ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾಧರೇಶ್ವರ ಮಹಾ ರಥೋತ್ಸವ ಸಂಭ್ರಮ

ಆದಿಚುಂಚನಗಿರಿ: ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ
Published 25 ಮಾರ್ಚ್ 2024, 21:55 IST
Last Updated 25 ಮಾರ್ಚ್ 2024, 21:55 IST
ಅಕ್ಷರ ಗಾತ್ರ

ನಾಗಮಂಗಲ: ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಗಿನ ಜಾವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗಂಗಾಧರೇಶ್ವರ ಮಹಾ ರಥೋತ್ಸವವು ಸಂಭ್ರಮದಿಂದ ಜರುಗಿತು.

ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅಡ್ಡಪಲ್ಲಕ್ಕಿಯಲ್ಲಿ ಆಗಮಿಸಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸಾಂಪ್ರದಾಯಿಕ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಸ್ವಾಮೀಜಿ ಅವರನ್ನು ಕುಳ್ಳಿರಿಸಿದ್ದ ಅಲಂಕೃತ ಅಡ್ಡಪಲ್ಲಕ್ಕಿ ಉತ್ಸವವು ರಥದ ಬೀದಿಯಲ್ಲಿ ನೆರೆದಿದ್ದ ಭಕ್ತರ ಜಯಘೋಷದೊಂದಿಗೆ ಮುಂದೆ ಸಾಗುತ್ತಿದ್ದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ಗಂಗಾಧರೇಶ್ವರ ಸ್ವಾಮಿಯ ಮಹಾರಥವನ್ನು ಎಳೆಯುತ್ತಾ ಮುಂದೆ ಸಾಗಿದರು.

ಭಕ್ತರು ಗಂಗಾಧರೇಶ್ವರ ಮತ್ತು ಕಾಲಭೈರವೇಶ್ವರ ಸ್ವಾಮಿ ಸೇರಿದಂತೆ ಕ್ಷೇತ್ರದ ದೇವತೆಗಳಿಗೆ ಜೈಕಾರ ಹಾಕುತ್ತಿದ್ದರು. ದೇವರನ್ನು ಪ್ರಾರ್ಥಿಸಿ ಹರಕೆ ಫಲಿಸುವಂತೆ ಮತ್ತು ಇಷ್ಟಾರ್ಥ ಸಿದ್ಧಿಯಾಗಲಿ ಎಂದು ರಥಕ್ಕೆ ಬಾಳೆಹಣ್ಣು ಮತ್ತು ಜವನವನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಮಹಾರಥದಲ್ಲಿನ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಂಡ ಭಕ್ತರು, ಭಕ್ತಿಯಿಂದ ಕೈ ಮುಗಿಯುತ್ತಿದ್ದ ದೃಶ್ಯ ಕಂಡುಬಂತು. ಗಿರಿಯ ಮೇಲೇರಿ ಕ್ಷೇತ್ರದ ದೀಪಾಲಂಕಾರ ಕಣ್ತುಂಬಿಕೊಂಡರು.

ಜಾತ್ರೆಗಾಗಿ ಆಗಮಿಸಿದ್ದ ಭಕ್ತರು ಭಾನುವಾರ ರಾತ್ರಿ ಜರುಗಿದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದರು. ಮಹಾದ್ವಾರದಲ್ಲಿ ಪೂಜೆ ಸಲ್ಲಿಸಿ ಗಂಧದಕಡ್ಡಿ, ಧೂಪ ಮತ್ತು ಕರ್ಪೂರವನ್ನು ಬೆಳಗಿಸಿ ಕ್ಷೇತ್ರದ ದೇವತೆಗಳ ದರ್ಶನ ಪಡೆದರು. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದ್ದ ಚುಂಚನಗಿರಿಯು ಮದುವಣಗಿತ್ತಿಯಂತೆ ಸಿಂಗಾರಗೊಂಡು ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತಿತ್ತು. ಪಟಾಕಿ, ಸಿಡಿಮದ್ದು ಆಗಸದಲ್ಲಿ ಚಿತ್ತಾರ ಬಿಡಿಸಿತ್ತು.

ದೇವರಿಗೆ ನೈವೇದ್ಯ: ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ರಸ್ತೆ ಬದಿಗಳಲ್ಲಿ ಮತ್ತು ಸ್ಥಳಾವಕಾಶ ಇದ್ದ ಕಡೆ ಮಾಂಸದ ಅಡುಗೆ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಬೆಳಗಿನ ಜಾವದಿಂದಲೇ ನೈವೇದ್ಯ ಇಟ್ಟು, ಭಕ್ತಿಭಾವದಿಂದ ಗಿರಿಯೆಡೆಗೆ ತಿರುಗಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ವಿಶೇಷವಾಗಿತ್ತು‌. ಅಲ್ಲದೇ ಸೋಮವಾರ ಮತ್ತು ಮಂಗಳವಾರವು ಸಹ ಜಾತ್ರೆ ಪ್ರಯುಕ್ತ ಬರುವ ಭಕ್ತರು ಪ್ರತಿ ವರ್ಷದಂತೆ ಹರಿಸೇವೆ ಮಾಡುವುದು ವಿಶೇಷ. 

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಸೋಮವಾರ ಬೆಳಗಿನ ಜಾವ ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವದ ಅಂಗವಾಗಿ ನಿರ್ಮಲಾನಂದನಾಥ ಸ್ವಾಮೀಜಿ ಅಡ್ಡ ಪಲ್ಲಕ್ಕಿ ಉತ್ಸವವು ಭಕ್ತರ ಸಮ್ಮುಖದಲ್ಲಿ ಜರುಗಿತು
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಸೋಮವಾರ ಬೆಳಗಿನ ಜಾವ ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವದ ಅಂಗವಾಗಿ ನಿರ್ಮಲಾನಂದನಾಥ ಸ್ವಾಮೀಜಿ ಅಡ್ಡ ಪಲ್ಲಕ್ಕಿ ಉತ್ಸವವು ಭಕ್ತರ ಸಮ್ಮುಖದಲ್ಲಿ ಜರುಗಿತು
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಸೋಮವಾರ ಬೆಳಗಿನ ಜಾವ ಗಂಗಾಧರೇಶ್ವರ ಸ್ವಾಮಿ ಮಹಾ ರಥೋತ್ಸವ ಜರುಗಿತು
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಸೋಮವಾರ ಬೆಳಗಿನ ಜಾವ ಗಂಗಾಧರೇಶ್ವರ ಸ್ವಾಮಿ ಮಹಾ ರಥೋತ್ಸವ ಜರುಗಿತು

Cut-off box - ಪುಷ್ಕರಣಿಯಲ್ಲಿ ತೆಪ್ಪೋತ್ಸವ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥೋತ್ಸವದ ರಾತ್ರಿ ಕಾಲಭೈರವೇಶ್ವರ ಪುಷ್ಕರಣಿಯಲ್ಲಿ ಭಾನುವಾರ ರಾತ್ರಿ ತೆಪ್ಪೋತ್ಸವವು ಸಂಭ್ರಮದಿಂದ ಜರುಗಿತು. ಸರ್ವಾಲಂಕಾರ ಮಾಡಲಾಗಿದ್ದ ತೆಪ್ಪದಲ್ಲಿ ದಸರೀಘಟ್ಟ ಚೌಡೇಶ್ವರಿ ಉತ್ಸವ ಮೂರ್ತಿ ಮತ್ತು ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿಯನ್ನು ಇರಿಸಲಾಗಿತ್ತು. ನಂತರ ನಿರ್ಮಲಾನಂದನಾಥ ಸ್ವಾಮೀಜಿ ಅವರು ತೆಪ್ಪದಲ್ಲಿ ವೀರಾಜಮಾನರಾಗಿ ಪುಷ್ಕರಣಿಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಮಾಡುವ ಮೂಲಕ ಭಕ್ತರಿಗೆ ದರ್ಶನ ನೀಡಿದರು. ಅಲ್ಲದೇ ಕಾಲಭೈರವೇಶ್ವರ ಸ್ವಾಮಿ ತಿರುಗಣಿ ಉತ್ಸವವು ಜರುಗಿತು. ಭಕ್ತರಿಗೆ 10ಕ್ಕೂ ಹೆಚ್ಚಿನ ಕಡೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಪೋಲಿಸ್ ಇಲಾಖೆಯಿಂದ ಬಿಗಿ ಬಂದೂಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯಲ್ಲಿ ಸೇರಿದ್ದ ಅಂಗಡಿ ಮಳಿಗೆಗಳು ಆಟಿಕೆಗಳು ತಿಂಡಿತಿನಿಸುಗಳ ಮಳಿಗೆಗಳು ಜಾತ್ರೆಯ ಮೆರುಗನ್ನು ಹೆಚ್ಚಿಸಿದ್ದವು. ಜೊತೆಗೆ ಭಾನುವಾರ ರಾತ್ರಿಯೇ ಬಂದಿದ್ದ ಭಕ್ತರ ಮನರಂಜನೆಗಾಗಿ ಕ್ಷೇತ್ರದ ಮೂರು ಕಡೆಗಳಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT