ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಭ್ರೂಣಹತ್ಯೆ: ಸಿಬಿಐ ತನಿಖೆಗೆ ಒತ್ತಾಯ

Published 6 ಡಿಸೆಂಬರ್ 2023, 14:43 IST
Last Updated 6 ಡಿಸೆಂಬರ್ 2023, 14:43 IST
ಅಕ್ಷರ ಗಾತ್ರ

ಮಂಡ್ಯ: ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಎಎಪಿ ಜಿಲ್ಲಾ ಅಧ್ಯಕ್ಷ ಬೂದನೂರು ಬೊಮ್ಮಯ್ಯ ಆಗ್ರಹಿಸಿದರು.

‘ತಾಲೂಕಿನ ಹಾಡ್ಯ ಗ್ರಾಮದ ಆಲೆಮನೆಯೊಂದರಲ್ಲಿ ಈ ಕೃತ್ಯ ನಡೆದಿರುವುದನ್ನು ಪೊಲೀಸರು ಈಗಾಗಲೇ ಬಯಲು ಮಾಡಿದ್ದಾರೆ. ಇದಕ್ಕೂ ಮುನ್ನ ಶ್ರೀರಂಗಪಟ್ಟಣ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರು ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ನಡೆಸುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದ್ದರು. ಸಭೆಯಲ್ಲಿ ಹಾಜರಿದ್ದ ಆರೋಗ್ಯಾಧಿಕಾರಿಗಳು ನಮಗೆ ಈ ಬಗ್ಗೆ ದೂರುಗಳು ಬಂದಿದೆ. ಇನ್ನೂ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಅಂದೇ ಇದನ್ನು ಅಂದೇ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದರೆ ಇಷ್ಟೊಂದು ದೊಡ್ಡ ಮಟ್ಟದವರೆಗೆ ಹೋಗುತ್ತಿರಲಿಲ್ಲ. ಮಂಡ್ಯ ಪೊಲೀಸರು ಮತ್ತು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರೇ ಬೇಧಿಸಬೇಕಾಗಿಯಿತು. ಹಳೇ ಮೈಸೂರು ಪ್ರದೇಶ ಸೇರಿದಂತೆ ಇದು ಎಲ್ಲೆಲ್ಲಿ ವ್ಯಾಪಿಸಿದೆ ಎಂಬುದನ್ನು ನಿಖರವಾಗಿ ಪತ್ತೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇದು ಸಿಬಿಐ ತನಿಖೆಯಿಂದ ಮಾತ್ರವೇ ಸಾಧ್ಯ’ ಎಂದರು.

‘ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುತ್ತಿದೆ. ಈಗ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗದಂತಹ ವಾತಾವರಣ ನಿರ್ಮಾಣವಾಗಿದೆ. ಯುವಜನರು ಮಹದೇಶ್ವರ ಬೆಟ್ಟಕ್ಕೆ ಹರಕೆ ಹೊತ್ತು ಕಾಲ್ನಡಿಗೆಯಲ್ಲಿ ಹೋಗಿ ದೇವರ ಮೋರೆ ಹೋಗುವಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಇಂತಹ ಪ್ರಕರಣವನ್ನು ಕಟ್ಟುನಿಟ್ಟಾಗಿ ತಡೆಯಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಶಿವಕುಮಾರ್, ಸುರೇಶ್‌ಗೌಡ, ಯೋಗೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT