ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ನಿವೇಶನಗಳಲ್ಲಿ ಹರಿಯುತ್ತಿದೆ ಕೆಆರ್‌ಎಸ್‌ ನೀರು

ಹಾಳಾದ ನಾಲೆಯ ದುರಸ್ತಿ ಇಲ್ಲ, ಜೀವಜಲ ಪೋಲು, ನಗರಸಭೆ, ನೀರಾವರಿ ನಿಗಮದ ನಿರ್ಲಕ್ಷ್ಯ
Last Updated 25 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ನಗರ ವ್ಯಾಪ್ತಿಯಲ್ಲಿ ಹರಿಯುವ ಕೆಆರ್‌ಎಸ್‌ ನೀರು ನಿವೇಶನ, ರಸ್ತೆ ಸೇರಿ ಖಾಲಿ ಜಾಗಗಳಲ್ಲಿ ಹರಿಯುತ್ತಿದ್ದು ಜೀವಜಲ ಪೋಲಾಗುತ್ತಿದೆ. ಕೃಷಿ, ಕುಡಿಯುವ ಉದ್ದೇಶಕ್ಕೆ ಬಳಕೆಯಾಗಬೇಕಾದ ಕಾವೇರಿ ನೀರು ಎಲ್ಲೆಂದರಲ್ಲಿ ಹರಿದು ವ್ಯರ್ಥವಾಗುತ್ತಿದೆ.

ಕೆಆರ್‌ಎಸ್‌ನಿಂದ ಬರುವ ನೀರು ನಾಲೆಯ ಮೂಲಕ ನಗರ ವ್ಯಾಪ್ತಿಯಲ್ಲೂ ಹರಿಯುತ್ತದೆ. ಮರೀಗೌಡ ಬಡಾವಣೆಯಲ್ಲಿ ನಗರ ಪ್ರವೇಶಿಸಿ ಹೈಸಿಂಗ್‌ ಬೋರ್ಡ್‌ ಕಾಲೊನಿವರೆಗೂ ವಿತರಣಾ ನಾಲೆಯ ಮೂಲಕ ಸಾಗುತ್ತದೆ. ಅನ್ನಪೂರ್ಣೇಶ್ವರಿ ನಗರ, ಚಾಮುಂಡೇಶ್ವರಿ ನಗರ, ಹೊಸಹಳ್ಳಿ, ಹಾಲಹಳ್ಳಿ ಮೂಲಕ ಚೀರನಹಳ್ಳಿ ಪ್ರವೇಶಿಸುತ್ತದೆ.

ನಗರ ವ್ಯಾಪ್ತಿಯಲ್ಲಿ ನಾಲೆ ಸುಸ್ಥಿತಿಯಲ್ಲಿ ಇಲ್ಲದ ಕಾರಣ ನೀರು ಎಲ್ಲೆಂದರಲ್ಲಿ ಹರಿದು ವ್ಯರ್ಥವಾಗುತ್ತದೆ. ಮುಖ್ಯವಾಗಿ ಹೊಸಹಳ್ಳಿ ಪ್ರದೇಶದಲ್ಲಿ ನಾಲೆಗಳು ಬಿರುಕು ಬಿಟ್ಟುದ್ದು ಅಪಾರ ಪ್ರಮಾಣದ ನೀರು ಖಾಲಿ ನಿವೇಶನದಲ್ಲಿ ತುಂಬಿಕೊಳ್ಳುತ್ತಿದೆ. ನಾಲೆ ಪಕ್ಕದಲ್ಲೇ ಇರುವ ನಿವೇಶನ, ಅಂಗಡಿ ಮಳಿಗೆಗಳಿಗೂ ನೀರು ನುಗ್ಗುತ್ತಿದೆ. ವಿವಿಧೆಡೆ ನೀರು ವ್ಯರ್ಥವಾಗುತ್ತಿದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇತ್ತ ಕಡೆ ತಿರುಗಿ ನೋಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಹೊಸಹಳ್ಳಿಯಲ್ಲಿ ಅಪಾರ ಪ್ರಮಾಣ ನೀರು ವ್ಯರ್ಥವಾಗುತ್ತಿದೆ, ನಿವೇಶನ ತುಂಬಿಕೊಂಡು ಪೋಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಕಾವೇರಿ ನೀರಾವರಿ ನಿಗಮದ ನೀರುಗಂಟಿಗಳು ನಾಲೆ ಸುಸ್ಥಿತಿ ಕಾಪಾಡಿಕೊಳ್ಳಬೇಕು. ನಾವು ಒಂದು ದಿನವೂ ನೀರುಗಂಟಿಗಳನ್ನು ನೋಡಿಲ್ಲ’ ಎಂದು ಹೊಸಹಳ್ಳಿಯ ರಮೇಶ್‌ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಾಲೆಯಲ್ಲಿ ತ್ಯಾಜ್ಯ: ಹೊಸಹಳ್ಳಿಯಿಂದ ಮುಂದಿರುವ ಕಾವೇರಿ ನಗರದಲ್ಲಿ ಸಣ್ಣ ಕಾಲುವೆಗಳ ಮೂಲಕ ಕೆಆರ್‌ಎಸ್‌ ನೀರು ಹರಿಯುತ್ತಿದೆ. ಇಲ್ಲೂ ನಾಲೆಗಳು ಹಾಳಾಗಿದ್ದು ನೀರು ಅಕ್ಕಪಕ್ಕದ ಚರಂಡಿ ಸೇರಿ ಹರಿಯುತ್ತಿದೆ. ನಾಲೆ ಯಾವುದು, ಚರಂಡಿ ಯಾವುದು ಎಂಬದೇ ತಿಳಿಯದ ಪರಿಸ್ಥಿತಿ ಇದೆ. ನಗರ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಜೀವ ಜಲ ವ್ಯರ್ಥವಾಗುತ್ತಿರುವ ಕಾರಣ ಕೊನೆ ಭಾಗದವರೆಗೂ ಹರಿಯದೇ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ನಗರ ವ್ಯಾಪ್ತಿಯ ಜನರು ನಾಲೆಯಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ. ತ್ಯಾಜ್ಯದಿಂದಾಗ ನೀರು ಮುಂದೆ ಹರಿಯಲು ಸಾಧ್ಯವಾಗದೇ ಅಕ್ಕಪಕ್ಕಕ್ಕೆ ಸೋರಿ ಹೋಗುತ್ತಿದೆ. ನಾಲೆಗಳೂ ಸುಸ್ಥಿತಿಯಲ್ಲಿ ಇಲ್ಲದ ಕಾರಣ ಅಪಾರ ಪ್ರಮಾಣದ ಜೀವ ಜಲ ವ್ಯರ್ಥವಾಗುತ್ತಿದೆ’ ಎಂದು ಹೌಸಿಂಗ್‌ ಬೋರ್ಡ್‌ನ ಸುರೇಶ್‌ ಹೇಳಿದರು.

ನಾಲೆಗೆ ಕೊಳಚೆ ನೀರು: ನಾಲೆಗಳ ಅಕ್ಕಪಕ್ಕದಲ್ಲಿ ಮನೆ ನಿರ್ಮಿಸಿಕೊಂಡಿರುವ ಮಾಲೀಕರು ನಾಲೆಗಳಿಗೆ ಕೊಳಚೆ ನೀರಿನ ಸಂಪರ್ಕ ಕಲ್ಪಸಿದ್ದಾರೆ. ರಾಜಾರೋಷವಾಗಿ ನಾಲೆಗೆ ಪೈಪ್ ಸಂಪರ್ಕ ಕಲ್ಪಿಸಿದ್ದರೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನಾಲೆ ಸಮೀಪದಲ್ಲಿರುವ ಹಲವು ಮನೆಗಳು ಸಂತೆಕಲಸಗೆರೆ, ಕ್ಯಾತುಂಗೆರೆ ಸೇರಿ ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುತ್ತವೆ. ಗ್ರಾ.ಪಂ ಅಧಿಕಾರಿಗಳು ಕೂಡ ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ.

‘ನಾಲೆಗೆ ತ್ಯಾಜ್ಯ ಬಿಸಾಡುವವರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಮುಂದೆ ದಂಡ ವಿಧಿಸಿ ನಾಲೆಗೆ ಕೊಳಚೆ ಹರಿಸದಂತೆ, ತ್ಯಾಜ್ಯ ಸುರಿಯದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಎಸ್‌.ಲೋಕೇಶ್‌ ಹೇಳಿದರು.

600 ಎಕರೆಗೆ ಒಬ್ಬನೇ ನೀರುಗಂಟಿ

‘600 ಎಕರೆ ಪ್ರದೇಶದಲ್ಲಿ ಹರಿಯುವ ನಾಲೆ ನೋಡಿಕೊಳ್ಳಲು ಒಬ್ಬನೇ ನೀರುಗಂಟಿ ನೇಮಿಸಲಾಗಿದೆ. ಆತನೊಬ್ಬನೇ ಎಲ್ಲವನ್ನೂ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಕಾವೇರಿ ನೀರಾವರಿ ನಿಗದಮ ಅಧೀಕ್ಷಕ ಎಂಜಿನಿಯರ್‌ ವಿಜಯ್‌ಕುಮಾರ್‌ ಹೇಳಿದರು.

‘ಜನರು ನಾಲೆಗೆ ತ್ಯಾಜ್ಯ ಸುರಿಯುತ್ತಿರುವ ಕಾರಣ ನೀರು ಹೊರಗೆ ಹರಿದು ಪೋಲಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಎಚ್ಚರವಹಿಸಬೇಕು. ನಾಲೆಗೆ ತ್ಯಾಜ್ಯ ಸುರಿಯದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT