ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಡಿಸಿಸಿ ಬ್ಯಾಂಕ್‌: ಕಾಂಗ್ರೆಸ್‌ ಬೆಂಬಲಿತರಿಗೆ ಬಹುಮತ

ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಅಮರಾವತಿ ಅಶ್ವತ್ಥ್‌, ಹಾಲಹಳ್ಳಿ ಅಶೋಕ್‌ಗೆ ಗೆಲುವು
Last Updated 5 ನವೆಂಬರ್ 2020, 15:47 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ಆಡಳಿತ ಮಂಡಳಿಯ 9 ನಿರ್ದೇಶಕ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ 6 ಅಭ್ಯರ್ಥಿಗಳು, ಜೆಡಿಎಸ್‌ ಬೆಂಬಲಿತ 3 ಅಭ್ಯರ್ಥಿಗಳು ಜಯಗಳಿಸಿದರು.

12 ಸ್ಥಾನಗಳಲ್ಲಿ 3 ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಗಿದೆ. ಅವರಲ್ಲಿ ಇಬ್ಬರು ಕಾಂಗ್ರೆಸ್‌ ಬೆಂಬಲಿತರು, ಒಬ್ಬರು ಜೆಡಿಎಸ್‌ ಬೆಂಬಲಿತರು ಇದ್ದಾರೆ. ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರ ಸಂಖ್ಯೆ 8ಕ್ಕೇರಿದ್ದು ನಿಚ್ಚಳ ಬಹುಮತ ಸಾಧಿಸಿದ್ದಾರೆ. ಜೆಡಿಎಸ್‌ ಬೆಂಬಲಿತ ನಿರ್ದೇಶಕರು 5 ಮಂದಿ ಇದ್ದಾರೆ.

ಗುರುವಾರ ನಗರದ ಲಕ್ಷ್ಮಿ ಜನಾರ್ಧನ ಪ್ರೌಢಶಾಲೆಯಲ್ಲಿ ಚುನಾವಣೆ ನಡೆಯಿತು. ತೀವ್ರ ಕುತೂಹಲ ಕೆರಳಿಸಿದ್ದ ಮಳವಳ್ಳಿ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ 21 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಪಿ.ಎಂ.ನರೇಂದ್ರಸ್ವಾಮಿ 26 ಮತ ಗಳಿಸಿದರೆ, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ವಿಶ್ವನಾಥ್‌ 5 ಮತ ಗಳಿಸಿ ಪರಾಭವಗೊಂಡರು.

ಪ್ರತಿಷ್ಠಿತ ಕ್ಷೇತ್ರ ಎಂದೇ ಬಿಂಬಿತವಾಗಿದ್ದ ಮಂಡ್ಯ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್‌ನ ಅಮರಾವತಿ ಅಶ್ವತ್ಥ್ 4 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅಮರಾವತಿ ಅಶ್ವತ್ಧ್‌ 24 ಮತ ಗಳಿಸಿದರೆ, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಸಾತನೂರು ಸತೀಶ್‌ 21 ಮತ ಪಡೆದು ಪರಾಭವಗೊಂಡರು.

ಮದ್ದೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್‌ ಪಿ.ಸಂದರ್ಶ 23 ಮತಗಳ ಅಂತರದಿಂದ ಗೆಲುವು ಪಡೆದರು. ಸಂದರ್ಶ 34 ಮತ ಪಡೆದರೆ, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಎಂ.ಹೊನ್ನೇಗೌಡ 11 ಮತ ಗಳಿಸಿದರು.

ಕೆ.ಆರ್‌.ಪೇಟೆ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಎಚ್‌.ಕೆ.ಅಶೋಕ್‌ 12 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅಶೋಕ್‌ 21, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ವಿ.ಡಿ.ಹರೀಶ್‌ 9 ಮತ ಗಳಿಸಿದರು.

ನಾಗಮಂಗಲ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಎಚ್‌.ಎಸ್‌.ನರಸಿಂಹಯ್ಯ 4 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ನರಸಿಂಹಯ್ಯ 9, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಎಚ್‌.ವಿಶ್ವನಾಥ್‌ 5 ಮತ ಗಳಿಸಿದರು.

ಬಳಕೆದಾರರ ಮತ್ತು ಸಂಸ್ಕರಣ ಸಹಕಾರ ಸಂಘಗಳು, ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಹಾಲಹಳ್ಳಿ ಅಶೋಕ್‌ 28 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅಶೋಕ್‌ 67, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಕೆ.ಎಲ್‌.ದೊಡ್ಡಲಿಂಗೇಗೌಡ 39, ಸೋಮೇಗೌಡ 28 ಮತ ಗಳಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಪಿ.ಎಚ್.ಚಂದ್ರಶೇಖರ್‌ 16 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಚಂದ್ರಶೇಖರ್‌ 19, ಎಚ್‌.ಎನ್‌. ಮಲ್ಲೇಶ್‌ 3 ಮತ ಗಳಿಸಿದರು.

ಮಂಡ್ಯ ಉಪ ವಿಭಾಗ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಎಚ್‌.ಸಿ.ಕಾಳೇಗೌಡ 50 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಕಾಳೇಗೌಡ 157 ಮತ ಗಳಿಸಿದರೆ, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ರಾಮಕೃಷ್ಣ ಕದಲೂರು 107 ಮತ ಗಳಿಸಿದರು.

ಕೈಗಾರಿಕಾ, ಕಾರ್ಮಿಕ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಕೆ.ಸಿ.ಜೋಗಿಗೌಡ 86 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಜೋಗಿಗಳು 92, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಬಸವರಾಜ್‌ 6, ಲಿಂಗರಾಜ್‌ 1 ಮತ ಗಳಿಸಿದರು.

ಪಾಂಡವಪುರ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ, ಪಾಂಡವಪುರ ಉಪ ವಿಭಾಗ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರಕ್ಕೆ ಅವಿರೋಧ ಆಯ್ಕೆಯಾಗಿದೆ. ಒಟ್ಟು 16 ಸ್ಥಾನಗಳಿದ್ದು ಈಗ 12 ನಿರ್ದೇಶಕರ ಆಯ್ಕೆ ನಡೆದಿದೆ. ಉಳಿದ ನಾಲ್ಕು ಸ್ಥಾನಗಳಲ್ಲಿ ಅಧಿಕಾರಿಗಳು ಇರುತ್ತಾರೆ.

ಸೋಲುಂಡ ಮಾಜಿ ಅಧ್ಯಕ್ಷರು

ಕಳೆದ ಬಾರಿಯೂ ಡಿಸಿಸಿ ಬ್ಯಾಂಕ್‌ನಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇತ್ತು. ಕಳೆದ ಬಾರಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಇಬ್ಬರು ನಿರ್ದೇಶಕರು ಈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಕೆ.ಆರ್‌.ಪೇಟೆ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿ.ಡಿ.ಹರೀಶ್‌, ಮಂಡ್ಯ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾತನೂರು ಸತೀಶ್‌ ಸೋಲು ಕಂಡಿದ್ದಾರೆ. ಅಧ್ಯಕ್ಷರಾಗಿದ್ದ ಅಮರಾವತಿ ಅಶ್ವತ್ಥ್‌ ಗೆಲುವು ಸಾಧಿಸಿದ್ದಾರೆ.

ಲಘು ಲಾಠಿ ಪ್ರಹಾರ

ಗುರುವಾರ ಸಂಜೆ ಮತ ಎಣಿಕೆ ಕಾರ್ಯ ಆರಂಭವಾದ ಸಂದರ್ಭದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಲಕ್ಷ್ಮಿಜನಾರ್ಧನ ಶಾಲೆಯ ಗೇಟ್‌ ಬಳಿಗೆ ನುಗ್ಗಿದ ಪರಿಣಾಮ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಕೋವಿಡ್‌ ನಿಯಮ ಪಾಲನೆ ಮಾಡದೇ ಜನರು ಗುಂಪುಗಟ್ಟಿ ನಿಂತಿದ್ದರು. ಹಲವರು ಮಾಸ್ಕ್‌ ಧರಿಸಿರಲಿಲ್ಲ, ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು.

******

ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರಕ್ಕೆ ನನ್ನದೇ ಆದ ಕೊಡುಗೆ ನೀಡಲು ಶ್ರಮಿಸುತ್ತೇನೆ.
–ಪಿ.ಎಂ.ನರೇಂದ್ರಸ್ವಾಮಿ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT