ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಶಸ್ತ್ರಚಿಕಿತ್ಸೆಗೆ ತಿಂಗಳು ತಡ, ಪ್ರಾಣದ ಜೊತೆ ಚೆಲ್ಲಾಟ

ಮಿಮ್ಸ್‌ ಆವರಣದಲ್ಲಿ ಹೇಳುವವರಿಲ್ಲ ಕೇಳುವವರಿಲ್ಲ, ಪ್ರಾಣದ ಜೊತೆ ಚೆಲ್ಲಾಟ, ‘ಪ್ರಭಾರಿ’ ಆಡಳಿತದ ಅವ್ಯವಸ್ಥೆ
Last Updated 4 ಮೇ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಮಿಮ್ಸ್‌ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ 20 ದಿನದಿಂದ 1 ತಿಂಗಳವರೆಗೆ ಸಮಯ ನಿಗದಿ ಮಾಡುತ್ತಿರುವ ಕಾರಣ ರೋಗಿಗಳು ಜೀವ ಉಳಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ವಿಫಲರಾಗಿರುವ ವೈದ್ಯರು ಬಡವರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುವ ಅಪಘಾತ ಪ್ರಕರಣಗಳೂ ಸೇರಿದಂತೆ ಮಂಡ್ಯ, ರಾಮನಗರ, ಚಾಮರಾಜನರ ಜಿಲ್ಲೆಗಳ ಅಪಾರ ರೋಗಿಗಳು ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಆದರೆ ತಜ್ಞ ವೈದ್ಯರು ಖಾಲಿ ಇಲ್ಲ ಎಂದು ನೆಪ ಹೇಳುವ ಸಿಬ್ಬಂದಿ ಶಸ್ತ್ರಚಿಕಿತ್ಸೆಗೆ ತಿಂಗಳವರೆಗೆ ಸಮಯ ನಿಗದಿ ಮಾಡುತ್ತಾರೆ. ಪ್ರಾಣ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿರುವ ರೋಗಿಗಳ ಸಂಬಂಧಿಕರು ಖಾಸಗಿ ಅಥವಾ ಹೊರಜಿಲ್ಲೆಯ ಆಸ್ಪತ್ರೆಗೆ ತೆರಳುತ್ತಾರೆ.

ಸಾವು–ಬದುಕಿನ ನಡುವೆ ಹೋರಾಟ ನಡೆಸುವ ರೋಗಿಯನ್ನು ಸಂಬಂಧಿಕರು ಮಿಮ್ಸ್‌ ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ. ಆದರೆ ತಜ್ಞ ವೈದ್ಯರು ಸ್ಥಳದಲ್ಲೇ ಇರುವುದಿಲ್ಲ. ಪರಿಶೀಲನೆ ನಡೆಸುವ ವೈದ್ಯಕೀಯ ವಿದ್ಯಾರ್ಥಿಗಳು ‘ಇಲ್ಲಿ ತಜ್ಞವೈದ್ಯರಿಲ್ಲ, ತುರ್ತು ವೈದ್ಯಕೀಯ ಸೌಲಭ್ಯವಿಲ್ಲ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ’ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಇದರಿಂದಾಗಿ ಜಿಲ್ಲಾಸ್ಪತ್ರೆ ಇದ್ದೂ ಇಲ್ಲದಂತಿದೆ.

‘ಬೇರೆ ಕಡೆ ಕರೆದುಕೊಂಡು ಹೋಗಲಿ ಎಂಬ ಕಾರಣಕ್ಕಾಗಿಯೇ ತಡವಾಗಿ ಶಸ್ತ್ರಚಿಕಿತ್ಸೆ ಸಮಯ ನಿಗದಿ ಮಾಡುತ್ತಾರೆ. ವೈದ್ಯರು ಕೊಟ್ಟ ದಿನಾಂಕದವರೆಗೂ ಕಾಯುತ್ತಾ ಕುಳಿತರೆ ರೋಗಿಯ ಪ್ರಾಣ ಹೋಗುತ್ತದೆ. ಮಿಮ್ಸ್‌ ಆಸ್ಪತ್ರೆಯ ವೈದ್ಯರು ರೋಗಿಗಳ ಪ್ರಾಣದ ಜೊತೆ ಚೆಲ್ಲಾಡುತ್ತಿದ್ದಾರೆ’ ಎಂದು ಕೆ.ಆರ್‌.ಪೇಟೆಯ ಜಯರಾಮು ಆಕ್ರೋಶ ವ್ಯಕ್ತಪಡಿಸಿದರು.

‘ಮಿಮ್ಸ್‌ ಆಸ್ಪತ್ರೆಯ ವೈದ್ಯರಿಗೆ ಮಾನವೀಯತೆ ಮರೆಯಾಗಿದೆ. ನಮ್ಮ ಕಡೆಯ ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಎಷ್ಟೇ ಮನವಿ ಮಾಡಿದರೂ ತಿಂಗಳವರೆಗೆ ಕಾಯುವಂತೆ ತಿಳಿಸಿದರು. ಜನಪ್ರತಿನಿಧಿಗಳ ಮಾತಿಗೂ ಬೆಲೆ ಇಲ್ಲದಂತಾಗಿದೆ, ಇನ್ನು ಸಾಮಾನ್ಯ ಜನರ ಪಾಡೇನು’ ಎಂದು ನಗರಸಭೆ 1ನೇ ವಾರ್ಡ್‌ ಸದಸ್ಯ ನಾಗೇಶ್‌ ಪ್ರಶ್ನಿಸಿದರು.

ಪ್ರಭಾರಿಗಳ ಆಡಳಿತ: ಮಿಮ್ಸ್‌ನಲ್ಲಿ ನಿರ್ದೇಶಕ (ಎಂಎಸ್‌), ವೈದ್ಯಕೀಯ ಅಧೀಕ್ಷಕ (ಎಂಎಸ್‌) ಹಾಗೂ ನಿವಾಸಿ ವೈದ್ಯಕೀಯ ಅಧಿಕಾರಿ (ಆರ್‌ಎಂಒ) ಹುದ್ದೆಗಳಿಗೆ ಕಾಯಂ ನೇಮಕಾತಿಯಾಗದಿರುವುದೇ ಮಿಮ್ಸ್ ಆಸ್ಪತ್ರೆ ಆಡಳಿತ ಹಾಳಾಗಲು ಕಾರಣವಾಗಿದೆ.

ಸದ್ಯ ಪ್ರಭಾರಿ ನಿರ್ದೇಶಕರಾಗಿರುವ ಡಾ.ಎಂ.ಆರ್‌.ಹರೀಶ್‌ ಅವರೇ ಪ್ರಭಾರಿ ವೈದ್ಯಕೀಯ ಅಧೀಕ್ಷಕರಾಗಿದ್ದಾರೆ. ಜೊತೆಗೆ ಚರ್ಮ ರೋಗ ವಿಭಾಗದ ಮುಖ್ಯಸ್ಥ ಹೆದ್ದೆಯನ್ನೂ ಅವರೇ ನಿರ್ವಹಿಸುತ್ತಿದ್ಧಾರೆ. ಒಬ್ಬ ವ್ಯಕ್ತಿ ಮೂರು ಹುದ್ದೆ ನಿರ್ವಹಿಸುತ್ತಿದ್ದು ಯಾವುದಕ್ಕೂ ನ್ಯಾಯ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವಿದೆ.

ಅನುಚಿತ ವರ್ತನೆ: ಆಸ್ಪತ್ರೆ ಆವರಣದಲ್ಲಿ ವಾರ್ಡ್‌ ಸಿಬ್ಬಂದಿ ಸೇರಿ ಇತರ ನೌಕರರು ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರ ಮೇಲೆ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ನೂರಾರು ದೂರುಗಳಿವೆ. ಸಿಬ್ಬಂದಿಗಳು ರೋಗಿಗಳಲು ಹಾಗೂ ಸಂಬಂಧಿಕರನ್ನು ಏಕವಚನದಲ್ಲಿ ನಿಂದಿಸುತ್ತಾರೆ ಎಂಬ ಆರೋಪವಿದೆ.

‘ಸಿಬ್ಬಂದಿಯ ವರ್ತನೆ ವಿರುದ್ಧ ಹಲವು ಬಾರಿ ನಿರ್ದೇಶಕರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಆಸ್ಪತ್ರೆ ಆವರಣದಲ್ಲಿ ಹೇಳುವವರು, ಹೇಳುವವರೇ ಇಲ್ಲವಾಗಿದ್ದಾರೆ’ ಎಂದು ಮಂಡ್ಯದ ರಮೇಶ್‌ ತಿಳಿಸಿದರು.

*
ಸಹಿ ಮಾಡಿ ತೆರಳುವ ವೈದ್ಯರು
ಮಿಮ್ಸ್ ಆಸ್ಪತ್ರೆ ವೈದ್ಯಕೀಯ ವಿದ್ಯಾರ್ಥಿಗಳಿಂದ ನಡೆಯುತ್ತಿದ್ದು ತಜ್ಞ ವೈದ್ಯರು ಸಹಿ ಮಾಡಿ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ತೆರಳುತ್ತಾರೆ. ಕರ್ತವ್ಯದ ಅವಧಿಯಲ್ಲಿ ಖಾಸಗಿ ಅಭ್ಯಾಸ ಮಾಡತ್ತಿದ್ದಾರೆ ಎಂಬ ಆರೋಪ ಮೊದಲಿನಿಂದಲೂ ಇದೆ.

‘ಬಯೋಮೆಟ್ರಿಕ್‌ ವ್ಯವಸ್ಥೆ ಇದ್ದರೂ ಹಾಜರಾತಿ ಪುಸ್ತಕದ ಸಹಿಯನ್ನೇ ಪರಿಣಗಣೆಗೆ ತೆಗೆದುಕೊಳ್ಳಲಾಗುತ್ತಿದೆ. 1 ದಿನ ಬಂದು ನಾಲ್ಕೈದು ದಿನಗಳವರೆಗೆ ಸಹಿ ಮಾಡಿ ಹೋಗುತ್ತಾರೆ. ಬಯೋಮೆಟ್ರಿಕ್‌ ವ್ಯವಸ್ಥೆ ನೆಪಕ್ಕಷ್ಟೇ ಇದೆ’ ಎಂದು ಕಿರಿಯ ವೈದ್ಯರೊಬ್ಬರು ಮಾಹಿತಿ ನೀಡಿದರು.

*
ಮೂಳೆ ವಿಭಾಗದ ಶಸ್ತ್ರಚಿಕಿತ್ಸೆಗಳು ತಡವಾಗುತ್ತಿವೆ, ನರ ಸಂಬಂಧಿ ತಜ್ಞರು ನಮ್ಮ ಆಸ್ಪತ್ರೆಯಲ್ಲಿ ಇಲ್ಲದ ಕಾರಣ ಬೇರೆ ಆಸ್ಪತ್ರೆಗಳಿಗೆ ಕಳುಹಿಸುವುದು ಅನಿವಾರ್ಯವಾಗಿದೆ.
–ಡಾ.ಎಂ.ಆರ್‌.ಹರೀಶ್‌, ಮಿಮ್ಸ್‌ ಪ್ರಭಾರ ನಿರ್ದೇಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT