ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿರಾಗಿಯಿಂದ ಬಿಪಿ, ಶುಗರ್‌ ನಿಯಂತ್ರಣ: ತಳಿ ಸಂಶೋಧಕ ಡಾ.ಸಿ.ಆರ್‌.ರವಿಶಂಕರ್‌

ರೈತರಿಗೆ ಬಿತ್ತನೆ ಬೀಜ ವಿತರಣೆ
Last Updated 21 ಆಗಸ್ಟ್ 2021, 12:55 IST
ಅಕ್ಷರ ಗಾತ್ರ

ಮಂಡ್ಯ: ‘ಬಿಳಿರಾಗಿಯಲ್ಲಿ ಕಬ್ಬಿಣಾಂಶ, ಆಮ್ಲದ ಗುಣ ಹೆಚ್ಚಾಗಿದ್ದು ಅದರ ಸೇವನೆಯಿಂದ ಮಧುಮೇಹ, ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ’ ಎಂದು ಕೃಷಿ ವಿಜ್ಞಾನಿ, ಕೆಎಂಆರ್‌–340 ಬಿಳಿರಾಗಿ ತಳಿ ಸಂಶೋಧಕ ಡಾ.ಸಿ.ಆರ್‌.ರವಿಶಂಕರ್‌ ಹೇಳಿದರು.

ನಗರದ ಗಾಂಧಿಭವನದಲ್ಲಿ ಅಖಂಡ ಕರ್ನಾಟಕ ರೈತ ಸಂಘ, ಕೃಷಿ ಸಂಶೋಧನಾ ಕೇಂದ್ರ, ವಿ.ಸಿ.ಫಾರಂ, ಯಲಿಯೂರು ನಮ್ಮ ರೈತ ಕೂಟದ ಸಹಯೋಗದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಿಳಿರಾಗಿ ಕುರಿತು ಅವರು ಉಪನ್ಯಾಸ ನೀಡಿದರು.

‘ಬಿಳಿರಾಗಿಯಲ್ಲಿ ಕೊಬ್ಬಿನಾಂಶ ಕೆಡಿಮೆ ಇದ್ದು ನಾರಿನಾಂಶ ಹೆಚ್ಚಾಗಿದೆ. ಬಿಳಿರಾಗಿಗೆ ಕೆ/360 ಎಂದು ಹೆಸರನ್ನಿಟ್ಟು 2016ರಲ್ಲಿ ಬಿಡುಗಡೆ ಮಾಡಲಾಗಿದೆ. ಕಪ್ಪು ರಾಗಿಗೆ ಇರುವಂತಹ ಗುಣಗಳು ಬಿಳಿರಾಗಿಯಲ್ಲಿಯೂ ಇದೆ. ಜೊತೆಗೆ ಬಿಳಿರಾಗಿ ಸೇವನೆಯಿಂದ ರಕ್ತ ಶುದ್ಧೀಕರಣಗೊಳ್ಳುತ್ತದೆ. ಅಜೀರ್ಣ ಸಮಸ್ಯೆ ಶಮನಗೊಳಿಸುತ್ತದೆ’ ಎಂದರು.

‘ಕಿರುಧಾನ್ಯಗಳಾದ ರಾಗಿ, ಆರ್ಕಾ, ನವಣೆ, ಊದ್ಲು, ಸಾಮೆ, ಕೂರಲು, ಬರುಗು, ಸಜ್ಜೆ ಈ ಎಂಟು ಧಾನ್ಯಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸಬೇಕು. ದೇಶದಲ್ಲಿ 70 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ರಾಗಿ ಬೆಳೆಯಲಾಗುತ್ತಿದೆ. ಈ ಪ್ರದೇಶ ಇನ್ನಷ್ಟು ಹೆಚ್ಚಳವಾಗಬೇಕು. ಮಳೆಯಾಶ್ರಿತ ಪ್ರದೇಶಗಳಲ್ಲಿಯೂ ರಾಗಿ ಬೆಳೆಯುವುದು ಕಡಿಮೆ ಆಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ರಾಗಿ ಬೆಳೆಯಬೇಕಿದ್ದು, ಮಾನವನ ಆರೋಗ್ಯಕ್ಕೆ ರಾಗಿ ಪ್ರಮುಖ ಆರೋಗ್ಯಕರ ಆಹಾರ ಎಂಬುದನ್ನು ಜನರು ಮರೆಯಬಾರದು’ ಎಂದರು.

‘ವಿ‌.ವಿ.ಫಾರಂನ ಕೃಷಿ ಕೇಂದ್ರದಲ್ಲಿ 3,500 ಸಾವಿರ ರಾಗಿ ತಳಿಗಳಿವೆ. ಆಫ್ರಿಕಾ, ಕೀನ್ಯಾ, ಜಿಂಬಾಬ್ವೆಯಿಂದ ರಾಗಿ ತಳಿ ತಂದು ಬೆಳೆಯಲಾಗಿದೆ. ಯಾವ ತಳಿಯಿಂದ ದೇಶದ ರಾಗಿಗೆ ಕ್ರಾಸ್‌ ಮಾಡಿದರೆ ಬಿಳಿರಾಗಿ ಬರುತ್ತದೆ ಎಂಬುದನ್ನು 2010ರಲ್ಲಿ ಸಂಶೋಧಿಸಲಾಯಿತು. ನಂತರಬಿಳಿರಾಗಿಗೆ ಕೆ/360 ಎಂದು ಹೆಸರನ್ನಿಟ್ಟು ಬಿಡುಗಡೆ ಮಾಡಲಾಯಿತು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿ ‘ಎಲ್ಲಾ ದೇಶಗಳಿಗೂ ಆಹಾರ ಉತ್ಪಾದನೆಯೇ ಪ್ರಮುಖ ಆದ್ಯತೆಯಾಗಿದೆ. ಆಹಾರ ಭದ್ರತೆ ಸಾಧಿಸಬೇಕು ಎಂಬುದು ವಿಜ್ಞಾನಿಗಳು ಬಹಳ ಹಿಂದೆಯೇ ಕರೆ ನೀಡಿದ್ದರು. ಹೊಸಹೊಸ ತಳಿ ಸಂಶೋಧನೆ ಮಾಡಿರುವ ಪರಿಣಾಮವೇ ಪ್ರಸ್ತುತ 2020–21ರಲ್ಲಿ 303 ದಶಲಕ್ಷಟನ್‌ ಆಹಾರ ಧಾನ್ಯ ಉತ್ಪಾದನೆ ಮಾಡಲು ಸಾಧ್ಯವಾಗಿದೆ’ ಎಂದರು.

‘ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ನಮ್ಮ ದೇಶ ದೊಡ್ಡ ಸಾಧನೆ ಮಾಡಿದೆ. 320 ದಶಲಕ್ಷ ಟನ್‌ ಹಣ್ಣಿನ ಉತ್ಪಾದನೆಯಾಗಿದೆ. 200 ದಶಲಕ್ಷ ಟನ್‌ ಹಾಲು ಉತ್ಪಾದನೆಯಾಗಿದೆ. ಇದರರ್ಥ ನಮ್ಮ ದೇಶಕ್ಕೆ ಸಾಕಾಗುವಷ್ಟು ಆಹಾರ ಬೆಳೆದು ಬೇರೆ ದೇಶಗಳಿಗೆ ಕೊಡುತ್ತಿದ್ದೇವೆ’ ಎಂದು ವಿವರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಕೆ.ಬೋರಯ್ಯ ಮಾತನಾಡಿ ‘ದೇಶದ ಹೊಸ ನೀತಿಗಳು ರೈತರಿಗೆ ಗೊಂದಲ ಮೂಡಿಸುತ್ತಿವೆ. ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ರೈತರಿಗೆ ಯಾವ ಫಸಲಿನಲ್ಲಿಯೂ ಮೋಸ ಆಗದಂತೆ ಬೆಲೆ ನಿಗದಿಗೊಳಿಸಬೇಕು. ಬಿಳಿರಾಗಿ ಎಂಬುದು ಹೆಚ್ಚು ಪ್ರಚಲಿತಕ್ಕೆ ಬರಬೇಕು. ಬಿಳಿರಾಗಿ ಬೆಳೆಯುವ ರೈತರು ಹೆಚ್ಚಾಗಬೇಕು. ಇದು ರೈತರಿಗೆ ಜೊತೆಗೆ ಲಾಭದಾಯಕವೂ ಆಗಿದೆ’ ಎಂದರು.

ಶಾಸಕ ಎಂ.ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ನಾರಾಯಣ ತಿರುಮಲಾಪುರ, ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ಸುಧೀರ್‌ಕುಮಾರ್, ಪ್ರಗತಿಪರ ಕೃಷಿಕ ಉಜ್ಜನಿಗೌಡ, ನಮ್ಮ ರೈತ ಕೂಟದ ಅಧ್ಯಕ್ಷ ವೈ.ಎಂ.ಪುಟ್ಟಸ್ವಾಮಿ, ವಕೀಲ ಗಂಗಾವತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್‌.ಜಿ.ಪ್ರತಿಭಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT