ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಮೇಳ: ಯುವಜನರ ಉತ್ತಮ ಪ್ರತಿಕ್ರಿಯೆ

ಸ್ಥಳದಲ್ಲೇ ನೇಮಕಾತಿ ಪತ್ರ ನೀಡಿದ ಕಂಪನಿಗಳು, ವಿದ್ಯಾರ್ಹತೆಗೆ ತಕ್ಕ ಕೆಲಸ ಆಯ್ಕೆ
Last Updated 21 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮಂಡ್ಯ: ವಿದ್ಯಾಭ್ಯಾಸ ಮುಗಿಸಿ ವಿದ್ಯಾರ್ಹತೆಗೆ ತಕ್ಕ ಕೆಲಸ ಹುಡುಕಿ ದುಡಿಮೆಯ ಜೀವನ ಪ್ರಾರಂಭಿಸುವ ನಿರೀಕ್ಷೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ನಗರದ ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಸೂಕ್ತ ವೇದಿಕೆ ಕಲ್ಪಿಸಿತು.

ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳದಲ್ಲಿ ಸಿದ್ಧ ಉಡುಪು ಘಟಕಗಳು, ವಿವಿಧ ಕಂಪನಿಗಳು ಸೇರಿ 45ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಉದ್ಯೋಗಾಂಕ್ಷಿಗಳು ತಮ್ಮಿಷ್ಟದ ಕೆಲಸಗಳ ಬಗ್ಗೆ ವಿವಿಧ ಕಂಪನಿಗಳಿಂದ ಮಾಹಿತಿ ಪಡೆದು ಸೂಕ್ತ ಎನಿಸಿದ ಕಂಪನಿಗಳಿಗೆ ಸ್ವ ವಿವರ ಸಲ್ಲಿಸಿದರು. ಸ್ಥಳದಲ್ಲಿ ಅಭ್ಯರ್ಥಿಗಳ ಸಂದರ್ಶನ ನಡೆಸಿ ಪ್ರತಿಭೆಗೆ ಅನುಗುಣವಾಗಿ ಸ್ಥಳದಲ್ಲೇ ಉದ್ಯೋಗ ನೇಮಕ ಪತ್ರ ನೀಡಲಾಯಿತು.

ಕೆಲವು ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ, ನಂತರ ಕರೆ ಮಾಡಿ ತಿಳಿಸುವುದಾಗಿ ಹೇಳಿ ಕಳುಹಿಸಲಾಗುತ್ತಿತ್ತು. ಇಲ್ಲಿ ಕೆಲಸ ಸಿಗುವುದೋ ಇಲ್ಲವೋ ಎಂಬ ಅನುಮಾನದಿಂದ ಅಭ್ಯರ್ಥಿಗಳು ಮತ್ತೆ ಕೆಲವು ಕಂಪನಿಗಳಿಗೆ ಸ್ವ–ವಿವರ ಸಲ್ಲಿಸುತ್ತಿದ್ದದ್ದು ಸಾಮಾನ್ಯವಾಗಿತ್ತು. ಕೌಟುಂಬಿಕ ಆರ್ಥಿಕ ಸಮಸ್ಯೆಯ ಕಾರಣದಿಂದ ಎಸ್‌ಎಸ್‌ಎಲ್‌ಸಿ, ಡಿಪ್ಲೊಮಾ, ಐಟಿಐ, ಪಿಯುಸಿ ಹಂತದಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಕೆಲಸ ಹುಡುಕುತ್ತಿದ್ದ ಅಭ್ಯರ್ಥಿಗಳು ತಮ್ಮ ಅರ್ಹತೆಗೆ ತಕ್ಕ ಕೆಲಸ ಹುಡುಕಾಟದಲ್ಲಿ ತೊಡಗಿದ್ದರು.

‘ಹೊರಗೆ ಕಂಪನಿಗಳು ಖಾಸಗಿ ಏಜೆಂಟರ ಮೂಲಕ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ನೇರವಾಗಿ ಕೆಲಸ ಕೇಳಿಕೊಂಡು ಹೋದರೆ ಕೆಲಸ ಇಲ್ಲ ಎಂದು ಹೇಳುತ್ತಾರೆ. ಹೀಗಾಗಿ ಇಂತಹ ಉದ್ಯೋಗ ಮೇಳಗಳು ಸಹಾಯಕವಾಗಿವೆ. ಆದರೆ ಸಂದರ್ಶನ ಪಡೆದ ಎಲ್ಲರೂ, ನಂತರ ಕರೆ ಮಾಡಿ ತಿಳಿಸಲಾಗುವುದು ಎಂದೇ ಹೇಳುತ್ತಿದ್ದಾರೆ’ ಎಂದು ಪದವಿ ಮುಗಿಸಿರುವ ಉದ್ಯೋಗಾಕಾಂಕ್ಷಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ‘ಮಂಡ್ಯ ಕೃಷಿ ಆಧಾರಿತ ಜಿಲ್ಲೆಯಾಗಿದ್ದು, ಕಾರ್ಖಾನೆಗಳ ಸಂಖ್ಯೆಯೂ ಕಡಿಮೆ ಇವೆ. ಓದು ಮುಗಿದ ನಂತರ ಕೆಲಸ ಹುಡುಕಿಕೊಂಡು ಬೇರೆಡೆ ಹೋಗುವವರು ತುಂಬಾ ಕಡಿಮೆ ಇದ್ದಾರೆ. ಇಲ್ಲೇ ಉದ್ಯೋಗ ವಾತಾವರಣ ಸೃಷ್ಟಿ ಮಾಡಬೇಕು. ಮೇಳದಲ್ಲಿ 2,500ಕ್ಕೂ ಹೆಚ್ಚಿನ ಉದ್ಯೋಗಗಳು ಇದ್ದು, ಯುವಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಉದ್ಯೋಗ ಬಹುಮುಖ್ಯ ಅವಶ್ಯಕತೆಗಳಲ್ಲಿ ಒಂದು. ಜೀವನ ಅರ್ಥಪೂರ್ಣವಾಗಿ ಕಟ್ಟಿಕೊಂಡು ಆರ್ಥಿಕ ಸ್ವಾವಲಂಬಿ ಆಗಲು ಉದ್ಯೋಗ ಬಹಳ ಅವಶ್ಯಕ. ವಿದ್ಯಾರ್ಹತೆಗೆ ತಕ್ಕಂತ ಕೆಲಸ ಸಿಗದಿದ್ದರೂ ಯಾವುದಾದರೂ ಕೆಲಸ ಸಿಕ್ಕೇ ಸಿಗುತ್ತದೆ. ಕೆಲಸ ಮಾಡುವ ಮನಸ್ಥಿತಿ, ಶ್ರದ್ಧೆ ಇಟ್ಟಿಕೊಂಡು ಮುನ್ನಡೆಯಬೇಕು’ ಎಂದು ಹೇಳಿದರು.

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ ‘ನಿರುದ್ಯೋಗ ಸಮಸ್ಯೆ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಮಾತನಾಡುತ್ತೇನೆ’ ಎಂದರು.

ಉದ್ಯೋಗ ಮೇಳದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಮಾಜಿ ಸೈನಿಕ ಜಿ.ಸುರೇಶ ಮಾತನಾಡಿ ‘ಸೈನ್ಯಕ್ಕೆ ಸೇರಲು ಸಮರ್ಪಕ ಮಾಹಿತಿ, ದೈಹಿಕ ಸಾಮರ್ಥ್ಯ ಪರೀಕ್ಷೆ ಎದುರಿಸುವ ಕಲೆಯ ಕೊರತೆಯಿಂದಾಗಿ ಹೆಚ್ಚು ಮಂದಿ ಸೈನ್ಯಕ್ಕೆ ಆಯ್ಕೆಯಾಗುತ್ತಿಲ್ಲ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಮದ್ದೂರು, ಮಳವಳ್ಳಿ ಭಾಗದ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದೇನೆ. ಈಗಾಗಲೇ 26ಮಂದಿ ಸೈನ್ಯಕ್ಕೆ ಸೇರಿದ್ದಾರೆ. ಉದ್ಯೋಗ ಇಲ್ಲದಿದ್ದರೆ ಕೌಶಲಗಳನ್ನು ಬೆಳೆಸಿಕೊಂಡು ನಾವೇ ಉದ್ಯೋಗಗಳನ್ನು ಸೃಷ್ಠಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ನಗರಸಭೆ ಆಯುಕ್ತ ಲೋಕೇಶ್‌, ಕಾರ್ಮಿಕ ಅಧಿಕಾರಿ ನಾಗೇಂದ್ರ, ನಗರಾಭಿವೃದ್ಧಿ ಕೋಶ ನಿರ್ದೇಶಕ ನರಸಿಂಹಮೂರ್ತಿ, ಉದ್ಯೋಗಾಧಿಕಾರಿ ಶಿವಮೂರ್ತಿ ಇದ್ದರು.

ಧಿಯೋ ಆ್ಯಪ್‌ ಮೂಲಕ ಅರ್ಜಿ

ಉದ್ಯೋಗ ಮೇಳದಲ್ಲಿ ಖಾಸಗಿ ಕಂಪನಿಯೊಂದು ಕೆಲಸಕ್ಕಾಗಿ ರೂಪಿಸಿದ್ದ ಆ್ಯಪ್‌ ಹೆಚ್ಚು ಆಕರ್ಷಿಸಿತು. ಸ್ವಯಂ ಚಾಲಿತವಾಗಿ ಸ್ವವಿವರ ರಚಿಸಿ, ತಕ್ಷಣವೇ ಉದ್ಯೋಗ ಮಾಹಿತಿ ನೀಡುವ ಧ್ಯೇಯದೊಂದಿಗೆ ಧಿಯೋ ಆ್ಯಪ್‌ ರೂಪಿಸಲಾಗಿದೆ.

ಸ್ವ–ವಿವರ ರೂಪಿಸಿದ ನಂತರ ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆಯ್ಕೆ ಮಾಡಿಕೊಂಡ ಕೆಲಸ ಸಿಗದೇ ಹೋದಲ್ಲಿ ಕಂಪನಿ ಸಿಬ್ಬಂದಿಯನ್ನು ಸಂಪರ್ಕಿಸುವ ಅವಕಾಶ ಕಲ್ಪಿಸಲಾಗಿದೆ. ಉದ್ಯೋಗಾವಕಾಶ ಲಭ್ಯವಿರುವ ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಉಚಿತವಾಗಿ ನಡೆಸಲಾಗುತ್ತಿದೆ ಎಂದು ಸಿಬ್ಬಂದಿ ಸುಮಿತ್‌ ಮಾಹಿತಿ ನೀಡಿದರು.

480 ಮಂದಿಗೆ ಉದ್ಯೋಗ

ಉದ್ಯೋಗ ಮೇಳದಲ್ಲಿ 477 ಪುರುಷರು, 402 ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 879 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಇವರಲ್ಲಿ 290 ಪುರುಷರು, 190 ಮಹಿಳೆಯರು ಸೇರಿ ಒಟ್ಟು 480 ಅಭ್ಯರ್ಥಿಗಳಿಗೆ ಉದ್ಯೋಗ ದೊರೆಯಿತು. 110 ಪುರುಷರು, 55 ಮಹಿಳೆಯರು ಸೇರಿ 165 ಅಭ್ಯರ್ಥಿಗಳು ತರಬೇತಿಗೆ ಆಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT