ಮೇಲುಕೋಟೆ: ಹಾಲು ಉತ್ಪಾದನೆಯಲ್ಲಿ ಭಾರತವು ಗಣನೀಯವಾದ ಸಾಧನೆ ಮಾಡಿದ್ದು, ಹೈನುಗಾರಿಕೆ ರೈತರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲ್ಲೂಕಿನ ಕುಪ್ಪಳ್ಳಿ–ಜಿ.ಶೆಟ್ಟಹಳ್ಳಿ ವೃತ್ತದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಭಾನುವಾರ ಉದ್ಫಾಟಿಸಿಸ ಅವರು ಮಾತನಾಡಿದರು.
‘ಹೈನುಗಾರಿಕೆಯು ರೈತರ ಜೀವನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಆರ್ಥಿಕ ಸಂಕಷ್ಟ ಎದುರಾಗದಂತೆ ರೈತರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು. ಡೇರಿಗಳು ರೈತರಿಗೆ ರಾಸು ವಿಮೆಯ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು, ಈ ಬಗ್ಗೆ ಆಡಳಿತ ಮಂಡಳಿಯು ಸಲಹೆ ನೀಡಬೇಕು’ ಎಂದರು.
ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ‘ದೇಶದಲ್ಲಿ ರೈತರ ಮೂಲಕ ಕಸುಬು ಕೃಷಿಯಾಗಿದೆ, ಜತೆಗೆ ಬಹುತೇಕ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ರೈತರು ಬೆಳೆದ ತರಕಾರಿ, ಭತ್ತ, ಕಬ್ಬಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅಂತಹ ಕುಟುಂಬಗಳು ಹೈನುಗಾರಿಕೆ ಮೇಲೆ ಅವಲಂಬಿತರಾಗಿ ಜೀವನ ಸಾಗಿಸುತ್ತಿದ್ದಾರೆ. ರೈತರ ಆರ್ಥಿಕವಾಗಿ ಸಬಲರಾಗಲು ಹೈನುಗಾರಿಕೆ ನೆರವಾಗುತ್ತಿದೆ’ ಎಂದು ಹೇಳಿದರು.
ತಾಲ್ಲೂಕಿನಲ್ಲಿರುವ 147 ಡೇರಿಗಳು ಉತ್ತಮ ಕೆಲಸ ಮಾಡುತ್ತಿವೆ. ತಾಲ್ಲೂಕಿನ ಡಿಂಕಾ ಡೇರಿ ಅಧಿಕ ಹಾಲು ಉತ್ಪಾದನೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದು, ವಾರ್ಷಿಕವಾಗಿ ₹28 ಲಕ್ಷ ಆದಾಯ ಗಳಿಸುತ್ತಿದೆ. ರಾಜ್ಯದ 14 ಒಕ್ಕೂಟಗಳ ಪೈಕಿ ಮನ್‌ಮುಲ್ ಒಕ್ಕೂಟಕ್ಕೆ ಅಧಿಕ ಹಾಲು ಬರುತ್ತಿದೆ. ದಿನಕ್ಕೆ 11 ಲಕ್ಷಕ್ಕೂ ಅಧಿಕ ಹಾಲು ಪೂರೈಕೆಯಾಗುತ್ತಿದೆ. ಜಿಲ್ಲೆಯಲ್ಲಿ ಮನ್‌ಮುಲ್ ಒಕ್ಕೂಟ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರೈತರ ಎರಡು ಕಣ್ಣುಗಳಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಪಶು ಆಹಾರ ಮಳಿಗೆ ಉದ್ಫಾಟಿಸಿದರು.
ಸಮಾರಂಭದಲ್ಲಿ ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರಣಾಧಿಕಾರಿ ನಾಗೇಂದ್ರ, ಗ್ರಾಮ ಪಂಚಾಯಿತಿ ಸದಸ್ಯೆ ಇಂದ್ರಮ್ಮ, ಡೇರಿ ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷೆ ರಮ್ಯ, ನಿರ್ದೇಶಕರಾದ ಪವಿತ್ರ ಜ್ಯೋತಿ, ಭಾಗ್ಯಮ್ಮ, ಲಕ್ಷಮ್ಮ, ಧನಲಕ್ಷ್ಮಿ, ಕಾರ್ಯದರ್ಶಿ ಸಿ.ದೇವರಾಜು, ಹಾಲು ಪರೀಕ್ಷಕಿ ಸಿ.ಕೆ.ವನಜಾಕ್ಷಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಮುಖಂಡರಾದ ಬೆಟ್ಟೇಗೌಡ, ಶಿವಣ್ಣ, ಪಾಪಣ್ಣ, ಕೆ.ಗೋವಿಂದೇಗೌಡ, ಬಿ.ಕೆ.ಯೋಗೇಶ್, ಸಿ.ಆರ್.ರಮೇಶ್, ದೊಡ್ಡಹೈದೇಗೌಡ, ತಮ್ಮೇಗೌಡ, ತಿಮ್ಮೇಗೌಡ, ದೇವರಾಜು, ಕೆಂಪೇಗೌಡ, ವೆಂಕಟೇಶ್, ಸೋಮೇಗೌಡ, ಕೃಷ್ಣೇಗೌಡ, ನೀಲಕಂಠೇಗೌಡ, ಗೋವಿಂದೇಗೌಡ, ಮರೀಗೌಡ, ಮಂಜುನಾಥ್, ಪುಟ್ಟಸ್ವಾಮಿಗೌಡ, ಕಾಳೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.