ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕೋವಿಡ್‌ ನಿಯಂತ್ರಣಕ್ಕೆ ಡ್ರೋನ್, ಸಿಸಿಟಿವಿ ಕ್ಯಾಮೆರಾ ಮೊರೆ

ಮಳವಳ್ಳಿ ಅಲ್ಲಲ್ಲಿ ಸೇರುತ್ತಿರುವ ಜನರ : ಪೊಲೀಸರಿಗೆ ಭದ್ರತೆಯ ತಲೆನೋವು
Last Updated 21 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಮಳವಳ್ಳಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಮಳವಳ್ಳಿ ಪಟ್ಟಣದಲ್ಲೇ ವರದಿಯಾಗಿದೆ. ಇಲ್ಲಿನ ನಿಷೇಧಿತ, ನಿರ್ಬಂಧಿತ ಪ್ರದೇಶಗಳಲ್ಲಿನ ಜನರ ಚಲನ ವಲನ ವೀಕ್ಷಿಸಲು, ಭದ್ರತೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಯು ಡ್ರೋನ್‌ ಹಾಗೂ ಸಿಸಿಟಿವಿ ಕ್ಯಾಮೆರಾಗಳ ಮೊರೆ ಹೋಗಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 12 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 11 ಮಳವಳ್ಳಿ ಪಟ್ಟಣದಿಂದಲೇ ಬಂದಿವೆ. ಈಗಾಗಲೇ ನೂರಾರು ಮಂದಿಯ ರಕ್ತ, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ. ಭದ್ರತೆಗಾಗಿ ಎಷ್ಟೇ ಪೊಲೀಸ್‌ ಸಿಬ್ಬಂದಿ ನಿಯೋಜಿಸಿದರೂ ಅವರ ಕಣ್ಣು ತಪ್ಪಿಸಿ ಜನರು ತಿರುಗಾಡುತ್ತಲೇ ಇದ್ದಾರೆ. ಜನರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಡ್ರೋನ್, ಸಿಸಿಟಿವಿ ಕ್ಯಾಮೆರಾ ಸಹಾಯ ಪಡೆಯಲಾಗುತ್ತಿದೆ.

ಪಟ್ಟಣದ 7ನೇ ವಾರ್ಡ್‌ ಈದ್ಗಾ ಮೊಹಲ್ಲಾದ 6 ಮಂದಿಗೆ, ಕೋಟೆಕಾಳಮ್ಮ ಬೀದಿಯ 4 ಮಂದಿಗೆ ಹಾಗೂ ಪೇಟೆ ಮುಸ್ಲಿಂ ಬ್ಲಾಕ್‌ನ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇವುಗಳು ಸೂಕ್ಷ್ಮ ಪ್ರದೇಶಗಳಾಗಿದ್ದು, ಇಲ್ಲಿ ಸಂಪೂರ್ಣ ನಿರ್ಬಂಧಿಸಲಾಗಿದ್ದರೂ ಹಲವಾರು ಮಂದಿ ಒಂದೆಡೆ ಒಟ್ಟಿಗೆ ಸೇರುವುದು ನಡೆಯುತ್ತಲೇ ಇದೆ. ಪ್ರಮುಖ ಬೀದಿಯ ತಿರುವು, ಮುಚ್ಚಿರುವ ಅಂಗಡಿ, ಖಾಲಿ ಜಾಗದಲ್ಲಿ ಒಟ್ಟೊಟ್ಟಿಗೆ ಕುಳಿತು ಮಾತನಾಡುವುದು ಕಡಿಮೆಯಾಗಿಲ್ಲ. ಇದು ಪೊಲೀಸರಿಗೆ ತಲೆ ಬಿಸಿಯಾಗಿದ್ದು, ಇದಕ್ಕೆಲ್ಲಾ ಪರಿಹಾರವಾಗಿ ಜನರ ಮೇಲೆ ಹದ್ದಿನ ಕಣ್ಣಿಡಲು ಪಟ್ಟಣದಾದ್ಯಂತ 15 ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಡ್ರೋಣ್‌ ಕ್ಯಾಮೆರಾ ಮೂಲಕ ನಿಯಂತ್ರಿಸಲು ಮುಂದಾಗಿದೆ. ಲಾಕ್‌ಡೌನ್‌ ನಿಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಿಗಿಗೊಳಿಸಲು ಇಲಾಖೆ ಮುಂದಾಗಿದೆ.

ಸರ್ಕಾರದ ಆದೇಶ ಪಾಲಿಸಿ, ಸಹಕರಿಸಬೇಕು ಇಲ್ಲವಾದಲ್ಲಿ, ಪ್ರಕರಣ ದಾಖಲಿಸಿ, ಅಪರಾಧ ಪ್ರಕರಣ ದಾಖಲಿಸಲಾಗುವುದು ಎಂದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.

ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಒಟ್ಟು 491 ಮಂದಿಯ ಪ್ರಥಮ ಸುತ್ತಿನ ಕ್ವಾರಂಟೈನ್ ಮುಗಿಸಿದ್ದು, ಅವರಲ್ಲಿ ಹಲವರ ವರದಿ ನೆಗೆಟಿವ್ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮತ್ತೊಮ್ಮೆ ಅವರನ್ನು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದ್ದು, ಎರಡನೇ ಹಂತದಲ್ಲಿ ಎಲ್ಲಾ 491 ಮಂದಿಯನ್ನು ತಾಲ್ಲೂಕು ಆಡಳಿತ ಮತ್ತೆ ಹೋಂ ಕ್ವಾರಂಟೈನ್ ಮಾಡಿದೆ. ಕ್ವಾರಂಟೈನ್‌ ಮಾಡಿರುವವರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT