ಮಂಗಳವಾರ, ಮೇ 26, 2020
27 °C

‘ಎಣ್ಣೆ’ಗೆ ನಮ್ಮವರೇ ದುಂಬಾಲು: ಸಚಿವ ನಾರಾಯಣಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ‘ಎಣ್ಣೆ’ ಕೊಡಿಸಿ ಎಂದು ನಮ್ಮ ಆಪ್ತರೇ ದುಂಬಾಲು ಬಿದ್ದಿದ್ದಾರೆ ಎಂದು ಪೌರಾಡಳಿತ ಸಚಿವರ ನಾರಾಯಣಗೌಡ ಹೇಳಿದರು.

ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

‘ಎಣ್ಣೆ ಹಾಕಿದರೆ ಕೊರೊನಾ ಬರುವುದಿಲ್ಲ ಎಂಬ ಸದ್ದಿಯ ಹಿನ್ನೆಲೆಯಲ್ಲಿ ಮದ್ಯಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ, ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯದ ಅಂಗಡಿಗಳನ್ನು ಬಂದ್‌ ಮಾಡಿದೆ. ಕೆಲವೆಡೆ ಬ್ಲಾಕ್‌ನಲ್ಲಿ ಮದ್ಯ ಮಾರುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಸದ್ಯ ಎಲ್ಲೂ ಎಣ್ಣೆ ಸಿಗದ ಕಾರಣ ಬ್ಲಾಕ್‌ನಲ್ಲಿ ಮಾರುವ ಸಾಧ್ಯತೆ ಇಲ್ಲ’ ಎಂದು ಹೇಳಿದರು.

‘ಕೃಷಿ ಉತ್ಪನ್ನಕ್ಕೆ ಬೇಡಿಕೆ ಇಲ್ಲ ಎಂಬ ಕಾರಣಕ್ಕೆ ರೈತನೊಬ್ಬ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಬಂದಿದೆ. ರೈತರು ಇಂತಹ ದುಸ್ಸಾಹಸಕ್ಕೆ ಮುಂದಾಗಬಾರದು. ತಮ್ಮ ಕಷ್ಟ ಇದ್ದರೆ ನನ್ನ ಬಳಿ ಹೇಳಿಕೊಳ್ಳಿ. ಕೃಷಿ ಉತ್ಪನ್ನಗಳ ಸಾಗಾಟ ಮತ್ತು ಮಾರಾಟಕ್ಕೆ ಸರ್ಕಾರ ಅಗತ್ಯ ಕ್ರಮ ವಹಿಸಿದೆ’ ಎಂದು ತಿಳಿಸಿದರು.

ವ್ಯಾಪಾರಿಯ ವಿರುದ್ಧ ಕ್ರಮ: ಗಂಜಾಂನ ಸಪೋಟ ಹಣ್ಣಿನ ವ್ಯಾಪಾರಿ ತೋಟಗಾರಿಕೆ ಇಲಾಖೆಯ ತೋಟದಿಂದ ಸಪೋಟ ಹಣ್ಣು ಕೊಯ್ದು, ಕೊಳೆತ ಹಣ್ಣುಗಳನ್ನು ಆಚೆಗೆ ಸುರಿದು ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವರು ಹೇಳಿದರು.‌

ಜನರು ಗುಂಪು ಗೂಡುವುದನ್ನು ತಡೆಯಲು ಪೊಲೀಸರು ಕಠಿಣವಾಗಿ ವರ್ತಿಸುತ್ತಿದ್ದಾರೆ, ಅದು ಅನಿವಾರ್ಯ. ತಾಲ್ಲೂಕು ಮಟ್ಟದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಮೂಲ ಸೌಕರ್ಯ ಕಲ್ಪಿಸುತ್ತಿದೆ. ಜಿಲ್ಲೆಯ ಅಧಿಕಾರಿಗಳು ಕೊರೊನಾ ವೈರಸ್‌ ತಡೆಗೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಕೆಲವು ಪಿಡಿಒಗಳು ಸ್ಪಂದಿಸುತ್ತಿಲ್ಲ. ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಜಿ.ಪಂ. ಸಿಇಒಗೆ ಹೇಳಿದ್ದೇನೆ ಎಂದು ತಿಳಿಸಿದರು.

ತಹಶೀಲ್ದಾರ್‌ ಎಂ.ವಿ. ರೂಪಾ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ತಾ.ಪಂ. ಇಒ ನಾಗವೇಣಿ, ಡಿವೈಎಸ್ಪಿ ಅರುಣ್‌ನಾಗೇಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್‌.ಕೆ. ವೆಂಕಟೇಶ್‌ ಇತರರು ಸಭೆಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು