ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ: 23 ಅಡಿ ಎತ್ತರ ಬೆಳೆದ ಕಬ್ಬು!

ದರಸಗುಪ್ಪೆ ಗ್ರಾಮದ ರೈತ ಶ್ರೀಕಂಠೇಗೌಡ ಅವರ ಜಮೀನಿನಲ್ಲಿ ವಿಸಿಎಫ್– 0517 ತಳಿ
Published : 13 ಆಗಸ್ಟ್ 2024, 6:29 IST
Last Updated : 13 ಆಗಸ್ಟ್ 2024, 6:29 IST
ಫಾಲೋ ಮಾಡಿ
Comments

ಶ್ರೀರಂಗಪಟ್ಟಣ: ತಾಲ್ಲೂಕಿನ ದರಸಗುಪ್ಪೆ ಗ್ರಾಮದ ರೈತ ಶ್ರೀಕಂಠೇಗೌಡ ಅವರ ಜಮೀನಿನಲ್ಲಿ ಬೆಳೆದಿರುವ ಕಬ್ಬು 23 ಅಡಿ ಎತ್ತರ ಬೆಳೆದಿದ್ದು, ಅಚ್ಚರಿ ಮೂಡಿಸಿದೆ.

ಸಿಡಿಎಸ್ ನಾಲಾ ಬಯಲಿನಲ್ಲಿ ಶ್ರೀಕಂಠೇಗೌಡ ಅವರು ಬೆಳೆದಿರುವ ವಿಸಿಎಫ್– 0517 ತಳಿಯ ಕಬ್ಬು ಈ ಪರಿ ಬೆಳೆದು ನಿಂತಿದೆ. ಒಂದು ಜೊಲ್ಲೆ ಕಬ್ಬಿನಲ್ಲಿ 40 ಗಿಣ್ಣುಗಳು ಬಂದಿವೆ. ಒಂದು ಜೊಲ್ಲೆಯನ್ನು 8 ಅಡಿಗೆ ತುಂಡು ಮಾಡಿದರೂ ಐದು ತುಳಿಗಳು ಬೀಳುತ್ತಿವೆ. ತನಿ ಕಬ್ಬು ಇಷ್ಟು ಎತ್ತರ ಬೆಳೆದಿರುವುದು ಕಬ್ಬು ಕಡಿಯುವ ಕೃಷಿ ಕೂಲಿ ಕಾರ್ಮಿಕರನ್ನೂ ಚಕಿತಗೊಳಿಸಿದೆ.

ವಿಸಿಎಫ್‌– 0517 ತಳಿ: ಶ್ರೀಕಂಠೇಗೌಡ ಅವರು ಮಂಡ್ಯದ ವಿಸಿ ಪಾರಂ ಕೃಷಿ ಸಂಶೋಧನಾ ಕೇಂದ್ರದ ಕಬ್ಬು ತಳಿ ವಿಜ್ಞಾನಿ ಡಾ.ಸ್ವಾಮಿಗೌಡ ಅವರು ಸಂಶೋಧನೆ ಮಾಡಿರುವ ವಿಸಿಎಫ್‌– 0517 ತಳಿಯ ಕಬ್ಬು ಬೆಳೆದಿದ್ದು, ಆರಂಭದಲ್ಲಿ ಅಂತರ ಬೆಳೆಯಾಗಿ ಚೆಂಡು ಹೂ ಮತ್ತು ಬದನೆ ಬೆಳೆದಿದ್ದರು. ಆ ಎರಡೂ ಬೆಳೆಗಳು ಮುಗಿದ ಬಳಿಕ ಕಬ್ಬು ಮುರಿ ಮಾಡಿ ಬಿಟ್ಟಿದ್ದರು. ಇದೀಗ ಈ ಕಬ್ಬಿಗೆ ಹನ್ನೆರಡು ತಿಂಗಳು ತುಂಬಿದ್ದು ಕಟಾವು ಕಾರ್ಯ ನಡೆಯುತ್ತಿದೆ.

ಶೇ 70 ಸಾವಯವ ಗೊಬ್ಬರ: ಕಬ್ಬು ಬೆಳೆಗೆ ಶೇ 70ರಷ್ಟು ಸಾವಯವ ಗೊಬ್ಬರ ಮತ್ತು ಶೇ 30ರಷ್ಟು ರಸಗೊಬ್ಬರ ಕೊಡಲಾಗಿದೆ. ನಾಟಿ ಮಾಡಿದ 4 ತಿಂಗಳ ನಂತರ, ಮೊದಲ ಮುರಿ ಸಂದರ್ಭದಲ್ಲಿ ಜನ್ಮಭೂಮಿ ಉಳಿಸಿ ಅಭಿಯಾನದ ಗ್ರೀನ್‌ ಪ್ಲಾನೆಟ್‌ ಸಂಸ್ಥೆಯ ಸಾವಯವ ಗೊಬ್ಬರಗಳಾದ ಪ್ರೋಮ್‌, ಭೂಮಿ ಪವರ್‌, ನೈಟ್ರೋಕಿಂಗ್‌, ಪೊಟಾಷ್‌, ರೂಟ್‌ ಗಾರ್ಡ್‌ ಹೆಸರಿನ ಸಾವಯವ ಗೊಬ್ಬರಗಳನ್ನು ಶ್ರೀಕಂಠೇಗೌಡ ಮೂರು ಹಂತಗಳಲ್ಲಿ ಬಳಸಿದ್ದಾರೆ.

‘ಒಂದೂವರೆ ಎಕರೆ ಜಮೀನಿನಲ್ಲಿ ವಿಸಿಎಫ್‌–0517 ತಳಿಯ ಕಬ್ಬು ಬೆಳೆದಿದ್ದು, ರೂ.35 ಸಾವಿರ ಖರ್ಚಾಗಿದೆ. ಸಮಗ್ರ ಕೃಷಿ ಮತ್ತು ಸಾವಯವ ಕೃಷಿ ಸಲಹೆಗಾರರಾದ ಜಿ.ಪಿ. ಮೂರ್ತಿ ಅವರ ಮಾರ್ಗದರ್ಶನದಲ್ಲಿ 6 ಮೂಟೆ ಯೂರಿಯಾ ರಸಗೊಬ್ಬರ ಮಾತ್ರ ಕೊಟ್ಟಿದ್ದು, ಶೇ 70 ಭಾಗ ಸಾವಯವ ಗೊಬ್ಬರ ಬಳಸಿದ್ದೇನೆ. ಇದೀಗ ಕಬ್ಬಿಗೆ 12 ತಿಂಗಳು ತುಂಬಿದ್ದು, ಕಟಾವು ನಡೆಯುತ್ತಿದೆ. ಪ್ರತಿ ಗುಂಟೆಗೆ ಎರಡು ಟನ್‌ಗೂ ಹೆಚ್ಚು ಇಳುವರಿ ಬರುತ್ತಿದೆ. ಒಂದೂವರೆ ಎಕರೆಗೆ 140 ಟನ್‌ ಇಳುವರಿ ಸಿಗುವ ನಿರೀಕ್ಷೆ ಇದೆ. ನನ್ನ 40 ವರ್ಷಗಳ ಕೃಷಿ ಅನುಭವದಲ್ಲಿ ಇದು ಗರಿಷ್ಠ ಇಳುವರಿ. ಖರ್ಚು ಕಳೆದು ರೂ.4 ಲಕ್ಷ ಆದಾಯ ಸಿಗುವ ವಿಶ್ವಾಸವಿದೆ’ ಎಂದು ರೈತ ಶ್ರೀಕಂಠೇಗೌಡ ಸಂತಸ ವ್ಯಕ್ತಪಡಿಸುತ್ತಾರೆ.

‘ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಬೆಳೆಗಳ ಬುಡಕ್ಕೆ ಹಾಕುವ ಮತ್ತು ಎಲೆಗಳಿಗೆ ಸಿಂಪಡಿಸುವ ಸಾವಯವ ಗೊಬ್ಬರಗಳು ಕಡಿಮೆ ಬೆಲೆಗೆ ಸಿಗಲಿದ್ದು, ರೈತರು ಅಂತಹ ಗೊಬ್ಬರಗಳನ್ನು ಬಳಸಬೇಕು. ದರಸಗುಪ್ಪೆ ಶ್ರೀಕಂಠೇಗೌಡ ಅವರು ಈ ಪ್ರಯತ್ನದಲ್ಲಿ ಸಫಲರಾಗಿದ್ದು, ಇತರ ರೈತರೂ ಇವರನ್ನು ಅನುಸರಿಸಬೇಕು’ ಎಂಬುದು ಸಾವಯವ ಕೃಷಿ ಸಲಹೆಗಾರ ಜಿ.ಪಿ. ಮೂರ್ತಿ ಅವರು ಸಲಹೆ ನೀಡಿದರು.

ಶ್ರೀಕಂಠೇಗೌಡ ಅವರ ಸಂಪರ್ಕಕ್ಕೆ ಮೊ: 7760666855.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT