ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುತ್ತೀರ್ಣರಾದ ಮಕ್ಕಳನ್ನು ಹೀಯಾಳಿಸದಿರಿ: ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸಲಹೆ

Last Updated 13 ಆಗಸ್ಟ್ 2020, 16:33 IST
ಅಕ್ಷರ ಗಾತ್ರ

ಮಂಡ್ಯ: ‘ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ಪೋಷಕರು ಯಾವುದೇ ಕಾರಣಕ್ಕೂ ನಿಂದಿಸಬಾರದು. ಬೇರೆ ಮಗುವಿನೊಂದಿಗೆ ಹೋಲಿಸುವುದು, ಹೀಯಾಳಿಯುವುದು, ಅವಮಾನಿಸುವುದನ್ನು ಮಾಡಬಾರದು. ಪ್ರತಿ ಮಗುವಿಗೆ ತನ್ನದೇ ಆದ ಪ್ರತಿಭೆ ಇರುತ್ತದೆ, ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆ ‘ಎ’ ಗ್ರೇಡ್‌ ಸ್ಥಾನ ಪಡೆದ ಹಿನ್ನೆಲೆಯಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉತ್ತೀರ್ಣರಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸದ್ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಆಸ್ತಿಯಾಗಿ ರೂಪುಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ಅವರು ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು. ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಜೀವನದ ಕೊನೆಯ ಹಂತ ಎಂದು ಪರಿಗಣಿಸಬಾರದು. ಇದೊಂದು ಘಟ್ಟ ಅಷ್ಟೇ, ಇದನ್ನೂ ಮೀರಿದ ಪರೀಕ್ಷೆಗಳಿವೆ ಎಂಬುದನ್ನು ಅರಿತುಕೊಳ್ಳಬೇಕು’ ಎಂದರು.

‘ಮುಂದಿನ ಶೈಕ್ಷಣಿಕ ದಿನಗಳು ಹೇಗೆ ಎಂಬ ಸವಾಲು ನಮ್ಮ ಮುಂದೆ ಇದೆ. ಶಾಲೆಗಳನ್ನು ಪ್ರಾರಂಭಿಸಲು ಸುರೇಶ್‌ಕುಮಾರ್‌ ತುದಿಗಾಲಲ್ಲಿ ನಿಂತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಾಲೆ ಆರಂಭ ಮಾಡುವುದಕ್ಕಿಂತ ನಮ್ಮ ಮಕ್ಕಳ ಆರೋಗ್ಯ, ಮಕ್ಕಳ ಕಲಿಕೆ ನನ್ನ ಪ್ರಥಮ ಆದ್ಯತೆಯಾಗಿದೆ. ಮಕ್ಕಳು ಶಾಲೆಯ ಜೊತೆ ಸಂಪರ್ಕದಲ್ಲಿ ಇರುವಂತೆ ಮಾಡಲು ವಿದ್ಯಾಗಮ ಯೋಜನೆ ಜಾರಿಗೆ ತಂದಿದ್ದು, ಇಡೀ ದೇಶವೇ ರಾಜ್ಯದತ್ತ ತಿರುಗಿ ನೋಡುತ್ತಿದೆ’ ಎಂದರು.

‘ಶಿಕ್ಷಣ ಮುಂದುವರಿಕೆ ಭಾಗವಾಗಿ ಈಗಾಗಲೇ ಪ್ರತಿ ವಿದ್ಯಾರ್ಥಿಯ ಮನೆಗೆ ಪಠ್ಯ ಪುಸ್ತಕಗಳನ್ನು ಕಳುಹಿಸಲಾಗಿದೆ. ಅಲ್ಲದೆ ದೂರದರ್ಶನದಲ್ಲಿ ಸೇತು ಬಂಧ ಕಾರ್ಯಕ್ರಮದ ಮೂಲಕ ಹಿಂದಿನ ವರ್ಷ ಏನಾಗಿತ್ತು, ಈ ವರ್ಷ ಏನೇನು ಕಲಿಯಬೇಕು ಎಂಬ ಬಗ್ಗೆ ಪರಿಚಯ ಮಾರ್ಗದರ್ಶನ ನೀಡಲಾಗುತ್ತಿದೆ. ಮುಂದುವರೆದ ಭಾಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಹೊಸಹಳ್ಳಿ ಸುಧಾಕರ್‌ ಅವರ ನೇತೃತ್ವದಲ್ಲಿ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ’ ಎಂದರು.

ಸನ್ಮಾನ ಸ್ವೀಕರಿಸಿದ ಡಿಡಿಪಿಐ ಆರ್‌.ರಘುನಂದನ್‌ ಮಾತನಾಡಿ ‘ಪರೀಕ್ಷೆ ನಡೆಯದಿದ್ದರೆ ವಿದ್ಯಾರ್ಥಿಗಳಿಗೆ ಉತ್ತರ ಹೇಳುವ ನೈತಿಕ ಹೊಣೆಗಾರಿಕೆ ನಮಗೆ ಇರುತ್ತಿರಲಿಲ್ಲ. ದೂರಗಾಮಿಯ ದೃಷ್ಟಿಯಿಂದ ಪರೀಕ್ಷೆ ನಡೆಸಲು ನಮ್ಮನ್ನು ಸಚಿವರು ಹುರಿದುಂಬಿಸಿದರು’ ಎಂದರು.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಡಾ.ಹೊಸಳ್ಳಿ ಸುಧಾಕರ ಮಾತನಾಡಿ ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯದಿದ್ದರೆ ಇಂದಿನ ಫಲ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಎಸ್‌ಎಸ್‌ಎಲ್‌ಸಿ ಫಲಿತಾಂಶದ ಫಲ ಪಡೆಯಲು ಸಚಿವ ಸುರೇಶ್‌ ಕುಮಾರ್‌ ಅವರ ದಿಟ್ಟತನದ ನಿರ್ಧಾರವೇ ಕಾರಣ. ಜಿಲ್ಲೆಯ ಅಧಿಕಾರಿಗಳ ಶ್ರಮವು ಶೈಕ್ಷಣಿಕ ಫಲಿತಾಂಶದ ಕನ್ನಡಿಯಾಗಿದೆ’ ಎಂದರು. ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಜಿ.ಬಿ.ಶಿವಕುಮಾರ್‌, ಜಿಪಂ ಸಿಇಒ ಜುಲ್ಫೀಕರ್‌ ಉಲ್ಲಾ, ದಕ್ಷಿಣ ಪದವೀಧರ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಮೈ.ವಿ.ರವಿಶಂಕರ್‌, ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಇದ್ದರು.

ವಿದ್ಯೆ ಸಾಧಕನ ಸ್ವತ್ತು

ಸನ್ಮಾನ ಸ್ವೀಕರಿಸಿದ ನಿಕಟಪೂರ್ವ ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ ‘ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ನಿರ್ದಿಷ್ಟ ಗುರಿ, ಸಾಧಿಸುವ ಛಲ ಇದ್ದರೆ ಏನಾದರೂ ಸಾಧಿಸಬಹುದು ಎಂಬುದನ್ನು ಜಿಲ್ಲೆಯ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಪರೀಕ್ಷೆ ನಡೆಸದೇ ಹೋಗಿದ್ದರೆ ಧೀರಜ್‌ ರೆಡ್ಡಿ ಅಂತ ಪ್ರತಿಭೆ ಬೆಳಕಿಗೆ ಬರುತ್ತಿರಲಿಲ್ಲ. ಪರೀಕ್ಷೆ ಕಾರಣದಿಂದ ಇಡೀ ಜಿಲ್ಲೆಯ ಕೀರ್ತಿ ತಂದಿದ್ದಾನೆ. ಆತನ ಭವಿಷ್ಯ ಉತ್ತಮವಾಗಿರಲಿ’ ಎಂದು ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT