ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಚಿತ್ರಕಥೆ ಬರವಣಿಗೆ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್, ಸಿನಿಮಾ ಮಾರುಕಟ್ಟೆ ಮತ್ತು ಪ್ರಚಾರ ಕಲೆ ಕುರಿತು ಡಾ.ಸಂಗೀತಾ ಜನಚಂದ್ರನ್ ಉಪನ್ಯಾಸ ನೀಡಿದರು.

ಕಾಲೇಜಿನ ನಿರ್ದೇಶಕ ಅನಂತಾನಂದ ಚೈತನ್ಯ, ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್, ಅಕಾಡೆಮಿಕ್ ಡೀನ್ ಡಾ.ರೇಖಾ ಭಟ್, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಬಾಲಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT