ಶನಿವಾರ, ಮೇ 28, 2022
21 °C
ಶ್ರೀರಂಗಪಟ್ಟಣ

‘ಜಾಮಿಯಾ ಮಸೀದಿ ಒಡೆದು...' ಹೇಳಿಕೆ: ಕಾಳಿ ಮಠದ ಋಷಿ ಕುಮಾರ ಸ್ವಾಮೀಜಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ಐತಿಹಾಸಿಕ ಜಾಮಿಯಾ ಮಸೀದಿ ಒಡೆದು ಹನುಮ ಮಂದಿರ ನಿರ್ಮಿಸಬೇಕು’ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಕಾಳಿ ಮಠದ ಋಷಿಕುಮಾರ ಸ್ವಾಮೀಜಿಯನ್ನು ಮಂಗಳವಾರ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಾಳಿ ಮಠದಲ್ಲಿದ್ದ ಸ್ವಾಮೀಜಿಯನ್ನು ಮಂಗಳವಾರ ನಸುಕಿನಲ್ಲಿ ಬಂಧಿಸಿ ಶ್ರೀರಂಗಪಟ್ಟಣಕ್ಕೆ ಕರೆತರಲಾಗಿದೆ. ಈಚೆಗೆ ಅಪಘಾತದಲ್ಲಿ ಮೃತಪಟ್ಟ ಬಾಲಕಿ ಸಮನ್ವಿ ನಾಯ್ಡ ಅಪರ ಕರ್ಮ ನರವೇರಿಸಲು ಜ.16ರಂದು ಋಷಿಕುಮಾರ ಸ್ವಾಮೀಜಿ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಗೆ ಭೇಟಿ ನೀಡಿದ್ದರು. ಕಾರ್ಯ ನೆರವೇರಿಸಿದ ನಂತರ ಅವರು ಜಾಮಿಯಾ ಮಸೀದಿಯ ಮುಂದೆ ನಿಂತು ವಿಡಿಯೊ ಮಾಡಿದ್ದರು.

‘ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದಂತೆಯೇ ಈ ಮಸೀದಿಯನ್ನೂ ಒಡೆದು ಹನಮಂತನ ದೇವಾಲಯ ನಿರ್ಮಿಸಬೇಕು. ಅಲ್ಲಿ ರಾಮಮಂದಿರ, ಇಲ್ಲಿ ಹನುಮ ಮಂದಿರ ನಿರ್ಮಾಣಗೊಳ್ಳಬೇಕು. ಈ ಕಾರ್ಯ ಪೂರ್ಣಗೊಳಿಸಲು ಎಲ್ಲಾ ಹಿಂದೂ ಸಂಘಟನೆಗಳು ಒಂದಾಗಬೇಕು’ ಎಂದು ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು.

ಜಾಮಿಯಾ ಮಸೀದಿಯು ‌ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ಸುಪರ್ದಿಯಲ್ಲಿದೆ. ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ವಿಡಿಯೊ ಹರಿದಾಡುತ್ತಿರುವುದನ್ನು ಗಮನಿಸಿದ ಇಲಾಖೆ ಸಿಬ್ಬಂದಿ ಯತಿರಾಜ್‌ ಸೋಮವಾರ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಚಿಕ್ಕಮಗಳೂರಿಗೆ ತೆರಳಿದ್ದ ಪೊಲೀಸರು ಮಂಗಳವಾರ ನಸುಕಿನ 4 ಗಂಟೆಯ ವೇಳೆಯಲ್ಲಿ ಬಂಧಿಸಿ ಕರೆತಂದಿದ್ದಾರೆ.

ಜಾಮೀನು ಅರ್ಜಿ ಸಲ್ಲಿಕೆ: ಸ್ವಾಮೀಜಿ ಬಿಡುಗಡೆ ಕೋರಿ ವಕೀಲ ಬಾಲರಾಜ್‌ ಮಂಗಳವಾರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು. ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ ಕೋರ್ಟ್‌ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು