ಭಾನುವಾರ, ಮೇ 9, 2021
25 °C
ಜಿಲ್ಲೆಯಾದ್ಯಂತ ಜಯಂತಿ ಆಚರಣೆ

ಅಂಬೇಡ್ಕರ್‌, ಜಗಜೀವನರಾಮ್‌ ಶೋಷಿತರ ಧ್ವನಿ: ಕೆ.ಸಿ.ನಾರಾಯಣಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್‌ ಅವರು ಶೋಷಿತರ ಧ್ವನಿಯಾಗಿದ್ದರು. ಇಬ್ಬರೂ ಮಾನವತಾವಾದಿಗಳು ಕೊಟ್ಟ ಕೊಡುಗೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್‌ 130ನೇ ಜನ್ಮ ದಿನಾಚರಣೆ, ಡಾ.ಬಾಬು ಜಗಜೀವನರಾಮ್‌ ಅವರ 114ನೇ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳವಾರ ನಡೆದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕೇವಲ ಅಂಬೇಡ್ಕರ್‌ ಜಯಂತಿ ಆಚರಣೆ ಮಾಡುವುದರಿಂದ ಅಭಿವೃದ್ಧಿ ಕಾಣಲು ಅಸಾಧ್ಯ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆದಾಗ ಮಾತ್ರ ಸಮಾಜ ಏಳಿಗೆ ಸಾಧ್ಯ. ಅಂಬೇಡ್ಕರ್‌ ಅವರು ಹಾಕಿಕೊಟ್ಟ ಸಮಾನತೆಯ ತತ್ವವನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಆವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ತತ್ವಗಳನ್ನು ಸಾಕಾರಗೊಳಿಸಬೇಕು’ ಎಂದರು.

‘ಶೋಷಿತ ಸಮುದಾಯಗಳ ಪರವಾಗಿ ಅಂಬೇಡ್ಕರ್‌ ಅವರು ಹೋರಾಟ ಮಾಡಿದರು. ಶೋಷಣೆಗೆ ಒಳಗಾಗಿ ಜೀವನವೇ ಕಷ್ಟ ಎಂಬಂತಹ ಸಂದರ್ಭದಲ್ಲಿ ಶೋಷಿತರಿಗೆ ಧ್ವನಿಯಾಗಿ ನಿಂತ ಮಹಾನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್. ಅವರು ನಡೆಸಿದ ಹೋರಾಟದ ಫಲವಾಗಿ ಇಂದು ಅಸಂಖ್ಯಾತ ಶೋಷಿತರು ವಿದ್ಯೆ ಪಡೆಯಲು ಸಾಧ್ಯವಾಗಿದೆ’ ಎಂದರು.

‘ಅಂಬೇಡ್ಕರ್ ಅವರು ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದವರು. ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಅವರು ಹೇಳಿದ್ದರು. ನಮ್ಮ ದೇಶಕ್ಕೆ ಸಂವಿಧಾನ ನೀಡುವ ಮೂಲ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ತತ್ವಗಳನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ಸಂವಿಧಾನ ಓದುವ ಮೂಲಕ ಅಂಬೇಡ್ಕರ್‌ ಅವರ ತತ್ವಾದರ್ಶ ಪಾಲನೆ ಮಾಡಬೇಕು’ ಎಂದರು.

‘ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರು ಕೂಡ ಶೋಷತರ ಹಕ್ಕುಗಳಿಗೆ ಹೋರಾಟ ನಡೆಸಿದ್ದಾರೆ. ಜೊತೆಗೆ ನಮ್ಮ ದೇಶದ ಜನರು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಅವರು ಹುಟ್ಟುಹಾಕಿದ ಹಸಿರುಕ್ರಾಂತಿ ಇಂದಿಗೂ ಬಲುದೊಡ್ಡ ದಾಖಲೆಯಾಗಿದೆ. ಈ ಇಬ್ಬರು ಮಹನೀಯರು ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತ ಅವರ ಮೌಲ್ಯಗಳನ್ನು ಪಾಲನೆ ಮಾಡಬೇಕು’ ಎಂದರು.

ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಜಿ.ಎಸ್‌. ಸೋಮಶೇಖರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ, ಮಂಡ್ಯ ಉಪವಿಭಾಗಧಿಕಾರಿ ಐಶ್ವರ್ಯಾ, ನಗರಸಭೆ ಅಧ್ಯಕ್ಷರಾದ ಎಚ್.ಎಸ್.ಮಂಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಚೇಗೌಡ ಇದ್ದರು.

ರಕ್ತದಾನ ಮಾಡಿದ ಜಿಲ್ಲಾಧಿಕಾರಿ
ಅಂಬೇಡ್ಕರ್‌ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಎಸ್‌.ಅಶ್ವಥಿ, ತಾವೇ ಸ್ವತಃ ರಕ್ತದಾನ ಮಾಡುವ ಮೂಲಕ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ರಕ್ತದಾನ ಮಾಡುವ ಮೂಲಕ ಇತರರ ಜೀವ ಉಳಿಸುವ ಕೆಲಸ ಮಾಡಬೇಕು. ರಕ್ತದಾನ ಮಾಡಿದರೆ ಒಂದು ಜೀವ ಉಳಿಸಿದ ಶ್ರೇಷ್ಠ ಕೆಲಸ ನಮ್ಮದಾಗುತ್ತದೆ. ಎಲ್ಲರೂ ರಕ್ತದಾನ ಮಾಡುವ ಮೂಲಕ ಮಾದರಿಯಾಗಬೇಕು’ ಎಂದರು.

‘ಸಮ ಸಮಾಜ ನಿರ್ಮಿಸಲು ಯತ್ನಿಸಿದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಭಾರದ ದೇಶ ಕಂಡ ಮಹಾ ಮಾನವತಾವಾದಿಯಾಗಿದ್ದಾರೆ. ಅವರ ತತ್ವಗಳು ಕೇವಲ ಒಂದು ವರ್ಗಕ್ಕಷ್ಟೇ ಸೀಮಿತವಲ್ಲ, ಪ್ರತಿಯೊಬ್ಬರೂ ಅವರ ನಿತ್ಯ ಜೀನದಲ್ಲಿ ಅಳವಡಿಸಿಕೊಂಡು ಶ್ರೇಷ್ಠ ಜೀವನ ನಡೆಸಬೇಕು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು