ಭಾನುವಾರ, ಮೇ 22, 2022
25 °C
ಲಕ್ಷಾಂತರ ರೂಪಾಯಿ ಬಾಡಿಗೆ ಬಂದರೂ ಪುನಶ್ಚೇತನಗೊಳ್ಳದ ಕೆವಿಎಸ್‌ ಕನಸಿನ ರೈತ ಸಭಾಂಗಣ

ಪಾಳು ಕೊಂಪೆಯಂತಾಗಿದೆ ಮಂಡ್ಯದ ರೈತರ ಸೊಸೈಟಿ ಆರ್‌ಎಪಿಸಿಎಂಎಸ್

ಎಂ.ಎಂ.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಏಷ್ಯಾ ಖಂಡದಲ್ಲೇ ಅತೀ ದೊಡ್ಡ ರೈತರ ಸೊಸೈಟಿ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಆರ್‌ಎಪಿಸಿಎಂಎಸ್ (ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ) ಆವರಣವೀಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಆವರಣದಲ್ಲಿ ನಿರ್ಮಾಣಗೊಂಡಿದ್ದ ಐತಿಹಾಸಿಕ ರೈತ ಸಭಾಂಗಣ ಪಾಳು ಕೊಂಪೆಯಂತಾಗಿದೆ.

ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಕನಸಿನ ಕೂಸಾಗಿದ್ದ ಆರ್‌ಎಪಿಸಿಎಂಸಿ ರೈತರ ಪವಿತ್ರ ತಾಣವಾಗಿತ್ತು. ರೈತರು ಧರಿಸುವ ಪಟಾಪಟಿ ಚಡ್ಡಿಯಿಂದ ಕೃಷಿ ಚಟುವಟಿಕೆಗೆ ಬೇಕಾದ ಯಂತ್ರೋಪಕರಣ, ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಮುಂತಾದ ಸರ್ವ ಸೇವೆಯೂ ಸೊಸೈಟಿಯಲ್ಲಿ ದೊರೆಯುತ್ತಿತ್ತು. ರೈತರು ಬೆಳೆದ ಉತ್ಪನ್ನಗಳ ಮಾರಾಟ, ಸಂಗ್ರಹ ವ್ಯವಸ್ಥೆಯನ್ನೂ ಸೊಸೈಟಿ ಆವರಣದಲ್ಲಿ ಕಲ್ಪಿಸಲಾಗಿತ್ತು.

ನಾಟಕಕಾರ, ನಿರ್ದೇಶಕ, ಸಾಹಿತಿಯೂ ಆಗಿದ್ದ ಶಂಕರಗೌಡರು ಕೃಷಿಯ ಜೊತೆಗೆ ಸಂಸ್ಕೃತಿಯನ್ನೂ ಬೆಸೆದಿದ್ದರು, ಸುಸಜ್ಜಿತ ರೈತ ಸಭಾಂಗಣವನ್ನೂ ನಿರ್ಮಿಸಿದ್ದರು. 500 ಸೀಟ್‌ ಸಾಮರ್ಥ್ಯ ಹೊಂದಿದ್ದ ಸಭಾಂಗಣ ಮಂಡ್ಯ ಜಿಲ್ಲೆಯ ಐಷಾರಾಮಿ ಭವನ ಎಂಬ ಖ್ಯಾತಿ ಪಡೆದಿತ್ತು. ಪ್ರಖ್ಯಾತ ಹೋರಾಟಗಾರರು, ಕಲಾವಿದರು, ಸಾಹಿತಿಗಳು ಈ ಸಭಾಂಗಣಕ್ಕೆ ಬಂದು ಹೋಗಿರುವುದು ಇತಿಹಾಸವಾಗಿದೆ.

ಒಂದೇ ಸೂರಿನಡಿ ರೈತನ ಸಕಲ ಚಟುವಟಿಕೆಯನ್ನು ಒಂದೆಡೆ ತರಲಾಗಿತ್ತು. ಹೀಗಾಗಿ ಇದು ಏಷ್ಯಾದ ದೊಡ್ಡ ರೈತ ಸೊಸೈಟಿ ಎಂದೇ ಗುರುತಿಸಿಕೊಂಡಿತ್ತು. ರೈತರೇ ಷೇರುದಾರರಾಗಿದ್ದ ಸಂಸ್ಥೆಯು ರೈತರಿಂದ ರೈತರಿಗಾಗಿ ರೂಪಗೊಂಡಿತ್ತು.

70 ವರ್ಷಗಳ ಹಿಂದೆ ರೂಪಗೊಂಡ ಸೊಸೈಟಿ ನಾಲ್ಕೈದು ದಶಕಗಳವರೆಗೆ ರೈತರ ಜೀವನಾಡಿಯಾಗಿತ್ತು. ಆದರೆ ಈಚೆಗೆ ಸ್ಥಳೀಯ ಜನಪ್ರತಿನಿಧಿಗಳು,  ಅಧಿಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಅವನತಿಯ ಹಾದಿ ಹಿಡಿಯಿತು. ಈಗ ನೆಪಕ್ಕಷ್ಟೇ ಅಸ್ಥಿತ್ವದಲ್ಲಿರುವ ಆರ್‌ಎಪಿಸಿಎಂಎಸ್‌ ಕೆ.ವಿ.ಶಂಕರಗೌಡರ ಕನಸುಗಳನ್ನು ಮಣ್ಣುಪಾಲು ಮಾಡಿದೆ.

ಈಗ ಆರ್‌ಎಪಿಸಿಎಂಸ್‌ ಆವರಣ ಪ್ರವೇಶಿಸಿದರೆ ಹಾಳು ಹಂಪಿಯ ದರ್ಶನವಾಗುತ್ತದೆ. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳು ಸೊಸೈಟಿ ಆವರಣದಲ್ಲಿ ಆಶ್ರಯ ಪಡೆಯುತ್ತವೆ, ಕಳ್ಳಕಾರಕ ಭಯ ಸದಾ ಕಾಡುತ್ತದೆ. ಆವರಣದಲ್ಲಿ ಹೇಳುವವರು ಕೇಳುವವರಿಲ್ಲ, ಕಾಂಪೌಂಡ್‌ ಇಲ್ಲ, ಭದ್ರತಾ ಸಿಬ್ಬಂದಿಯೂ ಇಲ್ಲ.

ಆವರಣದಲ್ಲಿ ಹತ್ತಾರು ಗೋದಾಮುಗಳಿವೆ, ಬಹುತೇಕ ಗೋದಾಮುಗಳನ್ನು ಖಾಸಗಿ ಕಂಪನಿಗಳಿಗೆ ಬಾಡಿಗೆ ನೀಡಲಾಗಿದೆ. ಹಲವು ಗೋಡನ್‌ಗಳಲ್ಲಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಲು ಬಾಡಿಗೆ ನಿಡಲಾಗಿದೆ. ಬಹುತೇಕ ಕಟ್ಟಡಗಳು ಖಾಲಿ ಬಿದ್ದಿದ್ದು ಭೂತಬಂಗಲೆಯಂತಿವೆ. ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು ಹಾವು,ಹಲ್ಲಿಗಳ ವಾಸಸ್ಥಳವಾಗಿದೆ.

‘ರೈತರ ಸೊಸೈಟಿಯು ಈಗ ಕಳ್ಳಕಾಕರ ತಾಣವಾಗಿದೆ. ನಾನೂ ಒಬ್ಬ ಷೇರುದಾರನಾಗಿದ್ದು ಅಲ್ಲಿ ಏನು ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ’ ಎಂದು ರೈತ ಮುಖಂಡ ಬಸವರಾಜು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಬದಿ, ನಗರದ ಹೃದಯ ಭಾಗದಲ್ಲಿರುವ ಸೊಸೈಟಿಗೆ ಬಡತನವೇನೂ ಇಲ್ಲ. ಹತ್ತಾರು ವಾಣಿಜ್ಯ ಮಳಿಗೆಗಳಿದ್ದು ಲಕ್ಷಾಂತರ ರೂಪಾಯಿ ಬಾಡಿಗೆ ಬರುತ್ತದೆ. ಮಲಬಾರ್‌ ಗೋಲ್ಡ್‌, ಮಹಾರಾಜ ಗ್ರ್ಯಾಂಡ್‌ ಹೋಟೆಲ್‌, ಪೆಟ್ರೋಲ್‌ ಬಂಕ್‌ ಸೇರಿದಂತೆ ವಾಣಿಜ್ಯ ಮಳಿಗೆಗಳಿಂದ ಬಾಡಿಗೆ ಬರುತ್ತದೆ. ರೈತರ ಸೊಸೈಟಿ ಈಗ ಕೇವಲ ವ್ಯಾಪಾರಿ ತಾಣವಾಗಿದೆ.

ಬಟ್ಟೆ ಅಂಗಡಿಗಳು, ಸಹಕಾರ ಸಂಘಗಳು, ಬುಕ್‌ ಸ್ಟೋರ್‌, ಸಂಘ ಸಂಸ್ಥೆಗಳ ಕಚೇರಿ, ಆಹಾರ ಇಲಾಖೆ ಗೋದಾಮುಗಳಿಂದಲೂ ಬಾಡಿಗೆ ಬರುತ್ತದೆ. ಇಷ್ಟೆಲ್ಲಾ ಹಣ ಎಲ್ಲಿಗೆ ಹೋಗುತ್ತಿದೆ ಎಂದು ರೈತರು ಅನುಮಾನ ವ್ಯಕ್ತಪಡಿಸುತ್ತಾರೆ.

‘ಸೊಸೈಟಿ ಅಭಿವೃದ್ಧಿಗೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತನ್ನ ಗತ ಇತಿಹಾಸವನ್ನು ಮತ್ತೆ ಪಡೆಯಬೇಕಾದರೆ ಸರ್ಕಾರ ಕನಿಷ್ಠ ₹ 2 ಕೋಟಿ ಹಣ ಬಿಡುಗಡೆ ಮಾಡಬೇಕು. ಆ ಮೂಲಕ ಶಂಕರೇಗೌಡರ ಹೆಸರು ಶಾಶ್ವತವಾಗಿ ಉಳಿಯಬೇಕು’ ಎಂದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್‌ ಒತ್ತಾಯಿಸಿದರು.

ಮುರಿದ ಕುರ್ಚಿ, ಕುಸಿತ ಚಾವಣಿ

ಮಂಡ್ಯದ ಅತ್ಯಂತ ಸುಸಜ್ಜಿತ ಭವನವಾಗಿದ ರೈತಸಭಾಂಗಣ ಈಗ ಅವ್ಯವಸ್ಥೆಯ ತಾಣವಾಗಿದೆ. ಕುರ್ಚಿಗಳು ಮುರಿದು ಹೋಗಿವೆ, ಚಾವಣಿ ಕುಸಿದಿದೆ, ಧ್ವನಿ ವರ್ಧಕಗಳಿಲ್ಲ, ದೀಪಗಳಿಲ್ಲ. ಸುತ್ತಲೂ ಗೋಡೆಗೆ ತೂಗು ಹಾಕಲಾಗಿರುವ ಗಣ್ಯರ ಭಾವಚಿತ್ರಗಳು ದೂಳು ತಿನ್ನುತ್ತಿವೆ.

ವೇದಿಕೆ ಹಿಂದಿನ ಗ್ರೀನ್‌ ರೂಂನೊಳಗೆ ಕಾಲಿಡಲು ಸಾಧ್ಯವಿಲ್ಲ, ಶೌಚಾಲಯ ಗಬ್ಬದ್ದು ಹೋಗಿದೆ. ಅಲ್ಲಿ ಮುರಿದ ಕುರ್ಚಿಗಳನ್ನು ಸಂಗ್ರಹಿಸಿಡಲಾಗಿದೆ. ದ.ರಾ.ಬೇಂದ್ರ, ಕುವೆಂಪು ಮುಂತಾದವರು ಬಂದ ಸಭಾಂಗಣ ಈಗ ಅನಾಥವಾಗಿದೆ.

ಬಣ್ಣಗೆಟ್ಟ ಕುವೆಂಪು ಪ್ರತಿಮೆ

ಕುವೆಂಪು ತತ್ವದ ಮಂತ್ರಮಾಂಗಲ್ಯಕ್ಕೆ ರೈತ ಸಭಾಂಗಣ ಪ್ರಮುಖ ವೇದಿಕೆಯಾಗಿತ್ತು. 1995ರಲ್ಲಿ ಸಭಾಂಗಣದ ಮುಂದೆ ಪ್ರತಿಮೆ ಸ್ಥಾಪಿಸಲಾಯಿತು. ಕುವೆಂಪು ಜನ್ಮದಿನ ಬಂದರೆ ವಿವಿಧ ಸಂಘಟನೆ ಸದಸ್ಯರು ಮಾಲಾರ್ಪಣೆ ಮಾಡುತ್ತಾರೆ. ಆದರೆ, ಪ್ರತಿಮೆಯ ಬಣ್ಣ ಹಾಳಾಗಿದ್ದು ಕುವೆಂಪು ಅವರಿಗೆ ಅವಮಾನವಾಗುವಂತಿದೆ. ಕನಿಷ್ಠ ಪ್ರತಿಮೆಯನ್ನಾದರೂ ದುರಸ್ತಿ ಮಾಡಿಸುವ ಕೆಲಸ ಆಗದಿರುವುದು ದುರದೃಷ್ಟಕರ.

***

ಆಡಳಿತ ಮಂಡಳಿ ಇಲ್ಲದ ಕಾರಣ ಪ್ರಮುಖ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ರೈತ ಸಭಾಂಗಣಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು

– ವಿಕ್ರಂ ರಾಜೇ ಅರಸ್‌, ವ್ಯವಸ್ಥಾಪಕ ನಿರ್ದೇಶಕ, ಆರ್‌ಎಪಿಸಿಎಂಎಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು