ಗುರುವಾರ , ಜನವರಿ 23, 2020
27 °C
ಕರ್ನಾಟಕ ರಾಜ್ಯೋತ್ಸವ, ಕುವೆಂಪು ಜನ್ಮದಿನ;

ಎಲ್ಲೂ ಇಲ್ಲದ ಇಂಗ್ಲಿಷ್‌ ವ್ಯಾಮೋಹ ಭಾರತದಲ್ಲಿದೆ : ಬಿ.ಎಲ್.ಶಂಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಪ್ರಪಂಚದ ಎಲ್ಲಾ ದೇಶಗಳಲ್ಲೂ ಇಂಗ್ಲಿಷ್‌ ಭಾಷೆ ಇಲ್ಲ. ಹಲವು ದೇಶಗಳಲ್ಲಿ ತಮ್ಮ ಮಾತೃಭಾಷೆ ಮೂಲಕವೇ ಶಿಕ್ಷಣ ನೀಡಿ, ಅಭಿವೃದ್ಧಿ ಹೊಂದಿವೆ. ಆ ದೇಶಗಳಲ್ಲಿ ಇಲ್ಲದ ಇಂಗ್ಲಿಷ್‌ ವ್ಯಾಮೋಹ ನಮ್ಮ ದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ’ ಎಂದು ಕರ್ನಾಟಕ ರಾಜ್ಯ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯೋತ್ಸವ, ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಜಪಾನ್‌, ಫ್ರಾನ್ಸ್‌, ರಷ್ಯಾ, ಜರ್ಮನಿ, ಚೀನಾ ಸೇರಿದಂತೆ ಅಭಿವೃದ್ಧಿ ಹೊಂದಿರುವ ವಿಶ್ವದ ಯಾವುದೇ ರಾಷ್ಟ್ರಗಳಲ್ಲಿ ಇಲ್ಲದ ಇಂಗ್ಲಿಷ್‌ ವ್ಯಾಮೋಹ ಭಾರತದಲ್ಲಿದೆ.  ಉದ್ಯೋಗ ವಿಚಾರದಲ್ಲಿ ಭಾಷೆ ಎಂಬುದು ಪ್ರಮುಖ ಪಾತ್ರ ವಹಿಸುತ್ತಿದೆ. ಶಿಕ್ಷಣ ಪಡೆಯುವ ಮಾಧ್ಯಮದ ಗೊಂದಲವನ್ನು ಮೊದಲು ನಿವಾರಿಸಬೇಕು’ ಎಂದು ಹೇಳಿದರು.

‘ಇಂಗ್ಲಿಷ್‌ ಕಲಿತರೆ ಬೇಗ ಉದ್ಯೋಗ ಸಿಗುತ್ತದೆ ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ. ಇದು ಮಾತೃಭಾಷೆಯನ್ನು ಕೀಳಾಗಿ, ನಿಕೃಷ್ಟವಾಗಿ ಕಾಣುವಂತೆ ಮಾಡಿದೆ. ಮಾತೃ ಭಾಷೆ ಎಂಬುದು ಎಲ್ಲರಿಗೂ, ಅಲ್ಪ ಕಾಲದಲ್ಲೂ ಅರ್ಥವಾಗುವ ಭಾಷೆಯಾಗಿದೆ. ಕನ್ನಡ ಮಾತನಾಡುವ ಪ್ರದೇಶಗಳು ಇಂದಿಗೂ ರಾಜ್ಯದ ಹೊರಗಿವೆ. ಅಂತೆಯೇ ಬೇರೆ ಭಾಷೆಯನ್ನು ಪ್ರಧಾನವಾಗಿ ಮಾತನಾಡುವ ಪ್ರದೇಶಗಳೂ ಕರ್ನಾಟಕದಲ್ಲಿವೆ. ಭಾಷೆಯ ಆಧಾರದ ಮೇಲೆ ರೂಪಿತವಾದ ರಾಜ್ಯಗಳಲ್ಲಿನ ಜನರು ರಾಜ್ಯಕ್ಕೆ ಒಪ್ಪಿತವಾಗಿರುತ್ತಾರೆ ಎಂದು ಹೇಳಲಾಗುವುದಿಲ್ಲ. ಈ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಏಳುತ್ತಲೇ ಇರುತ್ತದೆ’ ಎಂದರು.

ಸಾಹಿತಿ ಡಾ.ಎಚ್‌.ಎಸ್‌.ವೆಂಕಟೇಶ ಮೂರ್ತಿ ಮಾತನಾಡಿ ‘ಕುವೆಂಪು ಅವರು ಬರೆಯದ ಸಾಹಿತ್ಯ ಪ್ರಕಾರಗಳಿಲ್ಲ. ಅವರು ಕನ್ನಡ ಸಾಹಿತ್ಯದ ಸ್ವಾಭಿಮಾನದ ಪ್ರತೀಕ. ಅವರು ಕ್ರಾಂತಿಕಾರಿ ಬರಹಗಾರರಾಗಿದ್ದರು. ದೇವಸ್ಥಾನವನ್ನು ಬಹಿಷ್ಕಾರ ಮಾಡಿದ ಮೊದಲ ಕವಿ ಕುವೆಂಪು. ದೇವರಿಲ್ಲದ ಗುಡಿ ನಿಜವಾದ ದೇವಸ್ಥಾನ ಎಂದು ಅವರು ಹೇಳಿದ್ದರು. ಶೋಷಣೆ, ಅಸಮಾನತೆ, ಪುರೋಹಿತಶಾಹಿ ವಿರುದ್ಧ ಕುವೆಂಪು ತಮ್ಮ ಸಾಹಿತ್ಯದ ಮೂಲಕ ಕ್ರಾಂತಿಯ ಕಹಳೆ ಮೊಳಗಿಸಿದ್ದರು’ ಎಂದರು.

‘ಕುವೆಂಪು ಅವರು ದೇವಸ್ಥಾನವನ್ನು ಸೆರೆಮನೆ ಎಂತಲೂ, ಪೂಜಾರಿಯನ್ನು ಸೆರೆಮನೆ ಕಾಯುವವನು ಎಂತಲೂ ಬಣ್ಣಿಸಿದ್ದರು. ಶೋಷಣೆ, ವೈದಿಕಶಾಹಿ ವಿರುದ್ಧ ಸಾತ್ವಿಕ ಕ್ರೋಧ ಇದ್ದೇ ಇತ್ತು. ನಿಜವಾದ ಕವಿ, ಸಾಹಿತಿ ಕ್ರಾಂತಿಕಾರಿಯಾಗಿರಬೇಕು ಎಂಬುದಕ್ಕೆ ಕುವೆಂಪು ಅವರು ಉತ್ತಮ ನಿದರ್ಶನ. ನಮ್ಮ ಮೆಚ್ಚಿನ ಲೇಖಕರು, ಸಾಹಿತಿಗಳು, ಅಧಿಕಾರಿಗಳನ್ನು ನೋಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು’ ಎಂದರು.

ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ ಅವರನ್ನು ಅಭಿನಂದಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿಕುಮಾರ್‌ ಚಾಮಲಾಪುರ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ಆರ್‌.ಮದನ್‌ಕುಮಾರ್‌, ಪ್ರತಿಭಾಂಜಲಿ ಡೇವಿಡ್‌ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು