ಶನಿವಾರ, ಏಪ್ರಿಲ್ 1, 2023
31 °C

ಸುಮಲತಾ ರಾಜ್ಯ ರಾಜಕಾರಣಕ್ಕೆ ಬರಲಿ: ಬೆಂಬಲಿಗರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಸಂಸದೆ ಸುಮಲತಾ ಅಂಬರೀಷ್ ಅವರು ರಾಜ್ಯ ರಾಜಕಾರಣಕ್ಕೆ ಬರಬೇಕು. ಈ ಸಂಬಂಧ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದಿಂದಲೂ ಸ್ಪರ್ಧಿಸಿದರೂ ಸುಮಲತಾ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಅವರ ಬೆಂಬಲಿಗರು ಮಂಗಳವಾರ ನಿರ್ಣಯ ಕೈಗೊಂಡರು.

ಕೆ.ವಿ.ಶಂಕರಗೌಡ ಭವನದಲ್ಲಿ ಅವರ ಹಿತೈಷಿಗಳು, ಬೆಂಬಲಿಗರು ಸಭೆ ನಡೆಸಿದರು. ಸಂಸದರು ಯಾವುದಾದರೂ ಒಂದು ರಾಜಕೀಯ ಪಕ್ಷದಲ್ಲಿ ಗುರಿತಿಸಿಕೊಳ್ಳಲಿ, ಆ ಮೂಲಕ ಮುಂದಿನ ರಾಜಕೀಯ ನಡೆಯನ್ನು ಸ್ಪಷ್ಟಪಡಿಸಲಿ ಎಂಬ ಕೂಗು ಕೇಳಿ ಬಂತು. ಅವರು ಯಾವುದೇ ಪಕ್ಷಕ್ಕೆ ಸೇರಿದರೂ ಬೆಂಬಲಿಗರೆಲ್ಲರೂ ಅವರ ಜೊತೆ ನಿಲ್ಲುವ ನಿರ್ಧಾರ ಕೈಗೊಂಡರು.

ಈ ಸಂದರ್ಭದಲ್ಲಿ ಯುವ ಮುಖಂಡ ಹನಕೆರೆ ಶಶಿ ಮಾತನಾಡಿ ‘ಜಿಲ್ಲೆಯ ಜನರು ಸಂಸದೆ ಸುಮಲತಾ ಅವರು ರಾಜ್ಯ ರಾಜಕಾರಣಕ್ಕೆ ಬರಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅವರ ಅಭಿಪ್ರಾಯದಂತೆ ಮಂಡ್ಯ ವಿಧಾನ ಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂಬುದು ನಮ್ಮ ಆಶಯವಾಗಿದೆ. ಅಂಬರೀಷ್‌ ಅವರು ಕೂಡ ಇಲ್ಲಿಂದಲೇ ಜನಮನ್ನಣೆಗಳಿಸಿದ್ದರು’ ಎಂದರು.

‘ಅಂಬರೀಷ್‌ ಅವರು ಮಂಡ್ಯ ಅಭಿವೃದ್ಧಿಯ ಬಗ್ಗೆ ಅಪಾರ ಕನಸುಗಳನ್ನು ಇಟ್ಟುಕೊಂಡಿದ್ದರು. ಅವರ ಆಶಯದಂತೆ ಮಂಡ್ಯ ನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಅವಶ್ಯಕತೆ ಇದೆ. ಹೀಗಾಗಿ ಸುಮಲತಾ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಬೇಲೂರು ಸೋಮಶೇಖರ್ ಮಾತನಾಡಿ ‘ಸಂಸದೆ ಸುಮಲತಾ ಅಂಬರೀಷ್‌ ಅವರ ಮುಂದಿನ ದಿನಗಳಲ್ಲಿ ರಾಜಕೀಯ ನಡೆ ಹೇಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಸೇರ್ಪಡೆಗೆ ಸೇರಿಕೊಳ್ಳುವುದರ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಭೆಯ ಅಂತಿಮ ನಿರ್ಧಾರವನ್ನು ಸಂಸದರಿಗೆ ತಿಳಿಸಿ ಅವರ ನಿರ್ಣಯಕ್ಕೆ ಬಿಡಲಾಗುವುದು’ ಎಂದರು.

ಶಾಸಕರ ವಿರುದ್ಧ ಆಕ್ರೋಶ: ಶಾಸಕ ಸಿ.ಎಸ್.ಪುಟ್ಟರಾಜು ಸಂಸದೆ ಸುಮಲತಾ ಅವರ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಸಭೆಯಲ್ಲಿ ಆಕ್ರೋಶ ವ್ಯಕ್ತಪವಾಯಿತು. ಅವರ ವಿರುದ್ಧ ಪ್ರತಿಭಟನೆ ಮಾಡುವ ನಿರ್ಧಾರವನ್ನೂ ಇದೇ ಸಂದರ್ಭದಲ್ಲಿ ಕೈಗೊಳ್ಳಲಾಯಿತು.

ಸಂಸದರು ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತುತ್ತಿದ್ದಾರೆ. ರಾಜ್ಯದಲ್ಲೇ ಅತೀ ಹೆಚ್ಚು ದಿಶಾ ಸಮಿತಿ ಸಭೆ ನಡೆಸಿ ದಾಖಲೆ ಮಾಡಿದ್ದಾರೆ. ಅವರ ಕಾರ್ಯವೈಖರಿ ಕಂಡು ಜೆಡಿಎಸ್‌ ಶಾಸಕರು ಕಂಗಾಲಾಗಿದ್ದಾರೆ. ಹೀಗಾಗಿ ಶಾಸಕ ಸಿ.ಎಸ್‌.ಪುಟ್ಟರಾಜು ಏಕವಚನದಲ್ಲಿ ಮಾತನಾಡುತ್ತಿದ್ದಾರೆ, ಜನರು ಇದನ್ನು ಸಹಿಸುವುದಿಲ್ಲ ಎಂದು ಬೆಂಬಲಿಗರು ತಿಳಿಸಿದರು.

ಸಭೆಯಲ್ಲಿ ಬೆಂಬಲಿಗರ ವಿವೇಕಾನಂದ, ಲಿಂಗರಾಜು, ಆನಂದ್, ಎಲ್‌.ಸಿ.ಮಂಜುನಾಥ್, ಸಾತನೂರು ಮಹೇಶ್‌, ಮದ್ದೂರು ನಾಗೇಶ್, ಕೆ.ಟಿ.ಮಧು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು