ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಂಡರ್‌ ಪಡೆಯುವ ಮುನ್ನ ಸೀಲ್‌ ಪರೀಕ್ಷಿಸಿ

ಪ್ರಾಥಮಿಕ ಪರೀಕ್ಷೆ ನಡೆಸಲು ಅಡುಗೆ ಅನಿಲ ಸರಬರಾಜು ಕಂಪನಿ, ಏಜೆನ್ಸಿ ಸಿಬ್ಬಂದಿಯ ಸೂಚನೆ
Last Updated 23 ಜನವರಿ 2023, 5:37 IST
ಅಕ್ಷರ ಗಾತ್ರ

ಮಂಡ್ಯ: ಅಡುಗೆ ಅನಿಲದ ಸಿಲಿಂಡರ್‌ ಪಡೆಯುವ ಮುನ್ನ ಗ್ರಾಹಕರು ಪ್ರಾಥಮಿಕವಾಗಿ ಸೀಲ್‌ ಪರೀಕ್ಷೆ ಮಾಡದಿರುವುದೇ ಅನಿಲ ಅವಘಡಗಳಿಗೆ ಮೂಲ ಕಾರಣ ಎಂದು ಅನಿಲ ಸರಬರಾಜು ಕಂಪನಿ, ಏಜೆನ್ಸಿ ಸಿಬ್ಬಂದಿ ಹೇಳುತ್ತಾರೆ. ಆದರೆ, ಗ್ರಾಹಕರಲ್ಲಿ ಅರಿವಿನ ಕೊರತೆಯಿಂದಾಗಿ ಸಿಲಿಂಡರ್‌ಗಳನ್ನು ನೇರವಾಗಿ ಪಡೆಯುವ ಪ್ರಕ್ರಿಯೆ ಮುಂದುವರಿದಿದೆ.

ಅದೃಷ್ಟವಶಾತ್‌ ಜಿಲ್ಲೆಯಲ್ಲಿ ಈಚೆಗೆ ಗಂಭೀರವಾದ ಯಾವುದೇ ಅಡುಗೆ ಅನಿಲ ದುರಂತಗಳು ನಡೆದಿಲ್ಲ. ಆದರೆ, ಸಣ್ಣಪುಟ್ಟ ಅನಿಲ ಸೋರಿಕೆ ಪ್ರಕರಣಗಳು ನಡೆಯುತ್ತಿದ್ದು, ಅದಕ್ಕೆ ಗ್ರಾಹಕರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪವಿದೆ. ನಗರ, ಪಟ್ಟಣ, ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರೂ ಅಡುಗೆ ಅನಿಲ ಬಳಸುತ್ತಿದ್ದು ಅವಶ್ಯವಾಗಿ ಸುರಕ್ಷತಾ ಕ್ರಮ ಅನುಸರಿಸುವುದು ಅನಿವಾರ್ಯವಾಗಿದೆ.

ಏಜೆನ್ಸಿಯಿಂದ ಸಿಲಿಂಡರ್‌ ಬಂದಾಗ ಅದರ ಪ್ರಾಥಮಿಕ ಪರೀಕ್ಷೆ ನಡೆಯಬೇಕು. ಸರಬರಾಜು ಮಾಡುವ ಸಿಬ್ಬಂದಿಗೆ ಸೀಲ್‌ ತೆರೆಯುವ ತರಬೇತಿ ಇರುತ್ತದೆ. ಗ್ರಾಕಹರು ವಿತರಕನಿಗೆ ಸೀಲ್‌ ತೆಗೆದು ಪರೀಕ್ಷೆ ಮಾಡುವಂತೆ ತಿಳಿಸಬೇಕು. ಈ ವಿಚಾರದಲ್ಲಿ ಹಿಂದೇಟು ಹಾಕಬಾರದು. ಪರೀಕ್ಷೆ ನಡೆದರೆ ಶೇ 60ರಷ್ಟ ಅನಿಲ ದುರಂತಗಳನ್ನು ತಡೆಯಬಹುದು ಎಂದು ಏಜೆನ್ಸಿಯವರು ಹೇಳುತ್ತಾರೆ.

‘ಸೀಲ್ ಆಗಿರುವ ಮುಚ್ಚಳ ತೆರೆದಾಗ ಅನಿಲ ಸೋರಿಕೆ ಇದ್ದರೆ ಅದು ಆರಂಭದಲ್ಲೇ ತಿಳಿಯುತ್ತದೆ. ಸಿಲಿಂಡರ್‌ ಪಡೆಯುವಾಗಲೇ ಸೋರಿಕೆ ಗೊತ್ತಾದರೆ ಅನಾಹುತ ತಡೆಯಬಹುದು. ಸಿಲಿಂಡರ್‌ ಪಿನ್‌ನಲ್ಲಿ ಏನೇ ತಾಂತ್ರಿಕ ದೋಷಗ ಳಿದ್ದರೂ ಈ ಹಂತದಲ್ಲಿ ಗೊತ್ತಾಗುತ್ತದೆ. ದೋಷವಿದ್ದರೆ ಗ್ರಾಹಕರು ಬದಲಿ ಸಿಲಿಂಡರ್‌ ಪಡೆಯಬಹುದು’ ಎಂದು ಗುರುಭಾರತ್‌ ಗ್ಯಾಸ್‌ ಏಜೆನ್ಸಿ ಮುಖ್ಯಸ್ಥರಾದ ಚಂದನ್‌ ತಿಳಿಸಿದರು.

ವಿವಿಧೆಡೆ ಜಾಗೃತಿ ಕಾರ್ಯಕ್ರಮ: ಮಂಡ್ಯ ಜಿಲ್ಲೆಯಲ್ಲಿ 6 ಲಕ್ಷಕ್ಕೂ ಹೆಚ್ಚು ಅಡುಗೆ ಅನಿಲ ಸಂಪರ್ಕಗಳಿವೆ. 35ಕ್ಕೂ ಹೆಚ್ಚು ಏಜೆನ್ಸಿಗಗಳು ಸಿಲಿಂಡರ್‌ ಸರಬರಾಜು ಮಾಡುತ್ತಿವೆ. ಭಾರತ್‌, ಎಚ್‌.ಪಿ, ಇಂಡೇನ್‌ ಕಂಪನಿಗಳು ಅನಿಲ ಸರಬರಾಜು ಮಾಡುತ್ತಿವೆ.

ಸಿಲಿಂಡರ್‌ ಬಳಕೆಗೆ ಸಂಬಂಧಿಸಿದಂತೆ ಜನರಿಗೆ ಜಾಗೃತಿ ಮೂಡಿಸುವ ಜವಾಬ್ದಾರಿ ಕೂಡ ಏಜೆನ್ಸಿಗಳ ಮೇಲಿದೆ. ಏಜೆನ್ಸಿ ಮಾಲೀಕರು ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದೊಂದಿಗೆ ಹಲವು ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ.

‘ನಗರ, ಪಟ್ಟಣ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮಗಳಿಗೆ ಜನರು ಬರುತ್ತಿಲ್ಲ. ಹಳ್ಳಿಗಳಲ್ಲಿ ರಂಗದ ಬೀದಿಯಲ್ಲಿ, ಹಾಲಿನ ಡೇರಿಗಳ ಮುಂದೆ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ಇದೆ. ವಿವಿಧ ಸಂಘಟನೆಗಳ ಸದಸ್ಯರೂ ಜಾಗೃತಿ ಕಾರ್ಯಕ್ರಮಕ್ಕೆ ಸಹಾಯ ಮಾಡುತ್ತಿದ್ದಾರೆ. ಅಡುಗೆ ಅನಿಲ ಬಳಕೆಗೆ ಸಂಬಂಧಿಸಿದಂತೆ ಎಷ್ಟೇ ಜಾಗೃತಿ ಕಾರ್ಯಕ್ರಮ ಮಾಡಿದರೂ ಕಡಿಮೆಯೇ ಆಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು’ ಎಂದು ಎಚ್‌.ಪಿ ಗ್ಯಾಸ್‌ ಏಜೆನ್ಸಿಯ ಸಿಬ್ಬಂದಿ ಎಂ.ಶಂಕರ್‌ ಹೇಳಿದರು.

ಸಣ್ಣಪುಟ್ಟ ಸೋರಿಕೆ: ಜಿಲ್ಲೆಯಲ್ಲಿ ಕಳೆದ 2–3 ವರ್ಷಗಳಿಂದ ದೊಡ್ಡ ಮಟ್ಟದ ಅನಿಲ ಸೋರಿಕೆ ಪ್ರಕರಣ ನಡೆದಿಲ್ಲ. ಆದರೆ, ಸಣ್ಣ ಪುಟ್ಟ ಸೋರಿಕೆ ಪ್ರಕರಣಗಳು ಆಗಾಗ ನಡೆಯುತ್ತಿರುತ್ತವೆ. ಅವುಗಳನ್ನು ಬಹಳ ಎಚ್ಚರಿಕೆಯಿಂದ ತಡೆಯದಿದ್ದರೆ ದೊಡ್ಡ ದುರಂತಗಳಿಗೆ ಕಾರಣವಾಗಬಹುದು ಎಂದು ಏಜೆನ್ಸಿ ಸಿಬ್ಬಂದಿ ಹೇಳುತ್ತಾರೆ.

ಪ್ರಮುಖವಾಗಿ ಪ್ರತಿ 5 ವರ್ಷಕ್ಕೊಮ್ಮೆ ಸಿಲಿಂಡರ್‌ ಟ್ಯೂಬ್‌ ಬದಲಾವಣೆ ಮಾಡಬೇಕು. ಅದರ ವಾರಂಟಿ ಅವಧಿಯೂ 5 ವರ್ಷವೇ ಆಗಿದೆ. ನಂತರ ಅದನ್ನು ಯಾವುದೇ ಕಾರಣಕ್ಕೂ ಬಳಸಬಾರದು. ರಬ್ಬರ್‌ ಸಾಮರ್ಥ್ಯವೂ ಕಡಿಮೆಯಾಗುವ ಕಾರಣ ಅದನ್ನು ತಕ್ಷಣವೇ ಬದಲಾವಣೆ ಮಾಡಬೇಕು. 5 ವರ್ಷದ ನಂತರವೂ ಅದನ್ನು ಬಳಸಿದರೆ ಅನಿಲ ಸೋರಿಕೆಯ ಅಪಾಯ ಇರುತ್ತದೆ ಎಂದು ಏಜೆನ್ಸಿಯವರು ಎಚ್ಚರಿಸುತ್ತಾರೆ.

ಸ್ವಿಚ್‌ ಹಾಕುವಾಗ ಎಚ್ಚರ: ಕೇವಲ ವಾಸನೆಯಿಂದಲೇ ಅನಿಲ ಸೋರಿಕೆಯನ್ನು ಪತ್ತೆ ಮಾಡಬಹುದು. ಅನಿಲ ಸೋರಿಕೆಯಾಗುತ್ತಿದ್ದರೆ ಅಲ್ಲಿ ಯಾವುದೇ ವಿದ್ಯುತ್‌ ಉಪಕರಣಗಳನ್ನು ಬಳಸಬಾರದು. ವಿದ್ಯುತ್‌ ಸ್ವಿಚ್‌ ಹಾಕಿದರೂ ಬೆಂಕಿ ಹೊತ್ತಿಕೊಳ್ಳುವ ಅಪಾಯ ಇರುತ್ತದೆ. ಸ್ವಿಚ್‌ನಿಂದ ಬರುವ ಕಿಡಿಯಿಂದ ಬೆಂಕಿ ಹೊತ್ತಿಕೊಳ್ಳುತ್ತದೆ. ಹೀಗಾಗಿ ಸ್ವಿಚ್‌ ಹಾಕಲೇಬಾರದು ಎಂದು ಅವರು ತಿಳಿಸುತ್ತಾರೆ.

ಸಹಾಯವಾಣಿ ಬಳಕೆ: ಅಡುಗೆ ಅನಿಲ ಸಂಬಂಧಿತ ಯಾವುದೇ ಸಮಸ್ಯೆ, ಸೋರಿಕೆ ಪ್ರಕರಣ ಇದ್ದಾಗ ಗ್ರಾಹಕರು ತಕ್ಷಣ 1908 ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಜೊತೆಗೆ ಪ್ರತಿ ಏಜೆನ್ಸಿ ಕೂಡ ತಮ್ಮದೇ ಆದ ಸಹಾಯವಾಣಿ ಸಂಖ್ಯೆ ಬಳಸುತ್ತಿದ್ದು ಗ್ರಾಹಕರು ಆ ಸಂಖ್ಯೆಯನ್ನು ಇಟ್ಟಕೊಂಡಿರಬೇಕು.

‘ನಿಯಮದಂತೆ ಪ್ರತಿ ಏಜೆನ್ಸಿಯೂ ಸಹಾಯವಾಣಿ ಸಂಖ್ಯೆಯನ್ನು ಗ್ರಾಹಕರಿಗೆ ನೀಡಿದೆ. ಆ ಸಂಖ್ಯೆಯನ್ನು ಕಡ್ಡಾಯವಾಗಿ ಗ್ರಾಹಕರು ಇಟ್ಟುಕೊಳ್ಳಬೇಕು. ಏಜೆನ್ಸಿಯವರು ನೀಡುವ ಪುಸ್ತಕ ಹಾಗೂ ಬಿಲ್‌ ಮೇಲೆ ಕೂಡ ಸಹಾಯವಾಣಿ ಸಂಖ್ಯೆ ನೀಡಲಾಗಿದೆ. ಆ ಸಂಖ್ಯೆ ಸಂಪರ್ಕಿಸಿ ಯಾವುದೇ ದೂರು ನೀಡಬಹುದು’ ಎಂದು ಇಂಡೇನ್‌ ಕಂಪನಿ ಸಿಬ್ಬಂದಿ ರಾಜು ತಿಳಿಸಿದರು.

‘ವಿಮೆ: ಗುಣಮಟ್ಟದ ಉಪಕರಣ ಅವಶ್ಯ’

ಅಡುಗೆ ಅನಿಲ ಪಡೆಯುವ ಪ್ರತಿ ಗ್ರಾಹಕ ವಿಮೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಯಾವುದೇ ಅನಿಲ ದುರಂತ ಸಂಭವಿಸಿದರೆ ಅವರು ವಿಮಾ ಕಂಪನಿಯಿಂದ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಘಟನೆ ನಡೆದಾಗ ಕಂಪನಿಯ ಸಿಬ್ಬಂದಿ ತನಿಖೆ ನಡೆಸಿ ಪರಿಹಾರ ಪಡೆಯುವ ಅರ್ಹತೆಯನ್ನು ಪರಿಶೀಲನೆ ನಡೆಸಲಾಗುತ್ತದೆ.

ಒಲೆ, ರೆಗ್ಯುಲೇಟರ್‌, ಟ್ಯೂಬ್‌ ಇತರ ಉಪಕರಣಗಳು ಉತ್ತಮ ಗುಣಮಟ್ಟ, ಬ್ರಾಂಡೆಡ್‌ ಹಾಗೂ ಸುರಕ್ಷತಾ ಗುರುತು ಇರುವ ಉಪಕರಣ ಬಳಸಿದ್ದರೆ ಮಾತ್ರ ಪರಿಹಾರ ದೊರೆಯುತ್ತದೆ. ಕಳಪೆ ಗುಣಮಟ್ಟದ ಉಪಕರಣ ಬಳಸಿ ಅನಿಲ ದುರಂತ ನಡೆ ದಿದ್ದರೆ ಅಂತಹ ಗ್ರಾಹಕರಿಗೆ ಪರಿಹಾರ ಬರುವುದಿಲ್ಲ.

‘ಒಲೆ ಸಿಲಿಂಡರ್‌ನ ಮೇಲ್ಮಟ್ಟದಲ್ಲಿರಲಿ’

ಅಡುಗೆ ಅನಿಲವನ್ನು ಸುರಕ್ಷತೆಯಿಂದ ಬಳಸುವಲ್ಲಿ ಎಚ್ಚರಿಕೆ ವಹಿಸಬೇಕು, ಯಾವಾಗಲೂ ಒಲೆಯು ಸಿಲಿಂಡರ್‌ಗಿಂತ ಮೇಲ್ಮಟ್ಟದಲ್ಲಿ ಇರಬೇಕು. ಸಿಲಿಂಡರ್‌ನಿಂದ ಅನಿಲ ಮೇಲ್ಮುಖವಾಗಿ ಚಲಿಸಿದರೆ ಅದು ಹೆಚ್ಚು ಸುರಕ್ಷಿತ. ಒಲೆಯನ್ನು ಕೆಳಗೆ ಇಟ್ಟು ಬಳಸಿದರೆ ಅನಿಲ ಕೆಳಮುಖವಾಗಿ ಚಲಿಸಿ ಸೋರಿಕೆಗೆ ಕಾರಣವಾಗುತ್ತದೆ ಎಂದು ತಂತ್ರಜ್ಞರು ಹೇಳುತ್ತಾರೆ.

‘ಮನೆಗಳಲ್ಲಿ ಮಾಂಸಾಹಾರ ಅಡುಗೆ ತಯಾರಿಸಲು ಬೇರೊಂದು ಒಲೆಯನ್ನು ಬಳಸುತ್ತಾರೆ. ನೆಲದ ಮೇಲೆ ಒಲೆ ಇಟ್ಟ ಅಡುಗೆ ಮಾಡುತ್ತಾರೆ. ಹಬ್ಬಗಳಲ್ಲಿ ಪ್ರತ್ಯೇಕ ಒಲೆ ಬಳಸುತ್ತಾರೆ. ಒಲೆಯನ್ನು ಕೆಳಮಟ್ಟದಲ್ಲಿ ಇಟ್ಟ ಹಲವು ಪ್ರಕರಣಗಳಲ್ಲಿ ಅನಿಲ ಸೋರಿಕೆಯಾಗಿದೆ’ ಎಂದು ತಂತ್ರಜ್ಞರಾದ ಸುಂದರೇಶ್‌ ತಿಳಿಸಿದರು.

‘ಉಜ್ವಲ; ಬಾರದ ಸಬ್ಸಿಡಿ ಹಣ’

ಬಿಪಿಎಲ್‌ ಪಡಿತರ ಚೀಟಿಯುಳ್ಳವರಿಗೆ ಉಜ್ವಲ ಯೋಜನೆಯಡಿ ಜಿಲ್ಲೆಯಲ್ಲಿ ಲಕ್ಷಕ್ಕೂ ಹೆಚ್ಚು ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಅವರ ಖಾತೆಗೆ ಪ್ರತಿ ಸಿಲಿಂಡರ್‌ಗೆ ₹ 200 ಸಬ್ಸಿಡಿ ಬರಬೇಕು. ಅದು ಸಮರ್ಪಕವಾಗಿ ಬಾರದ ಕಾರಣ ಗ್ರಾಹಕರು ಅಡುಗೆಗೆ ಅನಿಲ ಬಳಕೆಯನ್ನೇ ಸ್ಥಗಿತಗೊಳಿಸಿದ್ದಾರೆ.

‘ಜಿಲ್ಲೆಯಲ್ಲಿ ಶೇ 50ರಷ್ಟು ಜನರು ಉಜ್ವಲ ಸಂಪರ್ಕ ಸ್ಥಗಿತಗೊಳಿಸಿದ್ದಾರೆ. ಮೊದಲಿನಂತೆ ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತಿದ್ದಾರೆ. ಇದಕ್ಕೆ ಸಮರ್ಪಕವಾಗಿ ಸಬ್ಸಿಡಿ ಬಾರದಿರುವುದೇ ಕಾರಣ’ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT