ಸೋಮವಾರ, ಸೆಪ್ಟೆಂಬರ್ 20, 2021
30 °C
ಸ್ವಾತಂತ್ರ್ಯ ಹೋರಾಟದಲ್ಲಿ ಮಂಡ್ಯ ಜಿಲ್ಲೆಯ ಹೆಜ್ಜೆ ಗುರುತು, ಕಿಚ್ಚು ಪ್ರದರ್ಶಿಸಿದ್ದ ಸಕ್ಕರೆ ನಾಡಿನ ಯುವಜನ

ಮದ್ಯದಂಗಡಿ ಸುಟ್ಟು ಹಾಕಿದ್ದ ‘ಫ್ರೆಂಚ್‌ ರಾಕ್ಸ್‌’ ಜನ!

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ:  ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಪುಟಗಳಲ್ಲಿ ಮಂಡ್ಯ ಜಿಲ್ಲೆಯ ಹೆಜ್ಜೆ ಗುರುತುಗಳೂ ಇವೆ. 1942ರಲ್ಲಿ ಗಾಂಧೀಜಿ ಕರೆ ಕೊಟ್ಟಿದ್ದ ‘ಭಾರತ ಬಿಟ್ಟು ತೊಲಗಿ’ ಹೋರಾಟದ ವೇಳೆ ‘ಫ್ರೆಂಚ್‌ ರಾಕ್ಸ್‌’ (ಇಂದಿನ ಪಾಂಡವಪುರ) ಜನರು ನಡೆಸಿದ ಹೋರಾಟದ ಚಿತ್ರಣ ಬೆರಗು ಮೂಡಿಸುತ್ತದೆ.

ಸ್ವಾತಂತ್ರ್ಯ ಹೋರಾಟಕ್ಕೆ ಅಂತಿಮ ಹಂತಕ್ಕೆ ಬರುವ ಹೊತ್ತಿನಲ್ಲಿ ಗಾಂಧೀಜಿ ಕ್ವಿಟ್‌ ಇಂಡಿಯಾ ಚಳವಳಿಗೆ ಕರೆ ಕೊಟ್ಟಿದ್ದರು. ದೇಶದ ಮೂಲೆಮೂಲೆಯಲ್ಲಿ ವಿವಿಧ ರೂಪದಲ್ಲಿ ಜನರು ಹೋರಾಟಕ್ಕೆ ಇಳಿದಿದ್ದರು. ಕುಂತಿ ಬೆಟ್ಟ, ಹಿರೋಡೆ ಕೆರೆಯ ತಟದಲ್ಲಿದ್ದ ಫ್ರೆಂಚ್‌ ರಾಕ್ಸ್‌ ಹಳ್ಳಿಯು ದೊಡ್ಡ ಮಟ್ಟದ ಚಳವಳಿಗೆ ಸಾಕ್ಷಿಯಾಯಿತು. ಅಲ್ಲಿಯ ಜನರು 1942, ಆಗಸ್ಟ್‌ 8ರಂದು ದೊಡ್ಡ ಮಟ್ಟದ ಪಿಕೆಟಿಂಗ್‌ ನಡೆಸಿದ್ದರು.

ಕ್ವಿಟ್‌ ಇಂಡಿಯಾ ಚಳವಳಿ ಭಾಗವಾಗಿ ನಡೆದ ಆ ಪಿಕೆಟಿಂಗ್‌ನಲ್ಲಿ ಹೋರಾಟಗಾರರು ಗ್ರಾಮೀಣ ಭಾಗದ ವಾರದ ಸಂತೆಗಳಲ್ಲಿ ಸುಂಕ ವಿಧಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದರು.

ಫ್ರೆಂಚ್‌ ರಾಕ್ಸ್‌ ಜನ ಮಾತ್ರವಲ್ಲದೇ ಸುತ್ತಮುತ್ತಲಿನ ಕ್ಯಾತನಹಳ್ಳಿ, ಲಕ್ಷ್ಮಿಸಾಗರ, ಹಿರೇಮರಳಿ ಗ್ರಾಮದ ಜನರು ಹೋರಾಟದಲ್ಲಿ ಭಾಗವಹಿಸಿದ್ದರು. ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಹಲವು ತಿಂಗಳುಗಳವರೆಗೆ ಮುಂದುವರಿಯಿತು. ಅಕ್ಟೋಬರ್‌ 15ರಂದು ಫ್ರೆಂಚ್‌ ರಾಕ್ಸ್‌ಗೆ ಬಂದಿದ್ದ ಮದ್ಯವನ್ನು ರಸ್ತೆಗೆ ಚೆಲ್ಲಿ, ಮದ್ಯದ ಅಂಗಡಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪ‍ಡಿಸಲಾಯಿತು. ವೈ.ಸಿ.ಮರಿಯಪ್ಪ ಅವರ ನೇತೃತ್ವದಲ್ಲಿ ಹೋರಾಟ ನಡೆದಿತ್ತು, ಘಟನೆಯ ನಡೆದ ನಂತರ 35 ಮಂದಿಯನ್ನು ಬಂಧಿಸಲಾಗಿತ್ತು.

ಟಿಪ್ಪು ಸುಲ್ತಾನ್‌ಗೆ ಸಹಾಯ ಮಾಡಲು ಫ್ರೆಂಚ್‌ನಿಂದ ಬಂದಿದ್ದ ಸೈನಿಕರು ಕುಂತಿಬೆಟ್ಟದಲ್ಲಿ ಬೀಡು ಬಿಟ್ಟಿದ್ದರು. ಹೀಗಾಗಿ ಆ ಪ್ರದೇಶವನ್ನು ಫ್ರೆಂಚ್‌ ರಾಕ್ಸ್‌ ಎಂದು ಕರೆಯುತ್ತಿದ್ದರು. ಅಲ್ಲಿ ಪಾಂಡವರ ಕುರುಹು ಇದ್ದ ಐತಿಹಾಸಿಕ ಹಿನ್ನೆಲೆಯನ್ನು ಮನಗಂಡು ಆ ಗ್ರಾಮಕ್ಕೆ ಪಾಂಡವಪುರ ಎಂದು ನಾಮಕರಣ ಮಾಡಲಾಯಿತು ಎಂಬುದು ಇತಿಹಾಸ.

ಕರ್ನಾಟಕ ಸರ್ಕಾರ ಪ್ರಕಟಿಸಿರುವ ‘ಮಂಡ್ಯ ಜಿಲ್ಲೆ’ ಗೆಜೆಟಿಯರ್‌ನಲ್ಲಿ ಫ್ರೆಂಚ್‌ರಾಕ್ಸ್‌ನಲ್ಲಿ ನಡೆದ ಹೋರಾಟದ ಹೆಜ್ಜೆ ಗುರುತುಗಳನ್ನು ದಾಖಲು ಮಾಡಲಾಗಿದೆ. ಸ್ವಾತಂತ್ರ್ಯ ಚಳುವಳಿಗೆ ಸಕ್ಕರೆ ಜಿಲ್ಲೆಯ ಕೊಡುಗೆ ಎಂದಾಗ ಸಾಮಾನ್ಯವಾಗಿ ಶಿವಪುರ ಧ್ವಜ ಸತ್ಯಾಗ್ರಹವೇ ಕಣ್ಣ ಮುಂದೆ ಬರುತ್ತದೆ. ಆದಕ್ಕೆ ಹೊರತಾಗಿ ಜಿಲ್ಲೆಯಲ್ಲಿ ಸಾಕಷ್ಟು ಹೋರಾಟಗಳು ನಡೆದಿರುವುದು ಗೆಜೆಟಿಯರ್‌ನಲ್ಲಿ ದಾಖಲಾಗಿದೆ.

ಕ್ವಿಟ್‌ ಇಂಡಿಯಾ ಚಳವಳಿ 1944ರವರೆಗೂ ನಡೆಯಿತು. ಮಂಡ್ಯ ಜಿಲ್ಲೆಯಿಂದ ಮಳವಳ್ಳಿಯ ಎಚ್‌.ಕೆ.ರಾಮಚಂದ್ರಯ್ಯ, ಬಂಧಿಗೌಡ, ಪಿ.ಎನ್‌.ಜವರಪ್ಪಗೌಡ, ಪಿ.ಒ.ಓಬೇಗೌಡ, ಪಿ.ಟಿ.ಕೃಷ್ಣಪ್ಪ, ಅರಕೆರೆಯ ಎಂ.ಪುಟ್ಟೇಗೌಡ, ಎ.ಕೆಂಚಪ್ಪ, ಎ.ಜಿ.ಲಿಂಗಪ್ಪ, ಪಿ.ಚೆನ್ನಪ್ಪ, ಪಿ.ಕೃಷ್ಣಪ್ಪ, ಬಿ.ಕೆ.ಪುಟ್ಟೇಗೌಡ, ಮೇಲುಕೋಟೆಯ ಶ್ರೀನಿವಾಸ ಐಯ್ಯಂಗಾರ್‌, ಎಂ.ಎನ್‌.ಶಿವರಾಮು, ಕುಟ್ಟಿ, ಪು.ತಿ.ಕೃಷ್ಣ ಐಯ್ಯಂಗಾರ್‌, ಸುಬ್ಬಯ್ಯ ಮಂತಾದವರು ಇದ್ದರು. ಇವರಿಗೆ ಹಿರಿಯ ನಾಯಕರಾಗಿದ್ದ ಸಾಹುಕಾರ್‌ ಚೆನ್ನಯ್ಯ, ಎಚ್‌.ಸಿ.ದಾಸಪ್ಪ, ಎಚ್‌.ಕೆ.ವೀರಣ್ಣಗೌಡ ಮುಂತಾದವರು ಮಾರ್ಗದರ್ಶನ ಮಾಡಿದ್ದರು.

‘40ರ ದಶಕದಲ್ಲಿ ಮಂಡ್ಯ ಯುವಜನರ ಹೋರಾಟದ ಕಿಚ್ಚು ತುಸು ಹೆಚ್ಚೇ ಇತ್ತು. ರಾಜ್ಯದ ಯಾವುದೇ ಹೋರಾಟ ಮಂಡ್ಯಕ್ಕೆ ಬಂದರೂ ಅದು ಮತ್ತಷ್ಟು ತೀವ್ರಗೊಳ್ಳುತ್ತಿತ್ತು. ಆದರೆ ಅಂದಿನ ಹೋರಾಟದ ಕಿಚ್ಚು ಇಂದಿನ ಯುವಜನರಲ್ಲಿ ಕಾಣುತ್ತಿಲ್ಲ’ ಎಂದು ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು ತಿಳಿಸಿದರು.

********

ಚಳವಳಿಗೆ ಶಕ್ತಿ ತುಂಬಿದ್ದ ಮಂಡ್ಯ

ಸ್ವಾತಂತ್ರ್ಯ ನಂತರವೂ ಮಂಡ್ಯ ಜಿಲ್ಲೆಯ ಹೋರಾಟದ ಕಿಚ್ಚು ಕಡಿಮೆಯಾಗಿರಲಿಲ್ಲ. ಮೈಸೂರು ಸಂಸ್ಥಾನವು ಭಾರತ ಒಕ್ಕೂಟದಲ್ಲಿ ಸೇರಬೇಕು ಎಂಬ ಒತ್ತಾಯದೊಂದಿಗೆ ನಡೆದ ‘ಮೈಸೂರು ಚಲೋ ಚಳವಳಿ’ಗೆ ಮಂಡ್ಯ ಶಕ್ತಿ ತುಂಬಿತ್ತು.

ಕೆ.ಸಿ.ರೆಡ್ಡಿ ಅವರ ನೇತೃತ್ವದಲ್ಲಿ 1947, ಸೆಪ್ಟೆಂಬರ್‌ 11ರಂದು ಹೋರಾಟಗಾರರು ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ಹೊರಟಿದ್ದರು. ಚಳವಳಿಗಾರರ ತಂಡ ಮಂಡ್ಯ ತಲುಪುತ್ತಿದ್ದಂತೆ ಹೋರಾಟಕ್ಕೆ ಹೊಸ ಶಕ್ತಿ ಬಂದಿತ್ತು. ಮಂಡ್ಯದ ಸಾವಿರಾರು ಯುವಜನರು ಮೈಸೂರು ಚಲೋ ಹೋರಾಟದ ತಂಡ ಸೇರಿಕೊಂಡರು.

ಆ ವೇಳೆಗಾಗಲೇ ಮಂಡ್ಯ ಸ್ವತಂತ್ರ ಜಿಲ್ಲೆ (1939)ಯಾಗಿದ್ದ ಕಾರಣ ಸ್ವತಂತ್ರದ ಜಾಗೃತಿ ಹೆಚ್ಚಾಗಿತ್ತು. ಜನಸಾಗರದ ಹೋರಾಟಕ್ಕೆ ಮಣಿದ ಮೈಸೂರು ಮಹಾರಾಜರು 1947, ಸೆಪ್ಟೆಂಬರ್‌ 24ರಂದು ಭಾರತ ಒಕ್ಕೂಟ ಸೇರಲು ಒಪ್ಪಿಗೆ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು