ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಪ್ರಭಾವಿಗಳ ಪಾಲಾದ ಚರಂಡಿ: ರಸ್ತೆಗೆ ಕೊಳಚೆ

ತಾಲ್ಲೂಕು ಕೇಂದ್ರಗಳಲ್ಲೂ ಮಳೆ ನೀರು ಹರಿವಿಗೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ, ಜನರಿಗೆ ಗೋಳು
Last Updated 1 ನವೆಂಬರ್ 2021, 4:54 IST
ಅಕ್ಷರ ಗಾತ್ರ

ಮಂಡ್ಯ: ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಚರಂಡಿ ಜಾಗ ಒತ್ತು ವರಿ ಆಗಿದ್ದು, ಕೊಳಚೆ ನೀರು ನಡುರಸ್ತೆಯಲ್ಲಿ ಹರಿಯುತ್ತಿದೆ. ಸಣ್ಣ ಮಳೆ ಬಂದರೂ ರಸ್ತೆಗಳೇ ಚರಂಡಿ ಯಾಗುತ್ತಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ.

ನಗರದ ಬಹುತೇಕ ಕಡೆಗಳಲ್ಲಿ ಪ್ರಭಾವಿಗಳು ಚರಂಡಿ ಜಾಗ ಒತ್ತುವರಿ ಮಾಡಿಕೊಂಡಿದ್ದು ಮನೆ, ಕಾರ್‌ ಪಾರ್ಕಿಂಗ್‌, ಉದ್ಯಾನ ನಿರ್ಮಿಸಿಕೊಂಡಿದ್ದಾರೆ. ಚಾಮುಂಡೇ ಶ್ವರಿ ನಗರ, ಆನೆಕೆರೆ ಬೀದಿ, ನೂರಾನಿ ಮೊಹಲ್ಲಾ, ಕಲ್ಲಹಳ್ಳಿ, ಬಸ್‌ನಿಲ್ದಾಣದ ಪಕ್ಕದ ಜಾಗ ಸೇರಿ ಏಳೆಂಟು ಕಡೆ ದೊಡ್ಡ ಚರಂಡಿ (ರಾಜಾ ಕಾಲುವೆ ಮಾದರಿ) ಹರಿಯುತ್ತಿದ್ದು, ಶೇ 75ರಷ್ಟು ಭಾಗ ಒತ್ತುವರಿಗೆ ಒಳಗಾಗಿದೆ. ಉಳಿದ ಜಾಗದಲ್ಲಿ ಕೊಳಚೆ ನೀರು ಹರಿಯತ್ತಿದೆ.

ಒಳಚರಂಡಿ, ಮಳೆ ನೀರು ಚರಂಡಿ, ದೊಡ್ಡ ಚರಂಡಿಗಳೆಂದು 3 ವಿಭಾಗ ಚರಂಡಿಗಳಿದ್ದು, ದೊಡ್ಡ ಚರಂಡಿ ಬಹುತೇಕ ಕಡೆಗಳಲ್ಲಿ ಒತ್ತು ವರಿಯಾಗಿದೆ. ಒತ್ತುವರಿ ಮಾಡಿ ಕೊಂಡಿ ರುವವರು ಪ್ರಭಾವಿಗಳೇ ಆಗಿದ್ದು, ತೆರವುಗೊಳಿಸುವುದು ನಗರ ಸಭೆಗೆ ಸವಾಲಾಗಿದೆ. ಮೂಲದಲ್ಲಿ ಚರಂಡಿ ಎಷ್ಟು ವಿಸ್ತೀರ್ಣ ಇತ್ತು, ಈಗ ಎಷ್ಟಾಗಿದೆ ಎಂಬ ಸ್ಪಷ್ಟ ಮಾಹಿತಿ ನಗರಸಭೆ ಬಳಿಯೇ ಇಲ್ಲ. ದೊಡ್ಡದಾಗಿದ್ದ
ಚರಂಡಿ ಕುಗ್ಗುತ್ತಿರುವ ಮಾಹಿತಿಜನರ ಬಳಿ ಇದೆ.

‘ಚಾಮುಂಡೇಶ್ವರಿ ನಗರದಲ್ಲಿ ಹರಿಯುವ ನಾಲೆ ಜಾಗವೂ ಸೇರಿ ದಂತೆ ಚರಂಡಿಯನ್ನು ಒತ್ತುವರಿ ಮಾಡಿ ಕೊಂಡಿದ್ದಾರೆ. ತೆರವುಗೊಳಿ
ಸುವಂತೆ ಹಲವು ಬಾರಿ ಮನವಿಮಾಡಿ ದರೂ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. 20 ಅಡಿ ಇದ್ದ ಚರಂಡಿ ಈಗ 5 ಅಡಿಗೆ ಬಂದು ನಿಂತಿದೆ. ದೊಡ್ಡ ಮಳೆ ಬಂದರೆ ಚರಂಡಿ ಕಟ್ಟಿಕೊಂಡು ಮನೆಯೊಳಗೆ ನೀರು ನುಗ್ಗುತ್ತದೆ’ ಎಂದು ಚಾಮುಂಡೇಶ್ವರಿನಗರದ ಉಮೇಶ್‌ ಆರೋಪಿಸಿದರು.

ಚರಂಡಿಯಾದ ವಿವಿ ರಸ್ತೆ: ಇತ್ತೀಚೆಗೆ ಸಣ್ಣ ಮಳೆ ಬಂದರೂ ನಗರದ ಹೃದಯಭಾಗದಲ್ಲಿರುವ ಮಹಾವೀರ ವೃತ್ತ ಜಲಾವೃತಗೊಳ್ಳುತ್ತದೆ. ವಿವಿ ರಸ್ತೆಯೇ ಚರಂಡಿಯಾಗಿದ್ದು, ಹೊಳೆಯಂತೆ ನೀರು ಹರಿದು ಬರುತ್ತದೆ. ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಗಾಂಧಿ ಉದ್ಯಾನದ ಕಡೆಯಿಂದ ನೀರು ಮಹಾವೀರ ವೃತ್ತದೆಡೆಗೆ ನುಗ್ಗುತ್ತದೆ.

ನಗರ ವ್ಯಾಪ್ತಿಯಲ್ಲಿ ಒಳಚರಂಡಿ 250 ಕಿ.ಮೀ ಇದೆ. ಮಳೆ ನೀರು ಚರಂಡಿ 450 ಕಿ.ಮೀ ಇದೆ. ದೊಡ್ಡ ಚರಂಡಿ 15 ಕಿ.ಮೀ ಇದೆ. ಮಳೆ ನೀರು ಚರಂಡಿಗಳ ಗಾತ್ರವೂ ಕಡಿಮೆಯಾಗುತ್ತಿರುವ ಕಾರಣ ಮಳೆ ಬಂದರೆ ನೀರು ರಸ್ತೆಗಳತ್ತ ನುಗ್ಗುತ್ತಿದೆ. ವಿವಿ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳ ಮಾಲೀಕರು ಬಹುತೇಕ ಮಳೆ ನೀರು ಚರಂಡಿಯನ್ನು ಮುಚ್ಚಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ತಾಲ್ಲೂಕು ಕೇಂದ್ರಗಳಲ್ಲೂ ಇದೇ ಸ್ಥಿತಿ: ಕೆ.ಆರ್.ಪೇಟೆ ಪಟ್ಟಣದಲ್ಲಿ ಸರಿಯಾದ ಒಳಚರಂಡಿ ಇಲ್ಲದೆದ ಕಾರಣ ಸರಾಗವಾಗಿ ನೀರು
ಹರಿಯಲು ಸಾಧ್ಯವಾಗದೆ ಮನೆಗಳಿಗೆ, ರಸ್ತೆಗಳಿಗೆ ನೀರು ನುಗ್ಗುತ್ತಿದೆ. ಸಾರಿಗೆ ಬಸ್‌ ನಿಲ್ದಾಣವೇ ಕೆರೆಯಾಗಿದ್ದು ಸುತ್ತಲಿನ ಚರಂಡಿ ನೀರು ಬಸ್‌ ನಿಲ್ದಾಣವನ್ನು ಜಲಾವೃತಗೊಳಿಸುತ್ತಿದೆ.

ಡಿಸಿಸಿ ಬ್ಯಾಂಕ್ ಹಿಂಬದಿಯಲ್ಲಿ ಇರುವ ಬಡಾವಣೆಗಳಲ್ಲಿ ಓಡಾಡಲು ಆಗದಂತೆ ನೀರು ನಿಲ್ಲುತ್ತದೆ. ಮೈಸೂರು ರಸ್ತೆ, ಚನ್ನರಾಯಪಟ್ಟಣ ರಸ್ತೆ, ಕಿಕ್ಕೇರಿ ರಸ್ತೆ ಪೇಟೆ ಬೀದಿಗಳಲ್ಲಿ ನೀರು ತುಂಬಿ ಹೊಳೆಯಂತೆ ಹರಿಯುತ್ತದೆ. ಒಳಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು, ನೀರು ಸರಾಗವಾಗಿ ಹರಿಯದೇ ಇರಲು ಕಾರಣವಾಗಿದೆ.

ಪಾಂಡವಪುರ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಯ ಸಮಸ್ಯೆ ವಿಪರೀತವಾಗಿದೆ. ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣವಾಗಿಲ್ಲದ ಕಾರಣ ಅಲ್ಲಲ್ಲಿ ಒಳಚರಂಡಿ ನೀರು ರಸ್ತೆಯಲ್ಲಿ ಉಕ್ಕಿ ಬರುತ್ತಿದೆ. ಇದರಿಂದ ರಸ್ತೆಯಲ್ಲಿ ಅಶುಚಿತ್ವ ಎದ್ದುಕಾಣುತ್ತದೆ. ಚರಂಡಿ ನೀರು ರಸ್ತೆಯಲ್ಲಿ ಹರಿಯುವ ಕಾರಣ ದುರ್ವಾಸನೆಯಲ್ಲಿ ಜನರು ಓಡಾಡುವಂತಾಗಿವೆ. ಮ್ಯಾನ್‌ ಹೋಲ್‌ಗಳು ಉಕ್ಕಿ ಹರಿಯುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾವೇರಿ ಒಡಲಿಗೆ ಚರಂಡಿ ನೀರು: ಶ್ರೀರಂಗಪಟ್ಟಣದಲ್ಲೂ ಮಲಿನ ನೀರು ಉಕ್ಕಿ ಬೀದಿಗಳಲ್ಲಿ ಹರಿಯುತ್ತದೆ. ಜನರು ಮೂಗು ಮುಚ್ಚಿ ತಿರುಗಾಡುವ ಸ್ಥಿತಿ ಬರುತ್ತದೆ. ಒಳ ಚರಂಡಿ ವ್ಯವಸ್ಥೆ ಇದ್ದರೂ ಕೊಳಚೆ ನೀರು ಕಾವೇರಿ ನದಿಯ ಒಡಲಿಗೆ ಸೇರುವುದು ತಪ್ಪಿಲ್ಲ.

ಕಾವೇರಿಪುರ ಬಡಾವಣೆಯಲ್ಲಿ ಚರಂಡಿಯ ನೀರು‌ ಮನೆಗಳ ಮುಂದೆ ನಿಲ್ಲುತ್ತದೆ. ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿಯೂ ಮಲಿನ ನೀರು ಆಗಾಗ ಹರಿಯುತ್ತಿರುತ್ತದೆ. ಬೆಂಗಳೂ ರು– ರಾಷ್ಟ್ರೀಯ ಹೆದ್ದಾರಿಯಲ್ಲೂ ಕೊಳಚೆ ನೀರು ಹರಿಯುತ್ತದೆ. 5 ವರ್ಷಗಳ ಹಿಂದಷ್ಟೇ ಮುಗಿದಿರುವ‌ ಈ ಕಾಮಗಾರಿ ಲೋಪದಿಂದ ಕೂಡಿದ್ದು, ನಾಗರಿಕರು ಬವಣೆಪಡುತ್ತಿದ್ದಾರೆ.

ಮಳೆ ಬಂದರೆ ಮುಳುಗುವ ಕಚೇರಿ

ಮಳವಳ್ಳಿ ಪಟ್ಟಣದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದಾಗಿ ಮಳೆ ಬಂದರೆ ರಸ್ತೆಗಳು, ಮನೆ, ಮಳಿಗೆ, ಸರ್ಕಾರಿ ಕಚೇರಿಗಳು ಜಲಾವೃತಗೊಳ್ಳುತ್ತವೆ. ಮೈಸೂರು ರಸ್ತೆ, ಮದ್ದೂರು ರಸ್ತೆ, ಪೇಟೆ ಬೀದಿಗಳಲ್ಲಿ ನೀರು ತುಂಬಿ ಹೊಳೆಯಂತೆ ಹರಿಯುತ್ತದೆ. ಒಳಚರಂಡಿಯಲ್ಲಿ ಹೂಳು ತುಂಬಿಕೊಂಡಿದೆ. ನೀರು ಸರಾಗವಾಗಿ ಹರಿಯದೇ ಮಳೆ ಬಿದ್ದ ವೇಳೆಯಲ್ಲಿ ಮಳೆ ನೀರಿನ
ಜತೆಗೆ ಚರಂಡಿಯಲ್ಲಿನ ಕಶ್ಮಲಗಳು ರಸ್ತೆಯ ಮೇಲೆ ಹರಿದು ರಸ್ತೆಯಲ್ಲಾಗಬ್ಬೆದ್ದು ನಾರುತ್ತದೆ.

ಅನಂತ ರಾಮ್‌ ಸರ್ಕಲ್ ಬಳಿಯ ಅಂಚೆ, ಬಿಎಸ್ಎನ್‌ಎಲ್ ಕಚೇರಿಗಳಿಗೆ ನೀರು ನುಗ್ಗಿ ಹಲವು ಬಾರಿ ಮುಳುಗಿದೆ. ಸರ್ಕಾರಿ ದಾಖಲೆಗಳು ಹಾಳಾಗಿವೆ. ಬುಕ್ ಸ್ಟೋರ್, ಮೆಡಿಕಲ್ ಸ್ಟೋರ್, ಸೇರಿದಂತೆ ಹಲವು ಅಂಗಡಿಗಳಿಗೆ ಮಳೆ ನೀರು ನುಗ್ಗಿ ಹಾನಿ ಉಂಟಾಗಿರುವುದೂ ಇದೆ. ಹಲವು ವರ್ಷಗಳಿಂದ ಈ ಪರಿಸ್ಥಿತಿ ಇದ್ದು, ಈವರೆಗೂ ಅದನ್ನು ಸರಿಪಡಿಸಲು ಮಳವಳ್ಳಿ ಶಾಸಕರಿಗೆ ಸಾಧ್ಯವಾಗಿಲ್ಲ.

ಮದ್ದೂರಿನಲ್ಲಿ ಕೊಳಚೆಯದ್ದೇ ಸಮಸ್ಯೆ

ಮದ್ದೂರಿನಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ಕೊಳಚೆ ನೀರಿನ ಸಮಸ್ಯೆಯೇ ತೀವ್ರವಾಗಿದೆ. ಬೆಂಗಳೂರು–ಮೈಸೂರು ದಶಪಥ ಕಾಮಗಾರಿಯಿಂದಾಗಿ ಇಡೀ ಪಟ್ಟಣದ ಒಳಚರಂಡಿ ವ್ಯವಸ್ಥೆ ಹಾಳಾಗಿದೆ. ಕಾಮಗಾರಿ ನಡೆಸುತ್ತಿರುವ ಕಂಪೆನಿಯವರು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ಕೆಲಸ ಮಾಡಿದ್ದು, ಚರಂಡಿ ಪೈಪ್‌ಲೈನ್‌ಗಳನ್ನು ಒಡೆದು ಹಾಕಿದ್ದಾರೆ.

ಹೀಗಾಗಿ ಮಲಿನ ನೀರು ಹೆದ್ದಾರಿಯ ಮೇಲೆ ಹರಿಯುತ್ತಿದ್ದು, ವಾಹನಗಳು ಪಾದಚಾರಿಗಳಿಗೆ ಕೊಳಚೆ ಹಾರಿಸಿಕೊಂಡು ಚಲಿಸುತ್ತಿವೆ. ಹಲವಾರು ತಿಂಗಳುಗಳಿಂದ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಮಳೆ ಬಂದಾಗ ಹೆದ್ದಾರಿ ಮೇಲೆ ಒಳಚರಂಡಿ ನೀರು ಹೊಳೆಯುಂತೆ ಹರಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT