ಅಧಿಕಾರಕ್ಕೆ ಬಂದ ದಿನವೇ 5 ಕಾರ್ಯಕ್ರಮ ಜಾರಿ: ಸಿದ್ದರಾಮಯ್ಯ ಘೋಷಣೆ

ಮಂಡ್ಯ: ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ 10 ಕೆ.ಜಿ ಅಕ್ಕಿ ವಿತರಣೆ, 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿಯರಿಗೆ ₹ 2 ಸಾವಿರ ವಿತರಣೆ ಸೇರಿದಂತೆ 5 ಕಾರ್ಯಕ್ರಮಗಳ ಜಾರಿಗೆ ಆದೇಶ ಹೊರಡಿಸಲಾಗುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದರು.
ಮಂಡ್ಯ ವಿವಿ ಆವರಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ನೋಡುತ್ತಿದ್ದಂತೆ ಬಿಜೆಪಿ, ಜೆಡಿಎಸ್ ಮುಖಂಡರಿಗೆ ತಳಮಳ ಆರಂಭವಾಗಿದೆ. ಅವರಿಗೆ ಈಗಾಗಲೇ ಸೋಲಿನ ಭಯ ಸೃಷ್ಟಿಯಾಗಿದೆ. ಹಣ ಎಲ್ಲಿಂದ ತರುತ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನಾವು 7 ಕೆ.ಜಿ ಅಕ್ಕಿ ನೀಡುವ ಭರವಸೆ ನೀಡಿದ್ದಾಗಲೂ ಇದೇ ರೀತಿ ಪ್ರಶ್ನೆ ಮಾಡಿದ್ದರು. ಬೇಡಿಕೆ ಈಡೇರಿಸುವುದು ನಮ್ಮ ಬದ್ಧತೆಯಾಗಿದೆ’ ಎಂದರು.
‘ಜನರಿಗೆ ನಾವು ಟೋಪಿ ಹಾಕುವುದಿಲ್ಲ, ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಮಾತು ಉಳಿಸಿಕೊಳ್ಳಲು ಆಗದಿದ್ದರೆ ರಾಜಕೀಯ ಸನ್ಯಾಸತ್ವ ಪಡೆಯುತ್ತೇವೆ. ಬಸವಾದಿ ಶರಣರು ನೀಡಿರುವ ತತ್ವಗಳ ಆಧಾರದ ಮೇಲೆ ನಾವು ನಡೆಯುತ್ತಿದ್ದೇವೆ. ಕಾಯಕ ಹಾಗೂ ದಾಸೋಹ ನಮ್ಮ ತತ್ವವಾಗಿದೆ. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆಯಾಗಿದೆ. ಸರ್ವರಿಗೂ ಸಮಾನ ಹಕ್ಕು ನೀಡಿರುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದರು.
‘ಉಚಿತವಾಗಿ ಅಕ್ಕಿ ನೀಡುತ್ತಿರುವುದನ್ನು ಹಲವರು ಪ್ರಶ್ನಿಸಿದ್ದರು. ಬಿಜೆಪಿಯಿಂದ ಗೆದ್ದಿದ್ದ ದಿ.ಗುರುಪಾದಪ್ಪ ನಾಗಮಾರಪಲ್ಲಿ ಅವರು ವಿಧಾನಸಭೆಯಲ್ಲಿ, ಉಚಿತವಾಗಿ ಅಕ್ಕಿ ನೀಡುತ್ತಿರುವ ಕಾರಣ ಜನರು ಕೆಲಸಕ್ಕೆ ಬರುತ್ತಿಲ್ಲ, ಸೋಮಾರಿಯಾಗುತ್ತಿದ್ದಾರೆ ಎಂದು ಹೇಳಿದ್ದರು. ಆಗ ನಾನು ಅವರಿಗೆ, ಬಡವರು ಇಷ್ಟು ದಿನ ಕೆಲಸ ಮಾಡಿ ಅವರ ಬೆನ್ನು ಬಾಗಿದೆ, ಈಗಲಾದರೂ ಅವರು ವಿಶ್ರಾಂತಿ ಪಡೆಯಲಿ. ಕೂತು ತಿನ್ನುವವರು ಕೆಲಸ ಮಾಡಲಿ ಬಿಡಿ ಎಂದು ಉತ್ತರ ನೀಡಿದ್ದೆ’ ಎಂದರು.
‘ಮೈಷುಗರ್ ಕಾರ್ಖಾನೆ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ಸರ್ಕಾರಗಳು ರೈತರಿಗೆ ಮೋಸ ಮಾಡಿವೆ. ನಮ್ಮ ಕಾಲದಲ್ಲಿ ಕಾರ್ಖಾನೆ ನಡೆಸಿದ್ದೆವು, ಕುಮಾರಸ್ವಾಮಿ ಕಾಲದಲ್ಲಿ ಕಾರ್ಖಾನೆ ನಿಂತು ಹೋಯಿತು. ಬಿಜೆಪಿಯವರು ಕಾರ್ಖಾನೆ ಮಾರಲು ನಿಂತಿದ್ದರು. ಸಚಿವ ಮುರುಗೇಶ ನಿರಾಣಿ ಖರೀದಿ ಮಾಡಲು ಕಾಯುತ್ತಿದ್ದ. ಆಗ ರೈತರು ನಮ್ಮ ಬಳಿ ಬಂದು ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು ಎಂದು ಮನವಿ ಮಾಡಿದ್ದರು. ನಾನು ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ್ದೆ. ಹೋರಾಟದ ಫಲವಾಗಿ ಸರ್ಕಾರಿ ಸ್ವಾಮ್ಯದಲ್ಲಿ ಉಳಿಯಿತು’ ಎಂದರು.
‘ಈಗ ಕಾರ್ಖಾನೆಯನ್ನು ಆರಂಭಿಸಿದ್ದಾರೆ. ಆದರೆ, ಇಲ್ಲಿಯವರೆಗೂ ಕೇವಲ 90 ಸಾವಿರ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದೆ. ರೈತರು 3.50 ಲಕ್ಷ ಟನ್ ಕಬ್ಬು ಬೆಳೆದಿದ್ದು ಬೇರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ. ಕಾರ್ಖಾನೆ ಪುನಶ್ಚೇತನಕ್ಕೆ ₹ 50 ಕೋಟಿ ಘೋಷಿಸಿದ್ದ ಮುಖ್ಯಮಂತ್ರಿಗಳು ₹ 30 ಕೋಟಿ ಮಾತ್ರ ಬಿಡುಗಡೆ ಮಾಡಿದ್ದಾರೆ. ಉಳಿದ ₹ 20 ಕೋಟಿ ಸಾಲ ಪಡೆಯುವಂತೆ ಹೇಳುತ್ತಿದ್ದಾರೆ. ಈ ಉತ್ತರ ಹೇಳಲು ನೀವು ಏಕೆ ಬೇಕು’ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ‘ರಾಜ್ಯ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿದೆ. ದುರಾಡಳಿತದ ಕಸ, ಕೊಳೆಯನ್ನು ತೊಳೆಯಬೇಕಾಗಿದೆ. ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ಒಡೆದು ಆಳುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತು ಒಗೆಯಬೇಕು’ ಎಂದರು.
‘ಕೋಮುವಾದಿ ಸರ್ಕಾರವನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೆವು. ಆದರೆ ಅವರು ಅಧಿಕಾರ ಉಳಿಸಿಕೊಳ್ಳಲಿಲ್ಲ. ಜಡಿಎಸ್‌ನಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ. ಜೆಡಿಎಸ್‌ಗೆ ನೀಡುವ ಒಂದೊಂದು ವೋಟು ಬಿಜೆಪಿಗೆ ನೀಡಿದಂತಾಗುತ್ತದೆ’ ಎಂದರು.
‘ಮಂಡ್ಯ ಜಿಲ್ಲೆಗೂ ನನಗೂ 40 ವರ್ಷದ ಅವಿನಾಭಾವ ಸಂಬಂಧ ಇದೆ. ಮಂಡ್ಯ, ರಾಮನಗರ, ಕನಕಪುರ ಎಲ್ಲವೂ ಒಂದೇ. ಎಸ್.ಎಂ.ಕೃಷ್ಣ ಅವರ ಕಾಲದಿಂದಲೂ ಮಂಡ್ಯ ಜನರ ಜೊತೆ ಉತ್ತಮ ಬಾಂಧವ್ಯ ಇದೆ. ಈ ಜಿಲ್ಲೆಯ ಜನರು ದೇಶಕ್ಕೆ ಮಾದರಿಯಾಗಿದ್ದಾರೆ. ಈ ಬಾರಿ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದರು.
ಶಾಸಕ ಕೃಷ್ಣಭೈರೇಗೌಡ ಮಾತನಾಡಿ ‘ಲೂಟಿ ಸರ್ಕಾರ ಜನರಿಗೆ ಸಾಕಾಗಿ ಹೋಗಿದ್ದು ಅಭಿವೃದ್ಧಿಯ ಸರ್ಕಾರ ಬೇಕು ಎಂಬ ಅಲೆ ಎದ್ದಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ರೈತರ ಸಾಲ ಮನ್ನಾ ಮಾಡಿದ್ದೇವೆ. ಬಿಜೆಪಿ ಸರ್ಕಾರ ರೈತರ ನಯಾ ಪೈಸೆ ಸಾಲವನ್ನೂ ಮನ್ನಾ ಮಾಡಿಲ್ಲ, ಆದರೆ ಶ್ರೀಮಂತರ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿದೆ’ ಎಂದು ಆರೋಪಿಸಿದರು.
ಸಭೆಯಲ್ಲಿ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಹಿರಿಯ ಮುಖಂಡ ರೆಹಮಾನ್ ಖಾನ್, ಮೇಲ್ಮನೆ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ವಿಧಾನ ಪರಿಷ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ ಮಾದೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ, ಮುಖಂಡರಾದ ಗಣಿಗ ರವಿಕುಮಾರ್ ಗೌಡ, ಕೆ.ಕೆ.ರಾಧಾಕೃಷ್ಣ, ಡಾ.ಎಚ್.ಕೃಷ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ.ಗಂಗಾಧರ್ ಇದ್ದರು.
****
ಎಚ್‌ಡಿಡಿ, ಎಚ್‌ಡಿಕೆ ಮೇಲೆ ಪ್ರೀತಿ
ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಮಾತನಾಡಿ ‘ಎಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಆಜನ್ಮ ಶತ್ರು ಎಂದಿದ್ದಾರೆ. ಆದರೆ, ನಾನು ಅಂತಹ ಯಾವುದೇ ವಂಚನೆ, ಮೋಸ ಮಾಡಿಲ್ಲ. ಈಗಲೂ ವೈಯಕ್ತಿಕವಾಗಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಮೇಲೆ ಪ್ರೀತಿ, ಗೌರವ ಇದೆ’ ಎಂದರು.
‘ದೇವೇಗೌಡರನ್ನು ಎದುರು ಹಾಕಿಕೊಂಡು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಕಳೆದ ಬಾರಿ 7 ಸ್ಥಾನದಲ್ಲಿ ಜೆಡಿಎಸ್ ಗೆದ್ದರೂ ಜಿಲ್ಲೆಗೆ ಜೆಡಿಎಸ್‌ನಿಂದ ಯಾವ ಕೊಡುಗೆಯೂ ಸಿಕ್ಕಿಲ್ಲ’ ಎಂದರು.
****
ಪ್ರಣಾಳಿಕೆ ಸೇರ್ಪಡೆಗೆ ಮನವಿ
ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ ‘ಕೆಆರ್‌ಎಸ್‌ನಿಂದ ಬದುಕು ಕಟ್ಟಿಕೊಂಡಿರುವ ಜಿಲ್ಲೆಯ ರೈತರಿಗೆ ಕೃಷಿ ಬಿಟ್ಟು ಬೇರೆ ಆದಾಯ ಇಲ್ಲ. ಜಿಲ್ಲೆಯಲ್ಲಿ ಕೈಗಾರಿಕೆಗಳು ಬೆಳೆದಿಲ್ಲ, ಉದ್ಯೋಗ ಸೃಸ್ಟಿಯಾಗಿಲ್ಲ. ಮೈಸೂರು– ಬೆಂಗಳೂರು ನಡುವಿನ ಮಂಡ್ಯದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಬೇಕು’ ಎಂದು ಮನವಿ ಮಾಡಿದರು.
‘ರೈತರಿಗೆ ಅನುಕೂಲ ಕಲ್ಪಿಸುವ ಹನಿ ನೀರಾವರಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಬೇಕು’ ಎಂದು ಒತ್ತಾಯಿಸಿದರು.
***
ನಾನು ಕೆಂಪೇಗೌಡರ ಮಗ...
ಭಾವುಕರಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್ ‘ನಾನು ಮಣ್ಣಿನ ಮಗ, ನಾಡಪ್ರಭು ಕೆಂಪೇಗೌಡರ ಮಗ. ನಿಮ್ಮ ಮನೆಯ ಮಗ ಕೆಪಿಸಿಸಿ ಅಧ್ಯಕ್ಷನಾಗಿ ಬಂದಿದ್ದೇನೆ. ನನಗೆ ಶಕ್ತಿ ಕೊಡಿ’ ಎಂದು ಮನವಿ ಮಾಡಿದರು
‘ಕೈಹಿಡಿದು ನಡೆಯೋಣ, ಕೈ ಹಿಡಿದು ಸಾಗೋಣ, ಕೈಕೈ ಹಿಡಿದು ಬೆಳೆಯೋಣ, ಹೆಗಲು ಕೊಟ್ಟ ನಾಡು ಕಟ್ಟೋಣ, ಹಸ್ತ ಎಂದರೆ ಸಮಸ್ತ ಭಾರತ ಎನ್ನೋಣ’ ಎಂಬ ಕವನ ಬರೆದುಕೊಂಡು ಬಂದಿದ್ದ ಡಿಕೆಶಿ ಸಮಾವೇಶದಲ್ಲಿ ವಾಚಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.