ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯಕ್ಕೆ ₹10 ಕೋಟಿ ಬಿಡುಗಡೆ: ಕೆ.ಸಿ.ನಾರಾಯಣಗೌಡ ಹೇಳಿಕೆ

Last Updated 2 ಮೇ 2021, 6:46 IST
ಅಕ್ಷರ ಗಾತ್ರ

ಪಾಂಡವಪುರ: ‘ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಗೆ ₹ 10 ಕೋಟಿ ಬಿಡುಗಡೆ ಮಾಡಿದ್ದು, ಕೊರೊನಾ ತಡೆಗೆ ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

ತಾಲ್ಲೂಕಿನ ಮೂಡಲಕೊಪ್ಪಲು ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿನ ಕೋವಿಡ್ ಕೇರ್ ಸೆಂಟರ್‌ಗೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.

‘ಕೋವಿಡ್ ಕೇಂದ್ರಗಳಲ್ಲಿ ವೈದ್ಯರ ಕೊರತೆ ಕಾಣುತ್ತಿದ್ದು, ಶೀಘ್ರದಲ್ಲಿಯೇ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಶಾಸಕರು ನಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ಶಾಸಕರ ಈ ಎಲ್ಲ ಸಲಹೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮುಂದೆ ಇಟ್ಟು ಚರ್ಚೆ ನಡೆಸುತ್ತೇನೆ. ರಾಜ್ಯ ಸರ್ಕಾರವು ಈಗಾಗಲೇ ಕೊರೊನಾ ನಿಯಂತ್ರಣಕ್ಕಾಗಿ ಎಲ್ಲ ಕ್ರಮಕೈಗೊಂಡಿದೆ. ಜನರು ಆತಂಕಕ್ಕೆ ಒಳಗಾಗುವುದು ಬೇಡ’ ಎಂದರು.

ಕೋವಿಡ್ ಕೇರ್ ಸೆಂಟರ್‌ಗೆ ಅಗತ್ಯ ಸೌಲಭ್ಯ: ಮೂಡಲಕೊಪ್ಪಲು ರಾಣಿ ಕಿತ್ತೂರು ಚನ್ನಮ್ಮ ವಸತಿ ಶಾಲೆಯ 130ಮಂದಿ ಸಂಖ್ಯೆಯುಳ್ಳ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕವಾಗಿ 60 ಹಾಸಿಗೆಯ ಆಕ್ಸಿಜನ್‌ ಹೊಂದಿರುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗದಂತೆ ಕ್ರಮವಹಿಸಲಾಗಿದೆ ಎಂದರು.

ಬಿಸಿನೀರು ವ್ಯವಸ್ಥೆ: ಶಾಸಕ ಸಿ.ಎಸ್.ಪುಟ್ಟರಾಜು, ಮೂಡಲಕೊಪ್ಪಲು ಕೋವಿಡ್ ಕೇರ್ ಸೆಂಟರ್‌ಗೆ ಬಿಸಿ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ವೈಯಕ್ತಿಕವಾಗಿ ಮಾಂಸಾಹಾರಿ ಊಟ ನೀಡಲು ನಿರ್ಧರಿಸಿದ್ದೇನೆ. ಸೋಂಕಿತರಿಗೆ ಯಾವುದೇ ಕೊರತೆ ಉಂಟಾಗದಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.

ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಪ್ರಮೋದ್ ಎಲ್ ಪಾಟೀಲ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರ‌ವಿಂದ್‌, ಪುರಸಭೆ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್, ವೈದ್ಯೆ ಡಾ.ಮಹೇಶ್ವರಿ, ಸಿಪಿಐ ಕೆ.ಪ್ರಭಾಕರ್, ಮೇಲುಕೋಟೆ ಪಿಎಸ್‌ಐ ಗಣೇಶ್, ನೋಡಲ್ ಅಧಿಕಾರಿಗಳು, ಗ್ರಾ.ಪಂ. ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT