ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಬರದ ಮಣ್ಣಿಗೆ ಹೇಮೆಯ ನೀರು ತಂದ ಭಗೀರಥ!

ನಾಗಮಂಗಲ ತಾಲ್ಲೂಕಿನ ಅಭಿವೃದ್ಧಿಯ ಹರಿಕಾರ, ಶೂನ್ಯ ಭಾವ ಮೂಡಿಸಿದ ಎಚ್‌.ಟಿ.ಕೃಷ್ಣಪ್ಪ ಅವರ ಸಾವು
Last Updated 19 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಮಂಡ್ಯ: ‘ಪುಣ್ಯಕೋಟಿ’ ಎಂದೇ ಕರೆಸಿಕೊಳ್ಳುತ್ತಿದ್ದ ಸಜ್ಜನ ರಾಜಕಾರಣಿ ಎಚ್‌.ಟಿ.ಕೃಷ್ಣಪ್ಪ ಅವರು ಬರದನಾಡು ನಾಗಮಂಗಲ ತಾಲ್ಲೂಕಿಗೆ ಹೇಮಾವತಿ ನೀರು ತರುವಲ್ಲಿ ಪ್ರಮುಖ ಪಾತ್ರ ವಹಿಸಿ ದ್ದರು. ಮುತ್ಸದ್ಧಿ ರಾಜಕಾರಣಿ ಯೊಬ್ಬರ ಸಾವಿನಿಂದ ನಾಗಮಂಗಲ ತಾಲ್ಲೂಕಿನಲ್ಲಿ ಶೋಕದ ಛಾಯೆ ಆವರಿಸಿದೆ.

ತಾಲ್ಲೂಕು ಬೋರ್ಡ್‌ ಅಧ್ಯಕ್ಷರಾಗಿದ್ದ ಅವರು ಸಂಸ್ಥಾ ಕಾಂಗ್ರೆಸ್‌ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಸಂಸ್ಥಾ ಕಾಂಗ್ರೆಸ್‌ ಪಕ್ಷ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷದೊಂದಿಗೆ ವಿಲೀನಗೊಂಡಾಗ ಕೃಷ್ಣಪ್ಪ ಅವರು ಡಿ.ದೇವರಾಜ ಅರಸು ಅವರ ಜೊತೆ ರಾಜಕೀಯ ಹೆಜ್ಜೆ ಇಟ್ಟರು. ಬರದಿಂದ ಕಂಗೆಟ್ಟಿದ್ದ ನಾಗಮಂಗಲ ತಾಲ್ಲೂಕಿಗೆ ಹೇಮಾವತಿ ನೀರು ತರಬೇಕು ಎಂಬುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಹೇಮೆಯ ನೀರು ತರಲು ಅವರು ಭಗೀರಥ ಪ್ರಯತ್ನ ನಡೆಸಿದ್ದರು.

ಅರಸು ಅವರ ಜೊತೆ ಹೋಗುವ ಮೊದಲು ಅವರ ಜೊತೆಗೊಂದು ಕರಾರು ಮಾಡಿಕೊಂಡಿದ್ದರು. ನಾಗಮಂಗಲ ತಾಲ್ಲೂಕಿಗೆ ಹೇಮಾವತಿ ನೀರು ತರುವ ಯೋಜನೆ ರೂಪಿಸುವ ಒಡಂಬಡಿಕೆಗೆ ಒಪ್ಪಿಸಿದ್ದರು. ದೇವರಾಜ ಅರಸು ನುಡಿದಂತೆ ನಡೆದುಕೊಂಡರು. ಅವರ ಕಾಲದಲ್ಲಿ ನಾಗಮಂಗಲ ತಾಲ್ಲೂಕು ಹೇಮಾವತಿ ಅಚ್ಚುಕಟ್ಟು ಪ್ರದೇಶವಾಗಿ ಸೇರ್ಪಡೆಯಾಯಿತು.

‘ಹೇಮಾವತಿ ನೀರು ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳಿಗೂ ಸಿಗಬೇಕು ಎಂದು ದೇವರಾಜು ಅರಸು ಕೈಗೊಂಡ ಐತಿಹಾಸಿಕ ನಿರ್ಣಯದ ಹಿಂದೆ ಎಚ್‌.ಟಿ.ಕೃಷ್ಣಪ್ಪ ಅವರ ಶ್ರಮ ಇದೆ. ಕೆಲ ಹೋಬಳಿ ಪ್ರದೇಶಗಳು ನೀರಿನ ಹರಿವಿನಿಂದ ಮೇಲ್ಮಟ್ಟದಲ್ಲಿ ಇದ್ದ ಕಾರಣ ಅಲ್ಲಿಗೆ ನೀರು ಕೊಡಲು ತಾಂತ್ರಿಕವಾಗಿ ಸಾಧ್ಯವಾಗಲಿಲ್ಲ. ಅದನ್ನು ಮುಂದಿಟ್ಟುಕೊಂಡು ಕೃಷ್ಣಪ್ಪ ಅವರ ಶ್ರಮವನ್ನು ಅನುಮಾನಿಸಬಾರದು’ ಎಂದು ರೈತಮುಖಂಡ ಕೆ.ಬೋರಯ್ಯ ತಿಳಿಸಿದರು.

ಜನತಾ ಪಕ್ಷಕ್ಕೆ ಸೇರಿದರು: 1985ರ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣಪ್ಪ ಅವರು ರಾಮಕೃಷ್ಣ ಹೆಗಡೆಯವರ ಜೊತೆ ಜನತಾ ಪಕ್ಷ ಸೇರುತ್ತಾರೆ. ಆ ನಿರ್ಧಾರದ ಹಿಂದೆಯೂ ನಾಗಮಂಗಲ ತಾಲ್ಲೂಕಿಗೆ ನೀರಾವರಿ ಯೋಜನೆಗಳ ಜಾರಿಯ ಉದ್ದೇಶವಿತ್ತು. ತಾವು ನಂಬಿದ್ದ ಸಿದ್ಧಾಂತದ ಅನುಗುಣವಾಗಿ ಅವರು ನಡೆದುಕೊಂಡರು. ಅಧಿಕಾರದ ಆಸೆಗೆ ಎಂದೂ ಕೃಷ್ಣಪ್ಪ ರಾಜಕಾರಣ ಮಾಡಲಿಲ್ಲ ಎಂದು ರೈತ ಮುಖಂಡರು ನೆನಪು ಮಾಡಿಕೊಳ್ಳುತ್ತಾರೆ.

ದೇವರಾಜು ಅರಸು ಅವರ ಸಂಪುಟದಲ್ಲಿ ಸಾರಿಗೆ, ರೇಷ್ಮೆ ಸಚಿವರಾಗಿ, ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಅಬಕಾರಿ, ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದರು. ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿದ್ದ ಅವರು ಅತ್ಯಂತ ಸರಳ, ಮುತ್ಸದ್ಧಿ ರಾಜಕಾರಣಿಯಾಗಿದ್ದರು. ಜನರೇ ಹಣ ಹೊಂದಿಸಿ ಅವರನ್ನು ಕಣಕ್ಕಿಳಿಸುತ್ತಿದ್ದರು.

ಕಲ್ಲುಗಣಿಗಾರಿಕೆಗೆ ಕಡಿವಾಣ: ನಾಗಮಂಗಲದಲ್ಲಿ ಗುಣಮಟ್ಟದ ಕಲ್ಲು ಚಪ್ಪಡಿ, ಬೋರ್ಡರ್ಸ್‌ ದೊರೆಯುತ್ತಿತ್ತು. ಹೀಗಾಗಿ ಉದ್ಯಮಿಗಳು ಕಲ್ಲು ಗಣಿಗಾರಿಕೆ ನಡೆಸಲು ತುದಿಗಾಲಮೇಲೆ ನಿಂತಿದ್ದರು. ಆದರೆ ಕೃಷ್ಣಪ್ಪ ಅವರು ಕಲ್ಲು ಗಣಿಗಾರಿಕೆಗೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

‘ಇಂದು ನಾಗಮಂಗಲ ತಾಲ್ಲೂಕಿ ನಲ್ಲಿ ಕಲ್ಲು ಗಣಿಗಳಿಗೆ ಲೆಕ್ಕವಿಲ್ಲ. ಆದರೆ ಕೃಷ್ಣಪ್ಪ ಅವರು ಶಾಸಕರಾಗಿದ್ದಾಗ ಪ್ರಾಕೃತಿಕ ಸಂಪತ್ತು ಕಾಪಾಡಿದ್ದರು’ ಎಂದು ರೈತ ಬಸವರಾಜು ತಿಳಿಸಿದರು.

ರಾಜಕಾರಣ ಮಾತ್ರವಲ್ಲದೇ ಸಾಂಸ್ಕೃತಿಕ, ಸಾಮಾಜಿಕ, ಸಹಕಾರ ರಂಗದಲ್ಲಿ ಅವರು ಕೆಲಸ ಮಾಡಿದ್ದರು. ಹಲವು ನಾಟಕಗಳಿಗೆ ಬಣ್ಣ ಹಚ್ಚಿದ್ದರು. ಕ್ರೀಡಾ ಚಟುವಟಿಕೆಯಲ್ಲೂ ಅವರು ಪಾಲ್ಗೊಳ್ಳುತ್ತಿದ್ದರು.

ನ್ಯಾಯಮೂರ್ತಿಯಾಗುತ್ತಿದ್ದರು...
‘60ರ ದಶಕದಲ್ಲಿ ಎಚ್‌.ಟಿ.ಕೃಷ್ಣಪ್ಪ ವಕೀಲಿ ವೃತ್ತಿ ಆರಂಭಿಸಿದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌, ಸರ್ಕಾರದ ಪ್ಲೀಡರ್‌ ಆಗಿ ಕೆಲಸ ಮಾಡಿದರು. ಕಾನೂನು ಕ್ಷೇತ್ರದಲ್ಲೇ ಮುಂದುವರಿದಿದ್ದರೆ ಅವರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗುತ್ತಿದ್ದರು’ ಎಂದು ಸಾಹಿತಿ ಜಿ.ಟಿ.ವೀರಪ್ಪ ಹೇಳಿದರು.

‘ನಿತ್ಯ ಸಚಿವ ಶಂಕರಗೌಡ ಅವರ ಒತ್ತಾಸೆಯ ಮೇರೆಗೆ ರಾಜಕಾರಣಕ್ಕೆ ಬಂದರು. ತತ್ವ, ಸಿದ್ಧಾಂತದ ರಾಜಕಾರಣಕ್ಕೆ ಅವರು ಮಾದರಿಯಾಗಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT