ಶುಕ್ರವಾರ, ಜುಲೈ 30, 2021
21 °C

ಮುತ್ತತ್ತಿ ಕಾಡಂಚಿನ ಹಳ್ಳಿಗಳಿಗೂ ತಗುಲಿದ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಲಗೂರು (ಮಂಡ್ಯ ಜಿಲ್ಲೆ): ಇಲ್ಲಿಯವರೆಗೂ ಕೊರೊನಾ ಸೋಂಕಿನಿಂದ ಮುಕ್ತವಾಗಿದ್ದ ಇಲ್ಲಿಯ ಮುತ್ತತ್ತಿ ಅರಣ್ಯ ಪ್ರದೇಶದ ಹಳ್ಳಿಗಳಲ್ಲೂ ಈಗ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಕಾಡಂಚಿನಲ್ಲಿರುವ ವಿವಿಧ ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.

ಅರಣ್ಯದ ನಡುವೆ ಇರುವ ಮುತ್ತತ್ತಿ ಗ್ರಾಮದಲ್ಲೇ 10 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಕಳೆದ ವರ್ಷದ ಮೊದಲ ಅಲೆ ಹಾಗೂ 2ನೇ ಅಲೆ ಮೇ 25ರವರೆಗೂ ಒಂದೇ ಒಂದು ಕೋವಿಡ್‌ ಪ್ರಕರಣ ಇರಲಿಲ್ಲ. ಇಲ್ಲಿಯ ಜನರು ಸ್ವಚ್ಛಂದವಾಗಿ ಓಡಾಡಿಕೊಂಡಿದ್ದರು.

ಆದರೆ ಈಗ ಜನರಲ್ಲಿ ಜ್ವರ, ನೆಗಡಿ ಕಾಣಿಸಿಕೊಳ್ಳುತ್ತಿರುವ ಕಾರಣ ವೈದ್ಯರು ಹಾಗೂ ಅರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಕೋವಿಡ್‌ ಪರೀಕ್ಷೆ ನಡೆಸುತ್ತಿದ್ದಾರೆ. ಹಲವು ಹಳ್ಳಿಗಳಲ್ಲಿ ನಿಷೇಧಿತ ವಲಯ ಘೋಷಣೆ ಮಾಡಲಾಗಿದೆ. ವಿವಿಧ ಸಂಘಟನೆಗಳ ಸದಸ್ಯರು ಅಗತ್ಯ ವಸ್ತು ಪೂರೈಕೆ ಮಾಡುತ್ತಿದ್ದಾರೆ.

ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ದೃಢಪಟ್ಟಿತ್ತು. ನಂತರ ಪ್ರಾಥಮಿಕ ಸಂಪರ್ಕಿತರಿಗೆ ಆರ್‌ಟಿಪಿಸಿಆರ್‌ ಮಾಡಿಸಲಾಗಿತ್ತು, ಗುರುವಾರ ಫಲಿತಾಂಶ ಬಂದಿದ್ದು ಮತ್ತೆ 13 ಮಂದಿಗೆ ಸೋಂಕು ದೃಢಪಟ್ಟಿದೆ, ಅವರಲ್ಲಿ ಒಂದೇ ಕುಟುಂಬದ 6 ಮಂದಿ ಇದ್ದಾರೆ.

‘ಇಲ್ಲಿಯವರೆಗೆ ನಮ್ಮ ಹಳ್ಳಿಯಲ್ಲಿ ಕೊರೊನಾ ಮಾತೇ ಇರಲಿಲ್ಲ. ಜನರು ಮಾಸ್ಕ್‌ ಹಾಕುವ ಅವಶ್ಯಕತೆಯೂ ಇರಲಿಲ್ಲ. ಈಗ ಜ್ವರ ಕಾಣಿಸಿಕೊಳ್ಳುತ್ತಿದ್ದು ವೈದ್ಯರು, ಪೊಲೀಸರು ಮಾಸ್ಕ್‌ ಹಾಕಿಕೊಳ್ಳಿ ಎನ್ನುತ್ತಿದ್ದಾರೆ. ಈಗ ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ’ ಎಂದು ಮುತ್ತತ್ತಿ ಗ್ರಾಮದ ಶರತ್‌ ಆಶ್ಚರ್ಯ ವ್ಯಕ್ತಪಡಿಸಿದರು.

ಭೀಮೇಶ್ವರಿಯಲ್ಲಿರುವ ಕಾವೇರಿ ಫಿಷಿಂಗ್ ಕ್ಯಾಂಪ್ (ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್) ಸಿಬ್ಬಂದಿಗೂ ಜ್ವರ ಕಾಣಿಸಿಕೊಂಡಿತ್ತು. ಕೋವಿಡ್‌ ಪರೀಕ್ಷೆ ನಡೆಸಿದ ನಂತರ 7 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ.

‘ಶುಕ್ರವಾರ ಮುತ್ತತ್ತಿ ಗ್ರಾಮದ ಪ್ರತಿಯೊಬ್ಬರಿಗೂ ಆರ್‌ಟಿಪಿಸಿಆರ್‌ ಮಾಡಲಾಗುವುದು. ಸೋಂಕಿತರನ್ನು ವಡ್ಡರಹಳ್ಳಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಕೋವಿಡ್‌ ಕೇರ್‌ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಶೀಘ್ರ ಮುತ್ತತ್ತಿ ಸಮೀಪದಲ್ಲೇ ಇರುವ ವಸತಿ ಶಾಲೆಯಲ್ಲಿ 100 ಹಾಸಿಗೆಯ ಕೇಂದ್ರ ತೆರೆಯಲಾಗುವುದು’ ಎಂದು ತಹಶೀಲ್ದಾರ್‌ ವಿಜಿಯಣ್ಣ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು