ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ 2024: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲೂ ಕೇಸರಿ ಪಡೆ

ಜೆಡಿಎಸ್‌ – ಬಿಜೆಪಿ ಮೈತ್ರಿ ನಂತರ ಸಂಘ ಪರಿವಾರದ ಚಟುವಟಿಕೆ ಮುನ್ನೆಲೆಗೆ
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ಮಂಡ್ಯ: ಕುವೆಂಪು ಪ್ರೇರಿತ ಪ್ರಗತಿಪರ ಚಿಂತನೆ, ರೈತ ಹೋರಾಟಕ್ಕೆ ಪ್ರಸಿದ್ಧಿ ಪಡೆದಿದ್ದ ಸಕ್ಕರೆ ಜಿಲ್ಲೆ ಮಂಡ್ಯ ಇತ್ತೀಚೆಗೆ ಧರ್ಮ ಪ್ರೇರಿತ ವಿಚಾರಗಳತ್ತ ಹೊರಳುತ್ತಿದೆ. ಜಿಲ್ಲೆಯ ಹಳ್ಳಿಗಳಲ್ಲೂ ಕೇಸರಿ ಪಡೆ ಹೆಚ್ಚುತ್ತಿದ್ದು ಯುವಜನರು ಹಸಿರು ಶಾಲು ಬದಲಾಗಿ ಕೇಸರಿ ಟವೆಲ್‌ ಧರಿಸಿ ಓಡಾಡುತ್ತಿದ್ದಾರೆ. ಈ  ಚಟುವಟಿಕೆಗಳಿಗೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯ ನಂತರ ಬಲ ಬಂದಿದೆ ಎಂದು ಚರ್ಚೆಯಾಗುತ್ತಿದೆ.

ಜಿಲ್ಲೆಯ ವಿವಿಧೆಡೆ ಮೊದಲಿನಿಂದಲೂ ಆರ್‌ಎಸ್‌ಎಸ್‌, ಬಜರಂಗ ದಳ, ವಿಎಚ್‌ಪಿ ಚಟುವಟಿಕೆಗಳು ನಡೆಯುತ್ತಿವೆ. ಆದರೆ, ಇವುಗಳಿಗೆ ಬಲ ಇರಲಿಲ್ಲವಾದ್ದರಿಂದ ಮುನ್ನೆಲೆಗೆ ಬಂದಿರಲಿಲ್ಲ. ಆದರೆ ಜೆಡಿಎಸ್‌ ಈಗ ಬಿಜೆಪಿಯ ಮಿತ್ರಪಕ್ಷವಾದ್ದರಿಂದ ಸಂಘ ಪರಿವಾರದ ಚಟುವಟಿಕೆಗಳು ರಾಜಕೀಯ ರೂಪ ಪಡೆಯುತ್ತಿದ್ದು ಚರ್ಚೆಗೆ ಗ್ರಾಸವಾಗುತ್ತಿದೆ.

ಇದರ ಪರಿಣಾಮದಿಂದಾಗಿಯೇ ಪಾಂಡವಪುರ ಪಟ್ಟಣದಲ್ಲಿ ಆರ್‌ಎಸ್‌ಎಸ್‌ನ ದೊಡ್ಡ ಕಚೇರಿ ತಲೆ ಎತ್ತಿದೆ. ಜೆಡಿಎಸ್‌ ಮುಖಂಡರೇ ಸ್ವಂತ ಖರ್ಚಿನಿಂದ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರದ ಧ್ವಜಸ್ಥಂಭ ನಿರ್ಮಾಣ, ಬೃಹತ್‌ ಹನುಮ ಧ್ವಜಾರೋಹಣ ಮುಂತಾದ ಘಟನೆಗಳು ಬಿಜೆಪಿ–ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಸದ್ಯ ಕೆರಗೋಡು ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಸರಣಿ ರಾಮಮಂದಿರಗಳು ಉದ್ಘಾಟನೆಯಾಗುತ್ತಿವೆ. ಜೆಡಿಎಸ್‌ ಮುಖಂಡರ ನೇತೃತ್ವದಲ್ಲೇ ಪ್ರಾಣ ಪ್ರತಿಷ್ಠಾಪನೆಯೂ ನಡೆಯುತ್ತಿದೆ. ಜ.22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡ ದಿನವೇ ಹಲವು ರಾಮಮಂದಿರಗಳು ಲೋಕಾರ್ಪಣೆಗೊಂಡಿವೆ.

ಕಾರ್ಯಕರ್ತರ ಬೆಂಬಲ: ಪ್ರತಿ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಕಾಂಗ್ರೆಸ್‌– ಜೆಡಿಎಸ್‌ ಪಕ್ಷಗಳು ತೊಡೆತಟ್ಟಿ ನಿಲ್ಲುತ್ತಿದ್ದವು. ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಿದ್ದರು. 2019ರ ವಿಧಾನಸಭೆ ಉಪ ಚುನಾವಣೆ ಹೊರತುಪಡಿಸಿ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿಲ್ಲ. ಜೆಡಿಎಸ್‌ಗೆ ಹಳ್ಳಿಹಳ್ಳಿಗಳಲ್ಲಿ ಕಾರ್ಯಕರ್ತರಿದ್ದು ಸಂಘಟನೆ ಬಲವಾಗಿದೆ. ಮೈತ್ರಿಯಿಂದಾಗಿ ಈ ಬಲ ಬಿಜೆಪಿಗೂ ಸಿಕ್ಕಿದ್ದು ಸಂಘ ಪರಿವಾರದ ಮುಖಂಡರು ತಮ್ಮ ಚಟುವಟಿಕೆ ವಿಸ್ತರಿಸುತ್ತಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಹೇಳುತ್ತಾರೆ.

‘ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ಸಮುದಾಯಗಳ ಜನರು ಅಣ್ಣ–ತಮ್ಮಂದಿರ ರೀತಿಯಲ್ಲಿ ಬದುಕುತ್ತಿದ್ದೇವೆ. ನಮ್ಮ ಜಿಲ್ಲೆಗೆ ಪೆರಿಯಾರ್‌ ಅವರಂತಹ ಪ್ರಗತಿಪರರು ಬಂದು ಹೋಗಿದ್ದಾರೆ. ಆದರೆ ಇತ್ತೀಚೆಗೆ ಯುವಜನರ ದಾರಿ ತಪ್ಪಿಸುವ ಚಟುವಟಿಕೆಗಳು ಮುನ್ನೆಲೆಗೆ ಬಂದಿರುವುದು ನೋವಿನ ಸಂಗತಿ’ ಎಂದು ದಸಂಸ ಮುಖಂಡ ಗುರುಪ್ರಸಾದ್‌ ಕೆರಗೋಡು ಹೇಳಿದರು.

‘ಕಾನೂನು– ಸುವ್ಯವಸ್ಥೆಗೆ ಧಕ್ಕೆ?’

‘ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಮೂಡಲಬಾಗಿಲು ಹನುಮಾನ್‌ ದೇವಾಲಯ ಸೇರಿ ಹಲವು ಧರ್ಮಪ್ರೇರಿತ ವಿಚಾರಗಳು ಮುನ್ನೆಲೆಗೆ ಬರಲಿದ್ದು ಕಾನೂನು– ಸುವ್ಯವಸ್ಥೆಗೆ ಧಕ್ಕೆಯಾಗಲಿದೆ. ಜೆಡಿಎಸ್‌ ಬೆಂಬಲದೊಂದಿಗೆ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಯುವಜನರನ್ನು ಹಾದಿ ತಪ್ಪಿಸುವ ಸಾಧ್ಯತೆ ಇದೆ. ಪೊಲೀಸರು ಇದನ್ನು ತಡೆಯಬೇಕು’ ಎಂದು ಭಾರತ ವಕೀಲರ ವಕೀಲರ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ವಿಶ್ವನಾಥ್‌ ಹೇಳಿದರು.

ರಾಜಕೀಯವಾಗಿ ಅಸಮರ್ಥರಾದ ಬಿಜೆಪಿ ನಾಯಕರು ಭಾವನಾತ್ಮಕ ವಿಚಾರಗಳನ್ನಿಟ್ಟುಕೊಂಡು ಹೃದಯವಂತರಾದ ಮಂಡ್ಯ ಜನರನ್ನು ಖೆಡ್ಡಾಗೆ ಕೆಡವಲು ಯತ್ನಿಸುತ್ತಿದ್ದಾರೆ
-ದೇವನೂರ ಮಹಾದೇವ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT