ಮಂಡ್ಯ: ‘ಜೆಡಿಎಸ್ ಪಕ್ಷದವರನ್ನು ಮುಠ್ಠಾಳರೆಂದು ಹೇಳಿರುವ ಮಿಸ್ಟರ್ ನರೇಂದ್ರಸ್ವಾಮಿ ಅವರೇ ನಮ್ಮ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರ ಕಾಲು ಹಿಡಿದು ರಾಜಕೀಯ ಪುನರ್ಜನ್ಮ ಪಡೆದದ್ದು ಮರೆತು ಅಸಂವಿಧಾನಿಕ ಪದ ಬಳಕೆ ಮಾಡಿರುವ ನಿಮ್ಮನ್ನು ಮಳವಳ್ಳಿಯ ಪ್ರತಿ ಗ್ರಾಮದಲ್ಲಿಯೂ ಪ್ರಶ್ನೆ ಮಾಡುತ್ತೇವೆ’ ಎಂದು ಜೆಡಿಎಸ್ ಎಸ್‌ಸಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಕೆ.ಅನ್ನದಾನಿ ಎಚ್ಚರಿಕೆ ನೀಡಿದರು.
ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮತ್ತು ಸಾಂವಿಧಾನಿಕ ಹುದ್ದೆ ಅಲಂಕರಿಸುವ ರಾಜ್ಯಪಾಲರ ಬಗ್ಗೆಯೂ ಅಯೋಗ್ಯ, ಮೂರ್ಖರೆಂದು ಹಾದಿ ಬೀದಿಯಲ್ಲಿ ಹೇಳಿರುವ ನಿಮ್ಮಂತಹ ಮುಠ್ಠಾಳನಿಗೆ ಮಳವಳ್ಳಿ ಜನ ಮತ ನೀಡಿ ಕೊರಗುವಂತಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಹರಿಯಾಯ್ದರು.
ಅಧಿಕಾರದಲ್ಲಿರಲು ಅರ್ಹತೆಯಿಲ್ಲ: ಕಳೆದ ವರ್ಷ ಕೆಆರ್‌ಎಸ್ ಜಲಾಶಯ ಭರ್ತಿಯಾಗಲಿಲ್ಲ, ಈ ಬಾರಿ 124 ಅಡಿ ತುಂಬಿ ಅತಿಹೆಚ್ಚು ನೀರು ತಮಿಳುನಾಡಿಗೆ ಹೋಗಿದೆ. ಅವರು ಸಹ ಕಾವೇರಿ ನೀರನ್ನು ಸಮುದ್ರಕ್ಕೆ ಹರಿಸಿದ್ದಾರೆ. ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮಳವಳ್ಳಿಯ ಜನರಿಗೆ ಕುಡಿಯಲು ಮತ್ತು ವ್ಯವಸಾಯಕ್ಕೆ ನೀರಿಲ್ಲದಿರುವುದು ದುರಂತ. ಇದನ್ನು ನೋಡಿಕೊಂಡು ಸುಮ್ಮನಿರುವ ನೀನು ಒಂದ ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ’ ಎಂದು ವಾಗ್ದಾಳಿ ನಡೆಸಿ, ಕೆರೆಕಟ್ಟೆ ತುಂಬಿರದ ಫೋಟೊಗಳನ್ನು ಪ್ರದರ್ಶಿಸಿದರು.
ಬಹಿರಂಗ ಚರ್ಚೆಗೆ ಬನ್ನಿ: ‘ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಳವಳ್ಳಿ ಕ್ಷೇತ್ರಕ್ಕೆ ಏನೆಲ್ಲಾ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ನೀವು ಶಾಸಕನಾಗಿ, ಸಚಿವನಾಗಿ ಏನೆಲ್ಲಾ ಮಾಡಿದ್ದೀರಿ? ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ. ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಹಣ ದುರ್ಬಳಕೆಯಾಗಿದ್ದರೂ ಸಹ ಸ್ವತಃ ಎಸ್‌ಸಿ, ಎಸ್‌ಟಿ. ಆಯೋಗದ ಅಧ್ಯಕ್ಷರಾಗಿರುವ ನೀವು ಒಂದೇ ಒಂದು ಮಾತನ್ನೂ ಆಡಿಲ್ಲ. ಹಾಗಾಗಿ ನಿಮ್ಮನ್ನು ಮುಠ್ಠಾಳರೆಂದು ಏಕೆ ಕರೆಯಬಾರದು, ದಲಿತರನ್ನು ಸಿಎಂ ಮಾಡಿ ಎಂಬ ಮಾತು ಹೇಳಲು ಧೈರ್ಯ ನಿನಗಿಲ್ಲ. ಇನ್ನು ನಿಮ್ಮಿಂದ ದಲಿತರ ಉದ್ಧಾರ ಸಾಧ್ಯವೇ’ ಎಂದು ಪ್ರಶ್ನಿಸಿದರು.
ಮುಖಂಡರಾದ ರವಿ, ಡಿ.ಜಯರಾಂ, ಪುಟ್ಟಬುದ್ಧಿ ಚಿಕ್ಕಮುಲಗೂಡು, ಬೆಳಕವಾಡಿ ಕಾಂತರಾಜು, ಸಾತನೂರು ಜಯರಾಂ, ಸದಾನಂದ್ ಭುವಳ್ಳಿ, ಸಿದ್ದಾಚಾರಿ, ಕಿರಗಾವಲು ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.